ಉಡುಪಿ| ಭತ್ತ ಬೆಳೆಗೆ ಬಿಸಿಲಿನ ಬರೆ: ತೆನೆಕಟ್ಟುವ ಹೊತ್ತಿನಲ್ಲೇ ಕೈಕೊಟ್ಟ ಮಳೆ

ಉಡುಪಿ| ಭತ್ತ ಬೆಳೆಗೆ ಬಿಸಿಲಿನ ಬರೆ: ತೆನೆಕಟ್ಟುವ ಹೊತ್ತಿನಲ್ಲೇ ಕೈಕೊಟ್ಟ ಮಳೆ

ಉಡುಪಿ| ಭತ್ತ ಬೆಳೆಗೆ ಬಿಸಿಲಿನ ಬರೆ: ತೆನೆಕಟ್ಟುವ ಹೊತ್ತಿನಲ್ಲೇ ಕೈಕೊಟ್ಟ ಮಳೆ

ಉಡುಪಿ: ಸೆಪ್ಟೆಂಬರ್ ತಿಂಗಳಿನಲ್ಲೇ ಬಿಸಿಲಿನ ಝಳ ಏರಿಕೆಯಾಗಿರುವುದು, ಈ ಬಾರಿ ಮಳೆ ಕೊರತೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿ ಭತ್ತದ ಕೃಷಿ ಮಾಡಿದ ರೈತರನ್ನು ಕಂಗಾಲಾಗಿಸಿದೆ.

ಸೆಪ್ಟೆಂಬರ್ ತಿಂಗಳ ಆರಂಭದಿಂದಲೇ ಮಳೆ ನಿಂತಿರುವುದು ಮತ್ತು ಬಿಸಿಲಿನ ವಾತಾವರಣ ಮುಂದುವರಿದಿರುವುದು ಎಂ.ಒ.4 ತಳಿಯ ಭತ್ತದ ಬೆಳೆಗೆ ಭಾರಿ ಏಟು ನೀಡಿದೆ ಎನ್ನುತ್ತಾರೆ ರೈತರು.

ಜಿಲ್ಲೆಯಲ್ಲಿ ಬಹುತೇಕ ರೈತರು ಎಂ.ಒ.4 ತಳಿಯ ಭತ್ತವನ್ನೇ ಬೆಳೆಯುತ್ತಿದ್ದು, ಈ ತಳಿಯಲ್ಲಿ ಭತ್ತದ ತೆನೆ ಹೊರಬರುವ ಸಂದರ್ಭದಲ್ಲಿ ಗದ್ದೆಯಲ್ಲಿ ನೀರಿರಬೇಕಾಗುತ್ತದೆ. ಅಷ್ಟೇ ಅಲ್ಲದೆ ಹದವಾಗಿ ಮಳೆಯೂ ಬಂದರೆ ಉತ್ತಮ ಇಳುವರಿ ಬರುತ್ತದೆ. ಆದರೆ ಈ ಬಾರಿ ಸೆಪ್ಟೆಂಬರ್ ತಿಂಗಳಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದು ಇಳುವರಿ ಮೇಲೆ ಪರಿಣಾಮ ಬೀರಲಿದೆ ಎಂದೂ ಹೇಳುತ್ತಾರೆ.

ಜೂನ್, ಜುಲೈ ತಿಂಗಳಲ್ಲಿ ಮಳೆ ಕೊರತೆಯಿಂದಾಗಿ ಈ ಬಾರಿ ಭತ್ತದ ಕೃಷಿ ಚಟುವಟಿಕೆಯು ಒಂದು ತಿಂಗಳು ತಡವಾಗಿ ಆರಂಭವಾಗಿತ್ತು. ಆಗಸ್ಟ್ ಆರಂಭದಲ್ಲಿ ಮಳೆ ಸುರಿದಿರುವುದು ಭತ್ತದ ಕೃಷಿಗೆ ಅನುಕೂಲವಾಗಿತ್ತಾದರೂ ಮತ್ತೆ ಮಳೆ ಕೈಕೊಟ್ಟಿರುವುದು ಪ್ರತಿಕೂಲವಾಗಿ ಬಾಧಿಸಿದೆ.

ಜಿಲ್ಲೆಯಲ್ಲಿ ಈ ವರ್ಷ 37,742 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಗುರಿ ಹೊಂದಲಾಗಿತ್ತು, ಅದರಲ್ಲಿ 27,673 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, 73ರಷ್ಟು ಮಾತ್ರ ಗುರಿ ಸಾಧನೆಯಾಗಿದೆ ಎನ್ನುತ್ತವೆ ಕೃಷಿ ಇಲಾಖೆಯ ಮೂಲಗಳು.

