ದಾಳಿಂಬೆ ಆದಾಯ ತರಬಲ್ಲ ಬೆಳೆ; ಕೃಷಿ, ವಹಿವಾಟಿನಲ್ಲಿ ತೊಡಗಬೇಕೆ, ಇಲ್ಲಿದೆ ತರಬೇತಿ

ದಾಳಿಂಬೆ ಆದಾಯ ತರಬಲ್ಲ ಬೆಳೆ; ಕೃಷಿ, ವಹಿವಾಟಿನಲ್ಲಿ ತೊಡಗಬೇಕೆ, ಇಲ್ಲಿದೆ ತರಬೇತಿ

ದಾಳಿಂಬೆ ಆದಾಯ ತರಬಲ್ಲ ಬೆಳೆ; ಕೃಷಿ, ವಹಿವಾಟಿನಲ್ಲಿ ತೊಡಗಬೇಕೆ, ಇಲ್ಲಿದೆ ತರಬೇತಿ

ದಾಳಿಂಬೆ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಪ್ರತಿ ವರ್ಷವೂ ಉತ್ತಮ ಇಳುವರಿಯೊಂದಿಗೆ ಆದಾಯ ಪಡೆಯುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಕರ್ನಾಟಕದ ಉತ್ತರ ಕರ್ನಾಟಕ ಮಾತ್ರವಲ್ಲದೇ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲೂ ದಾಳಿಂಬೆ ಜನಪ್ರಿಯ ಬೆಳೆಯಾಗಿ ರೂಪುಗೊಂಡಿದೆ. ಈ ಬೆಳೆ ಉತ್ಪಾದನೆ, ಮಾರಾಟದಲ್ಲಿ ತೊಡಗಿಸಿಕೊಳ್ಳುವವರಿಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆಯಲ್ಲಿ ತರಬೇತಿಯೂ ಕೂಡ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವವರು ದಾಳಿಂಬೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶನವೂ ಸಿಕ್ಕಂತೆ ಆಗಲಿದೆ.

ದಾಳಿಂಬೆಯನ್ನು ತಂಪಾದ, ಪುನಶ್ಚೇತನಗೊಳಿಸುವ ಹಣ್ಣಿನ ರಸಕ್ಕಾಗಿ ಜನ ಇಷ್ಟಪಡುತ್ತಾರೆ. ಅದನ್ನು ಹೆಚ್ಚಾಗಿ ಕೈ ತೋಟದಲ್ಲಿ ಬೆಳೆಯಲಾಗುತ್ತಿದ್ದರೂ ಚೆನ್ನಾಗಿ ಬೆಳೆಸಿದಲ್ಲಿ ಅತ್ಯುತ್ತಮ ಆದಾಯ ಕೊಡಬಲ್ಲದು. , ಬಾಗಲಕೋಟೆ ಜಿಲ್ಲೆಯ ಕಲಾದಗಿ. ವಿಜಯಪುರ, ರಾಯಚೂರು, ಕಲಬುರಗಿ, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ ಮುಂತಾದ ಪ್ರದೇಶಗಳು ದಾಳಿಂಬೆ ಬೆಳೆಯಲು ಅತೀ ಸೂಕ್ತ. ಹೆಚ್ಚು ಮಳೆ ಬೀಳುವಪ್ರದೇಶಗಳು ಈ ಬೆಳೆಗೆ ಯೋಗ್ಯವಲ್ಲ.

ದಾಳಿಂಬೆಯನ್ನು ಹಲವಾರು ವಿಧದ ಮಣ್ಣುಗಳಲ್ಲಿ ಬೆಳೆಯಬಹುದು. ಮರಳು ಮಿಶ್ರಿತ ಗೋಡು ಮಣ್ಣಿನಿಂದ ಹಿಡಿದು ಆಳವಾದ ಕಪ್ಪು ಭೂಮಿಯಲ್ಲಿ ದಾಳಿಂಬೆ ಬೆಳೆಯಬಹುದು. ಆಳವಾದ ಗೋಡು ಮಣ್ಣು ಈ ಬೆಳೆಗೆ ಬಹಳ ಸೂಕ್ತ. ‌

