
ಮೊಳಕಾಲ್ಮುರು: ಕೆರೆಗಳಿಗೆ ನೀರು ಪೂರೈಸುವ ಪೈಪ್ ಅಳವಡಿಕೆ ಕುಂಟುತ್ತಾ ಸಾಗಿದೆ
ಮೊಳಕಾಲ್ಮುರು: ಭದ್ರಾ ಮೇಲ್ದಂಡೆ ಯೋಜನೆ (ಅಪ್ಪರ್ ಭದ್ರಾ ಪ್ರಾಜೆಕ್ಟ್– ಯುಬಿಪಿ) ಅಡಿ ಚಿತ್ರದುರ್ಗ ಜಿಲ್ಲೆಯ ಹಲವು ತಾಲ್ಲೂಕುಗಳ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಬರುತ್ತಿರುವ ಸಂತಸ ಒಂದೆಡೆಯಾದರೆ, ಇದೇ ಯೋಜನೆಯಡಿ ಕೆರೆಗಳಿಗೆ ನೀರುಣಿಸಿಕೊಳ್ಳಬೇಕಾದ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿ ಇನ್ನೂ ಕುಂಟುತ್ತಾ ಸಾಗುತ್ತಿದೆ.
ಯೋಜನೆ ಸಾಕಾರದ ಹೋರಾಟಕ್ಕೆ 2004ರಲ್ಲಿ ತಾಲ್ಲೂಕಿನ ರಾಂಪುರದಲ್ಲಿ ಚಾಲನೆ ನೀಡಲಾಗಿತ್ತು. 30 ವರ್ಷಗಳಿಂದ ಜನರು ನೀರಿಗಾಗಿ ಎದುರು ನೋಡುತ್ತಿದ್ದಾರೆ. ಈಗ ಚಿತ್ರದುರ್ಗ ಬಳಿ ನೀರು ಬಂದಿದ್ದರೂ ಅಲ್ಲಿಂದ ಮೊಳಕಾಲ್ಮುರು ಕ್ಷೇತ್ರದ ಕೆರೆಗಳಿಗೆ ನೀರು ಬರುವುದು ಸುಲಭವಲ್ಲ. ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ ಸದ್ಯಕ್ಕೆ ನೀರು ಬರುವುದು ಅಸಾಧ್ಯ.
‘1990ರ ಆಸುಪಾಸಿನಲ್ಲಿ ನೀರಾವರಿ ತಜ್ಞ ಡಾ.ಜಿ.ಪರಮಶಿವಯ್ಯ ವರದಿ ಆಧರಿಸಿ ಸಿದ್ಧಪಡಿಸಿದ್ದ ಭದ್ರಾ ಮೇಲ್ದಂಡೆ ಯೋಜನೆಯನ್ನು ಮೊಳಕಾಲ್ಮುರು, ಜಗಳೂರು, ಸಂಡೂರು, ಕೂಡ್ಲಿಗಿ ಮತ್ತು ಚಳ್ಳಕೆರೆ ತಾಲ್ಲೂಕುಗಳಿಗೆ ಪ್ರಾಶಸ್ತ್ಯ ನೀಡಿ ಸಿದ್ಧಪಡಿಸಲಾಗಿತ್ತು. ನಂತರ ಆದ ಮಾರ್ಪಾಡುಗಳಲ್ಲಿ ಮೊಳಕಾಲ್ಮುರು, ಚಳ್ಳಕೆರೆ ಮತ್ತು ಜಗಳೂರು ಯೋಜನೆಯ 1ನೇ ಹಂತದಲ್ಲಿ ಕೈಬಿಟ್ಟು ಹೋಗಿ 2ನೇ ಹಂತದಲ್ಲಿ ಸೇರಿಸಲಾಗಿದೆ’ ಎನ್ನುತ್ತಾರೆ ಹೋರಾಟಗಾರ ಜಿ.ಯಾದವರೆಡ್ಡಿ.
