
ಬಾಗೇಪಲ್ಲಿಯಲ್ಲಿ ಯುವಕರ ಸೆಳೆಯಲು ಉಚಿತ ಗಣೇಶ ಮೂರ್ತಿ ವಿತರಣೆ
ಬಾಗೇಪಲ್ಲಿ: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕ್ಷೇತ್ರದ ಸಮಾಜ ಸೇವಕರು ಮತ್ತು ರಾಜಕೀಯ ನಾಯಕರು ಯುವಕರನ್ನು ಸೆಳೆಯಲು ಇದುವರೆಗೆ ಎರಡು ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಿದ್ದಾರೆ.
ಮುಂಬರುವ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಮತ್ತು ಸ್ಥಳೀಯ ಚುನಾವಣೆಗಳತ್ತ ನಾಯಕರು ನೋಟ ಬೀರಿದ್ದಾರೆ. ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲ್ಲೂಕುಗಳ ಯುವಕರಿಗೆ ಮಾತ್ರ ಗಣೇಶ ಮೂರ್ತಿ ವಿತರಿಸಲಾಗುವುದು ಎಂದು ನಾಯಕರು ತಮ್ಮ ಗ್ರಾಮಗಳ ಮುಖಂಡರಿಗೆ ತಿಳಿಸಿದ್ದಾರೆ. ಇದರಿಂದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಯುವಕರು ಗಣೇಶ ಮೂರ್ತಿ ಪಡೆಯಲು ನಾಯಕರ ಮನೆ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.
ಶಾಸಕ ಸುಬ್ಬಾರೆಡ್ಡಿ ಪ್ರತಿ ವರ್ಷದಂತೆ ಈ ಬಾರಿಯೂ ತಮ್ಮ ಮನೆ ಮುಂದೆ ಗಣೇಶ ಮೂರ್ತಿಗಳನ್ನು ಲಾರಿ, ಟೆಂಪೊಗಳಲ್ಲಿ ತರಿಸಿದ್ದಾರೆ. ಮನೆ ಆವರಣದಲ್ಲಿ 4 ಅಡಿಗೂ ಮೇಲ್ಪಟ್ಟ ಗಣೇಶ ಮೂರ್ತಿಗಳನ್ನು ಸರತಿ ಸಾಲಿನಲ್ಲಿ ಇರಿಸಿದ್ದಾರೆ. ಶಾಸಕರ ಆಪ್ತ ಕಾರ್ಯದರ್ಶಿ ಮದ್ದಿಲೇಟಿರೆಡ್ಡಿ, ಗಿರೀಶ್ ಯುವಕರಿಗೆ ಟೋಕನ್ ನೀಡಿದ್ದಾರೆ. ಎಸ್.ಎನ್.ಸುಬ್ಬಾರೆಡ್ಡಿ, ಸಹೋದರ ಎಸ್.ಎನ್.ಸೂರ್ಯನಾರಾಯಣರೆಡ್ಡಿ, ಬಾಮೈದ ಅಮರನಾಥರೆಡ್ಡಿ ಮತ್ತು ಕಾಂಗ್ರೆಸ್ ಮುಖಂಡರು 550ಕ್ಕೂ ಗಣೇಶ ಮೂರ್ತಿ ವಿತರಿಸಿದರು.
ಪಟ್ಟಣದ ಹೊರವಲಯದ ಟಿ.ಬಿ.ಕ್ರಾಸ್‌ನ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಅವರ ಮನೆ ಮುಂದೆ ಹಾಗೂ ಹಳೆ ಶಾದಿ ಮಹಲ್ ಎದುರಿನ ಮಳಿಗೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪ್ರತಾಪ್, ಗುಜ್ಜೇಪಲ್ಲಿ ಸುಧಾಕರರೆಡ್ಡಿ, ಜಿ.ಜಿ.ಶ್ರೀನಿವಾಸ್ (ಜಿನ್ನಿ) ಸೇರಿ ಬಿಜೆಪಿ ಮುಖಂಡರು ಯುವಕರಿಗೆ 500ಕ್ಕೂ ಹೆಚ್ಚು ಗಣೇಶ ಮೂರ್ತಿ ವಿತರಿಸಿದರು.