ಈ ಬೆಳೆ ಸ್ವಲ್ಪ ಮಟ್ಟಿಗೆ ಮಣ್ಣಿನಲ್ಲಿರುವ ಜೌಳಿನಾಂಶವನ್ನು ಸಹ ಸಹಿಸಿಕೊಳ್ಳಬಹುದು. ಹವಾಗುಣ ಮತ್ತು ನಾಟಿ ಕಾಲ: ಈ ಬೆಳೆಗೆ ಬೇಸಿಗೆಯಲ್ಲಿ ಹೆಚ್ಚು ಉಷ್ಣಾಂಶವಿರುವ ಮತ್ತು ಚಳಿಗಾಲದಲ್ಲಿ ತಂಪಾಗಿರುವ ಹವಾಗುಣ ಬೇಕು. ಬೇಸಿಗೆಯಲ್ಲಿ ಹೆಚ್ಚು ಉಷ್ಣಾಂಶದಿಂದ ಕೂಡಿದ ವಾತಾವರಣವಿರುವ ಕಡೆ ಉತ್ತಮ ದರ್ಜೆಯ ಹಣ್ಣುಗಳು ದೊರೆಯುತ್ತವೆ. ದಾಳಿಂಬೆ ಗಿಡಕ್ಕೆ ಶುಷ್ಕ ವಾತಾವರಣವನ್ನು ತಡೆದುಕೊಳ್ಳುವ ಶಕ್ತಿಯಿದೆ. ಆದರೂ ನೀರಾವರಿ ಸೌಕರ್ಯವಿರುವ ಕಡೆ ಉತ್ತಮ ಇಳುವರಿ ಪಡೆಯಬಹುದು. ಜೂನ್-ಜುಲೈ ತಿಂಗಳುಗಳು ನಾಟಿ ಮಾಡಲು ಸರಿಯಾದ ಕಾಲ.

ಕರ್ನಾಟಕದಲ್ಲಿ ದಾಳಿಂಬೆ ಉತ್ಪಾದನೆ

ಪೌಷ್ಟಿಕಾಂಶ, ರುಚಿ, ಸಂಸ್ಕರಣಾ ಸಾಧ್ಯತೆ ಹಾಗೂ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆಯಿಂದಾಗಿ ದಾಳಿಂಬೆ ಬೆಳೆ ರೈತರಿಗೆ ಉತ್ತಮ ಆದಾಯದ ಅವಕಾಶವನ್ನು ಒದಗಿಸುತ್ತದೆ. ಭಾರತವು ವಿಶ್ವದ ಪ್ರಮುಖ ದಾಳಿಂಬೆ ಉತ್ಪಾದಕ ರಾಷ್ಟ್ರವಾಗಿದ್ದು, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಪ್ರಮುಖ ಉತ್ಪಾದಕ ರಾಜ್ಯಗಳಾಗಿವೆ. 2023–24ರ ಅಂತಿಮ ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 2.235 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 28.42 ಲಕ್ಷ ಟನ್ ದಾಳಿಂಬೆ ಉತ್ಪಾದನೆಯಾಗಿದೆ.

ಕರ್ನಾಟಕವು ದೇಶದ ಪ್ರಮುಖ ದಾಳಿಂಬೆ ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿದೆ. 2023-24 ರ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಸುಮಾರು 22.97 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 2.41 ಲಕ್ಷ ಟನ್ ದಾಳಿಂಬೆ ಉತ್ಪಾದನೆಯಾಗಿದ್ದು, ಸರಾಸರಿ ಉತ್ಪಾದಕತೆ ಸುಮಾರು 10.5 ಟನ್/ಹೆಕ್ಟೇರ್ ಆಗಿದೆ.

ಕರ್ನಾಟಕದ ಚಿತ್ರದುರ್ಗ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ದಾಳಿಂಬೆ ಬೆಳೆಯ ಪ್ರಮುಖ ಪ್ರದೇಶಗಳಾಗಿವೆ. ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಮಾಹಿತಿಯಲ್ಲಿಯೂ ಚಿತ್ರದುರ್ಗ, ಬಳ್ಳಾರಿ, ತುಮಕೂರು, ವಿಜಯಪುರ ಮತ್ತು ಕೊಪ್ಪಳ ಪ್ರಮುಖ ದಾಳಿಂಬೆ ಬೆಳೆಯುವ ಪ್ರದೇಶಗಳೆಂದು ಉಲ್ಲೇಖಿಸಲಾಗಿದೆ.

2023–24ರ ಕರ್ನಾಟಕದ ಜಿಲ್ಲಾ ಅಂಕಿಅಂಶಗಳಲ್ಲಿ ವಿಜಯಪುರದಲ್ಲಿ 4178 ಹೆಕ್ಟೇರ್ ಪ್ರದೇಶದಿಂದ 42294ಟನ್, ಚಿತ್ರದುರ್ಗದಲ್ಲಿ 3554 ಹೆಕ್ಟೇರ್‌ನಿಂದ 38376 ಟನ್, ಬಳ್ಳಾರಿಯಲ್ಲಿ 1063 ಹೆಕ್ಟೇರ್‌ನಿಂದ 30457 ಟನ್, ಬಾಗಲಕೋಟೆಯಲ್ಲಿ 1943 ಹೆಕ್ಟೇರ್‌ನಿಂದ 44092 ಟನ್ ಮತ್ತು ಚಿಕ್ಕಬಳ್ಳಾಪುರದಲ್ಲಿ 1104 ಹೆಕ್ಟೇರ್‌ನಿಂದ 17545 ಟನ್ ಉತ್ಪಾದನೆಯಾಗಿದೆ.

