
ನಾಪೋಕ್ಲು: ಬೇತು ಇಂದಿರಾನಗರ ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ
ನಾಪೋಕ್ಲು: ಇಲ್ಲಿನ ಬೇತು ಇಂದಿರಾನಗರ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಪೋಷಣ್ ಅಭಿಯಾನ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸ್ಥಳೀಯವಾಗಿ ತಯಾರಿಸಿದ ವಿವಿಧ ಮಾದರಿಯ ಪೌಷ್ಟಿಕಾಂಶಯುಕ್ತ ಖಾದ್ಯಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಾಪೋಕ್ಲು ವೃತ್ತದ ಮೇಲ್ವಿಚಾರಕಿ ಶೀಲಾ ಅಶೋಕ್, ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಆಶಾ ಕಾರ್ಯಕರ್ತೆ ಆಶಾ ಅಪ್ಪಣ್ಣ, ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮ ಉದ್ಘಾಟಿಸಿದರು.
ಅಭಿಯಾನದ ಮುಖ್ಯ ಉದ್ದೇಶದ ಬಗ್ಗೆ ತಿಳಿಸಿದ ಮೇಲ್ವಿಚಾರಕಿ ಶೀಲಾ ಅಶೋಕ್, ಪ್ರತಿಯೊಬ್ಬರೂ ತಮ್ಮ ದೈನಂದಿನ ಆಹಾರದಲ್ಲಿ ಸ್ಥಳೀಯವಾಗಿ ದೊರೆಯುವ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಮನವಿ ಮಾಡಿದರು.
ನಾಪೋಕ್ಲು ವೃತ್ತದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು ಉಪಸ್ಥಿತರಿದ್ದರು.