ಪಟ್ಟಣದ ಡಿವಿಜಿ ಮುಖ್ಯರಸ್ತೆ ಡಾ.ಎಚ್.ಎನ್.ವೃತ್ತ ಸೇರಿದಂತೆ ರಸ್ತೆಗಳಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಎನ್‌ಡಿಎ ಮೈತ್ರಿ ಆಕಾಂಕ್ಷಿ ಹರಿನಾಥರೆಡ್ಡಿ, ಸಂಸದ ಡಾ.ಕೆ.ಸುಧಾಕರ್ ಅವರ ಭಾವಚಿತ್ರ ಇರುವ ಕಟೌಟ್ ಹಾಕಿಸಿದ್ದಾರೆ. ಗೌರಿ ಗಣೇಶ ಹಬ್ಬದ ಶುಭಾಶ ಯಪ್ರಕಟಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 44ರ ಸುಂಕಲಮ್ಮ ದೇವಿ ಪಕ್ಕದ ಹರಿನಾಥರೆಡ್ಡಿ ಫಾರಂಹೌಸ್‌ನಲ್ಲಿ ಕಳೆದ ಎರಡು ದಿನಗಳಿಂದ ಕ್ಷೇತ್ರದ ಯುವಕರಿಗೆ 500ಕ್ಕೂ ಹೆಚ್ಚು ಗಣೇಶ ಮೂರ್ತಿ ವಿತರಿಸಲಾಗಿದೆ.
ಕೆಲ ಯುವಕರು ಎಲ್ಲ ನಾಯಕರ ಬಳಿ ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿ ಪಡೆದಿದ್ದಾರೆ. ಟೋಕನ್ ಪಡೆದು ಗಣೇಶ ಮೂರ್ತಿ ತೆಗೆದುಕೊಂಡು ವಾಹನಗಳಲ್ಲಿ ಸಾಗಿಸುವ ದೃಶ್ಯ ಕಂಡು ಬಂದಿತು.
ಕ್ಷೇತ್ರದ ನಾಯಕರು 2 ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿ ಹಂಚಿರುವುದರಿಂದ ಪಟ್ಟಣ ಮತ್ತು ಗ್ರಾಮಗಳಲ್ಲಿ ಯುವಕರು ತಮ್ಮ ನಾಯಕರ ಫೋಟೊ ಕಟೌಟ್, ಬ್ಯಾನರ್ ಹಾಕಿಸಿಕೊಂಡು ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಿದ್ದಾರೆ. ಮನೆ, ರಸ್ತೆ, ಖಾಲಿ ಜಾಗ ಆಯ್ಕೆ ಮಾಡಿ, ಗಣೇಶ ಮೂರ್ತಿ ಇಡುವ ಜಾಗದಲ್ಲಿ ಚಪ್ಪರ, ಪೆಂಡಾಲ್ ಹಾಕಲು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಒಂದೊಂದು ಬೀದಿಗೆ 3 ರಿಂದ 4 ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ.
ಎಚ್ಚರ ವಹಿಸಲು ಕಿವಿಮಾತು
ಗಣೇಶ ಪ್ರತಿಷ್ಠಾಪನೆ, ವಿಸರ್ಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಮಯದಲ್ಲಿ ಯುವಕರು ಎಚ್ಚರಿಕೆಯಿಂದ ಇರಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ವಿದ್ಯುತ್ ಬಗ್ಗೆ ನಿಗಾ ವಹಿಸಬೇಕು. ಮಕ್ಕಳ ಕಡೆ ಹೆಚ್ಚು ಗಮನ ಇರಿಸಬೇಕು ಎಂದು ಹಿರಿಯರಾದ ವೀರಾಚಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.