‘ಮೊಳಕಾಲ್ಮುರು ತಾಲ್ಲೂಕಿನ 21 ಮತ್ತು ತಳಕು, ನಾಯನಕಹಟ್ಟಿ ಹೋಬಳಿಗಳ 32 ಕೆರೆಗಳು ಸೇರಿ ಒಟ್ಟು 53 ಕೆರೆಗಳಿಗೆ ಯೋಜನೆಯಡಿ ನೀರು ಹರಿಸಬೇಕಿದೆ. ಇದಕ್ಕಾಗಿ 1.36 ಟಿಎಂಸಿ ಅಡಿ ನೀರು ಮೀಸಲಿಡಲಾಗಿದೆ. 98 ಗ್ರಾಮಗಳ ವ್ಯಾಪ್ತಿಯ ಜನರಿಗೆ ನೀರು ದೊರೆಯಲಿದೆ. ಇಲ್ಲಿನ ಕಾಮಗಾರಿಗೆ ₹ 532 ಕೋಟಿ ನಿಗದಿಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘2020ರಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, 2022ಕ್ಕೆ ಪೂರ್ಣಗೊಳಿಸುವ ಗುರಿ ನೀಡಲಾಗಿತ್ತು. ಕೋವಿಡ್ ಸೇರಿದಂತೆ ಇನ್ನಿತರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, 2027ರ ಮಾರ್ಚ್ ಒಳಗಾಗಿ ಕೆಲಸ ಪೂರ್ಣಗೊಳಿಸುವ ಗುರಿ ನೀಡಲಾಗಿದೆ. 2 ಲಕ್ಷಕ್ಕೂ ಅಧಿಕ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ನಿರೀಕ್ಷೆ ಹೊಂದಲಾಗಿದೆ’ ಎಂದು ಮಾಹಿತಿ ನೀಡಿದರು.
‘ಈ ಭಾಗದಲ್ಲಿ ಅಂತರ್ಜಲ ಮಟ್ಟ 1,000 ಅಡಿಗೆ ಕುಸಿತವಾಗಿದೆ. ಕೃಷಿ ಚಟುವಟಿಕೆ ಕ್ಷೀಣಿಸಿದ್ದು, ಜನಪ್ರತಿನಿಧಿಗಳು ಯೋಜನೆ ಉಪಯೋಗ ದೊರಕಿಸಲು ಶ್ರಮಿಸಬೇಕು’ ಎಂದು ರೈತ ಸಂಘದ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮನವಿ ಮಾಡಿದರು.
ಭದ್ರಾಮೇಲ್ದಂಡೆ ಯೋಜನೆ 1ನೇ ಹಂತದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಕೈಬಿಟ್ಟು ಹೋಗಿತ್ತು. ಆಗ ಪರಸ್ಪರ ರಾಜಕೀಯ ಕೆಸರೆರಚಾಟಕ್ಕೆ ಇದು ಎಡೆ ಮಾಡಿಕೊಟ್ಟಿತ್ತು. 2ನೇ ಹಂತಕ್ಕೆ ಎಸ್. ತಿಪ್ಪೇಸ್ವಾಮಿ ಶಾಸಕರಾಗಿದ್ದಾಗ ಸೇರ್ಪಡೆಯಾಯಿತು. 2020ರಲ್ಲಿ ಬಿ. ಶ್ರೀರಾಮುಲು ಶಾಸಕರಾಗಿದ್ದಾಗ ನಾಯಕನಹಟ್ಟಿ ದೊಡ್ಡಕೆರೆಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಇನ್ನೂ ಪೂರ್ಣವಾಗಿಲ್ಲ.
ಶೇ 40ರಷ್ಟೇ ಕಾಮಗಾರಿ ಪೂರ್ಣ
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 332 ಕಿ.ಮೀ ಪೈಪ್‌ಪೈನ್ ಅಳವಡಿಕೆ ಕಾಮಗಾರಿ ಮಾಡಬೇಕಿದೆ. ಈ ಪೈಕಿ ಅಂದಾಜು 80-100 ಕಿ.ಮೀ ಕಾಮಗಾರಿ ಪೂರ್ಣವಾಗಿ ಶೇ 40 ಪ್ರಗತಿಯಾಗಿದೆ. ಇತ್ತೀಚೆಗೆ ಕಾಮಗಾರಿಗೆ ವೇಗ ದೊರೆತಿದೆ. ದೊಡ್ಡ ಪೈಪ್‌ಗಳ ಅಳವಡಿಕೆ ನಡೆದಿದ್ದು, ಸಣ್ಣ ಪೈಪ್ ಅಳವಡಿಕೆ ಬಾಕಿಯಿದೆ. ಮುಂದಿನ ವರ್ಷ ಮಾರ್ಚ್‌ಗೆ ಪೂರ್ಣವಾಗುವ ನಿರೀಕ್ಷೆಯಿದೆ. 2027ರ ಮುಂಗಾರಿನಲ್ಲಿ ಇಲ್ಲಿನ ಕೆರೆಗಳಿಗೆ ನೀರು ಬರುವ ಸಾಧ್ಯತೆಯಿದೆ ಎಂದು ಯೋಜನೆಯ ಎಸ್.ಒ. ವಿಷ್ಣುಮೂರ್ತಿ ಮಾಹಿತಿ ನೀಡಿದರು.