ಜೂನ್ ತಿಂಗಳಲ್ಲಿ ಮಳೆ ಕೊರೆತೆಯಿಂದಾಗಿ ಚಾಪೆ ನೇಜಿ ಸಿದ್ಧಪಡಿಸಿದ್ದ ರೈತರಿಗೆ ಸಮಸ್ಯೆಯಾಗಿತ್ತು. ಹಲವೆಡೆ ಚಾಪೆ ನೇಜಿ ಟ್ರೇಯಲ್ಲೇ ಒಣಗಿ ಹೋಗಿ ನಷ್ಟ ಉಂಟಾಗಿತ್ತು. ನೇರ ಬಿತ್ತನೆ ಮಾಡಿದ ಗದ್ದೆಗಳಲ್ಲೂ ಭತ್ತದ ಸಸಿಗಳು ಒಣಗಿ ಹೋಗಿದ್ದವು.

ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ಇಳುವರಿ ಕುಸಿತವಾಗಬಹುದೆಂದು ಆರಂಭದಲ್ಲೇ ರೈತರು ಆತಂಕ ವ್ಯಕ್ತಪಡಿಸಿದ್ದರು. ಇದೀಗ ಕೆಲ ದಿನಗಳಿಂದ ಮಳೆ ಬಾರದ ಕಾರಣ ಭತ್ತದಲ್ಲಿ ಜೊಳ್ಳು ಹೆಚ್ಚಾಗಿ ಇಳುವರಿ ಭಾರಿ ಕುಸಿತವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೃಷಿಕರು.

‘ತೀವ್ರವಾದ ಬಿಸಿಲಿನ ಕಾರಣಕ್ಕೆ ಎರಡು ಎಕರೆ ಭತ್ತದ ಕೃಷಿ ನಾಶವಾಗಿದೆ. ಬಾವಿ ಇರುವವರು ಪಂಪ್‌ಸೆಟ್‌ ಮೂಲಕ ನೀರು ಹಾಯಿಸಿ ಬೆಳೆಯನ್ನು ಉಳಿಸಿಕೊಳ್ಳುತ್ತಾರೆ. ಮಳೆಯನ್ನೇ ಆಶ್ರಯಿಸಿರುವ ಬೆಳೆಗಾರನಿಗೆ ದಿಕ್ಕು ತೋಚದಂತಾಗಿದೆ. ಬೆಟ್ಟುಗದ್ದೆಯಲ್ಲಿ ಕೃಷಿ ಮಾಡಿದವರಿಗೆ ಭಾರಿ ಹೊಡೆತ ಬಿದ್ದಿದೆ’ ಎನ್ನುತ್ತಾರೆ ಭತ್ತದ ಕೃಷಿಕ ರಿಕೇಶ್‌ ಕಡೆಕಾರ್‌.

‘ಈ ಬಾರಿ ತಡವಾಗಿರುವುದರಿಂದ ನವೆಂಬರ್‌ ಮೊದಲ ವಾರದಲ್ಲಿ ಕೊಯ್ಲು ನಡೆಯುವ ಸಾಧ್ಯತೆ ಇದೆ. ಸೆಪ್ಟೆಂಬರ್ ಕೊನೆಯವರೆಗಾದರೂ ಮಳೆ ಅಗತ್ಯವಿದೆ’ ಎಂದೂ ಅವರು ಹೇಳುತ್ತಾರೆ.

ಈ ಬಾರಿ ಜಿಲ್ಲೆಯಲ್ಲಿ ಆಗಸ್ಟ್‌ ತಿಂಗಳ ಆರಂಭದಲ್ಲಿ ಉತ್ತಮ ಮಳೆಯಾಗಿದ್ದರೂ ಅನಂತರ ಕಡಿಮೆಯಾಗಿತ್ತು. ವಾಡಿಕೆಯಂತೆ ಆಗಸ್ಟ್‌ನಲ್ಲಿ 106.4 ಸೆಂ.ಮೀ. ಮಳೆ ಸುರಿಯಬೇಕಿತ್ತು. ಆದರೆ 95.3 ಸೆಂ.ಮೀ. ಮಳೆ ಸುರಿದಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಸೆಪ್ಟೆಂಬರ್‌ 1ರಿಂದ 15ರವರೆಗೆ ವಾಡಿಕೆಯಂತೆ 23.1 ಸೆಂ.ಮೀ. ಮಳೆ ಸುರಿಯಬೇಕಿತ್ತು. ಆದರೆ 4.2 ಸೆಂ.ಮೀ. ಮಳೆಯಷ್ಟೇ ಸುರಿದಿದೆ ಎಂದು ತಿಳಿಸಿವೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