ಮಾರುಕಟ್ಟೆ ಮತ್ತು ರಫ್ತು ಅವಕಾಶ

ದಾಳಿಂಬೆಗೆ ತಾಜಾ ಹಣ್ಣಿನ ಮಾರುಕಟ್ಟೆಯ ಜೊತೆಗೆ ಜ್ಯೂಸ್, ಸ್ಕ್ವಾಷ್, ಜ್ಯಾಂ, ಸಿರಪ್, ಅರಿಲ್, ಜ್ಯೂಸ್ ಕಾನ್ಸೆಂಟ್ರೇಟ್ ಮತ್ತು ಇತರ ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ತಮ ಅವಕಾಶವಿದೆ. ಗುಣಮಟ್ಟದ ಹಣ್ಣು ಪಡೆಯಲು ಸರಿಯಾದ ಕೊಯ್ಲು ಹಂತ, ಗ್ರೇಡಿಂಗ್, ಪ್ಯಾಕಿಂಗ್, ಪೂರ್ವ-ತಂಪುಗೊಳಿಸುವಿಕೆ ಮತ್ತು ಶೀತ ಸರಪಳಿ ನಿರ್ವಹಣೆ ಅಗತ್ಯ. ಭಾರತವು ಮಧ್ಯಪ್ರಾಚ್ಯ, ಯುರೋಪ್ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ತಾಜಾ ದಾಳಿಂಬೆಯನ್ನು ರಫ್ತು ಮಾಡುತ್ತಿದೆ.

ವಿಶೇಷವಾಗಿ ಚಿತ್ರದುರ್ಗ ದಾಳಿಂಬೆ ಕ್ಲಸ್ಟರ್ ಅನ್ನು ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಕ್ಲಸ್ಟರ್ ಅಭಿವೃದ್ದಿ ಕಾರ್ಯಕ್ರಮ ಅಡಿಯಲ್ಲಿ ಗುರುತಿಸಿರುವುದು ಕರ್ನಾಟಕದ ದಾಳಿಂಬೆ ವಲಯದ ವಾಣಿಜ್ಯ ಮತ್ತು ರಫ್ತು ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ.

ವೈಜ್ಞಾನಿಕ ಬೇಸಾಯ + ಗುಣಮಟ್ಟದ ಉತ್ಪಾದನೆ + ಸೂಕ್ತ ಕೊಯ್ಲು ಮತ್ತು ಪ್ಯಾಕಿಂಗ್ + ಮಾರುಕಟ್ಟೆ ಮಾಹಿತಿ = ದಾಳಿಂಬೆಯಲ್ಲಿ ಹೆಚ್ಚಿನ ಲಾಭ ಎನ್ನುವುದು ಕೃಷಿ ತಜ್ಞರು ನೀಡುವ ಮಾಹಿತಿ.

ಹವಾಮಾನ, ಮಣ್ಣು ಮತ್ತು ನೀರಿನ ಲಭ್ಯತೆಗೆ ಅನುಗುಣವಾಗಿ ವೈಜ್ಞಾನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಮಾರುಕಟ್ಟೆ ಬೇಡಿಕೆಗೆ ತಕ್ಕ ಗುಣಮಟ್ಟದ ಹಣ್ಣು ಉತ್ಪಾದಿಸುವುದು ಇಂದಿನ ದಾಳಿಂಬೆ ಬೆಳೆಗಾರರ ಪ್ರಮುಖ ಗುರಿಯಾಗಬೇಕು.

ಈ ಹಿನ್ನೆಲೆಯಲ್ಲಿ ದಾಳಿಂಬೆ ಬೆಳೆಗಾರರಿಗೆ ವೈಜ್ಞಾನಿಕ ಉತ್ಪಾದನಾ ತಂತ್ರಜ್ಞಾನಗಳು, ಮಾರುಕಟ್ಟೆ ಮಾಹಿತಿ, ರಫ್ತು ಸಾಧ್ಯತೆಗಳು ಮತ್ತು ಪ್ರಗತಿಪರ ರೈತರ ತೋಟಗಳಿಗೆ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಜಿಕೆವಿಕೆಯಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ತರಬೇತಿ ಮಾಹಿತಿಗೆ: 9448540640

( ಲೇಖಕರು: ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿ ತಜ್ಞರು)

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