
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡರ್ ಮೇಲೆ ಹಲ್ಲೆ, ಕೊಲೆ ಯತ್ನ
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಾರ್ಡರ್ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ ಐವರು ಕೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಜರಂಗದಳದ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ಮಹಮ್ಮದ್ ಮುಜಾಮಿಲ್, ಅಬ್ದುಲ್ ಶಫಾನ್, ಮಹಮ್ಮದ್ ರಿಜ್ವಾನ್, ನಯಾಜ್ ಮತ್ತು ಕಲಂದರ್ ಶಫಿ ವಿರುದ್ಧ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
‘ಅವಧಿಪೂರ್ವ ಬಿಡುಗಡೆಯಾಗುವ ಕೈದಿಗಳ ಹೆಸರು ನೋಂದಣಿಗೆಂದು ಮಂಜುನಾಥ್ ಅವರು ಸೆ.2ರಂದು ಬೆಳಿಗ್ಗೆ 11.30ರ ಸುಮಾರಿಗೆ ಕೈದಿಗಳ ಬ್ಯಾರಕ್‌ಗೆ ತೆರಳಿದ್ದರು. ಆಗ ಮಂಜುನಾಥ್ ಅವರನ್ನು ಆರೋಪಿಗಳು ನಿಂದಿಸಿ ಕೊಠಡಿ ಸಂಖ್ಯೆ 4ಕ್ಕೆ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ. ಬಳಿಕ, ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಯತ್ನ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಬ್ಯಾರಕ್ ಒಳಗೆ ಜೋರು ಗಲಾಟೆ ನಡೆಯುತ್ತಿರುವುದನ್ನು ಗಮನಿಸಿದ್ದ ಜೈಲಿನ ಇತರೆ ಸಿಬ್ಬಂದಿ, ಮಂಜುನಾಥ್ ಅವರ ರಕ್ಷಣೆಗೆ ಧಾವಿಸಿದ್ದರು’ ಎಂದು ಮೂಲಗಳು ಹೇಳಿವೆ.
‘ತಿಂಗಳ ಹಿಂದೆ ಭದ್ರತಾ ವಿಭಾಗದಿಂದ ಅನೆಕ್ಸ್–1ಗೆ ಕೆಲವು ಕೈದಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಈ ವೇಳೆ ಕೈದಿಗಳ ವಸ್ತುಗಳನ್ನು ಮಂಜುನಾಥ್ ತಪಾಸಣೆ ಮಾಡಿದ್ದರು. ಹೆಚ್ಚುವರಿ ವಸ್ತುಗಳನ್ನು ಕೊಂಡೊಯ್ಯಲು ಅವಕಾಶ ನೀಡಿರಲಿಲ್ಲ. ಇದೇ ವಿಚಾರಕ್ಕೆ ಆರೋಪಿಗಳು ಹಾಗೂ ಜೈಲಿನ ಸಿಬ್ಬಂದಿಯ ನಡುವೆ ಅಂದು ವಾಗ್ವಾದ ನಡೆದಿತ್ತು. ಕೈದಿಗಳ ಅಕ್ರಮ ಚಟುವಟಿಕೆಗಳ ಬಗ್ಗೆಯೂ ಅಧಿಕಾರಿಗಳಿಗೆ ವಾರ್ಡರ್ ತಿಳಿಸುತ್ತಿದ್ದರು. ಮಂಜುನಾಥ್ ವಿರುದ್ಧ ಕೈದಿಗಳು ದ್ವೇಷ ಸಾಧಿಸಿ ಹಲ್ಲೆ ನಡೆಸಿದ್ದಾರೆ’ ಎಂದು ತಿಳಿಸಿವೆ.
ಪ್ರಕರಣ ದಾಖಲಿಸಿಕೊಂಡಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-4-1136226139