
ಗದಗ ಜಿಲ್ಲೆಯಲ್ಲಿ ಹೂ ಬೆಳೆಗಾರರು ಕಂಗಾಲು; ಉತ್ತಮ ದರ ಸಿಗದೆ ನಷ್ಟ
ಗದಗ: ಜಿಲ್ಲೆಯಲ್ಲಿ ತೀವ್ರ ಮಳೆಕೊರತೆ ಕಾರಣ ಹೂವಿನ ಬೆಳೆ ಕುಂಟಿತವಾಗಿ, ಇಳುವರಿ ಕಡಿಮೆಯಾಗಿದೆ. ಲಭ್ಯವಾಗಿರುವಷ್ಟು ಬೆಳೆಗೂ ಉತ್ತಮ ದರ ಸಿಗದೆ ಬೆಳೆಗಾರರು ಕಂಗಾಲಾಗಿದ್ದಾರೆ.
ಜಿಲ್ಲೆಯ ಕದಾಂಪೂರ, ಲಕ್ಕುಂಡಿ, ಕಣಿವೆಹೊಸೂರ, ಪಾಪನಾಶಿ ಸೇರಿದಂತೆ ವಿವಿಧೆಡೆ ಹೂವುಗಳನ್ನು ಬೆಳೆಯಲಾಗುತ್ತದೆ. ಪ್ರತಿವರ್ಷ ಸಮೃದ್ಧ ಫಸಲು ಸಿಗುತ್ತಿದ್ದ ಕಾರಣ ರೈತರು ಉತ್ತಮ ಆದಾಯ ಗಳಿಸುತ್ತಿದ್ದರು. ಶ್ರಾವಣ ಮಾಸದಲ್ಲಿ ಹೂವಿನ ಮಾರಾಟ ಜೋರಾಗಿ ನಡೆಯುತ್ತಿತ್ತು. ಈ ವರ್ಷ ಮಳೆ ಕೈಕೊಟ್ಟ ಕಾರಣ ಭೂಮಿಯ ತೇವಾಂಶ ಕಡಿಮೆಯಾಗಿದೆ. ಅಂತರ್ಜಲಮಟ್ಟ ಕುಸಿತ, ಅಧಿಕ ತಾಪಮಾನದಿಂದ ಇಳುವರಿ ಕುಸಿದಿದೆ. ದರವೂ ಕಡಿಮೆಯಾಗಿರುವ ಕಾರಣ ಅಪಾರ ನಷ್ಟ ಉಂಟಾಗಿದೆ ಎಂಬುದು ರೈತರ ಅಳಲು.
ಆದರೆ, ಮಾರುಕಟ್ಟೆಯಲ್ಲಿ ಹೂವಿನ ದರ ಹೆಚ್ಚಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಏಜೆಂಟರು, ವ್ಯಾಪಾರಸ್ಥರು ಕಡಿಮೆ ಮೊತ್ತಕ್ಕೆ ಹೂವು ಖರೀದಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಮೂಲಕ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸುತ್ತಾರೆ.
‘ಎಪಿಎಂಸಿಗಳಲ್ಲಿ ಹೊರ ಜಿಲ್ಲೆಗಳಿಂದ ಕಡಿಮೆ ದರಕ್ಕೆ ಹೂವು ತರಲಾಗುತ್ತಿದೆ. ಅಷ್ಟೇ ದರಕ್ಕೆ ಹೂವು ಕೊಡುವಂತೆ ಸ್ಥಳೀಯ ರೈತರಿಗೆ ಒತ್ತಾಯ ಮಾಡಲಾಗುತ್ತಿದೆ. ಒಂದು ಎಕರೆಯಲ್ಲಿ ಸೇವಂತಿಗೆ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಸಿಕ್ಕಷ್ಟು ದರಕ್ಕೆ ಹೂವು ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಎಷ್ಟೋ ಬಾರಿ ಮಾರಾಟವಾಗದ ಹೂವುಗಳನ್ನು ಎಪಿಎಂಸಿಗಳಲ್ಲೇ ಬಿಟ್ಟು ಬಂದ ಉದಾಹರಣೆ ಇದೆ’ ಎಂದು ಕದಾಂಪೂರದ ಹೂ ಬೆಳೆಗಾರ ಈಶ್ವರ ಗದುಗಿನ ತಿಳಿಸಿದರು.
‘ಕಳೆದ ವರ್ಷಗಳಲ್ಲಿ ಪ್ರತಿದಿನ ಒಂದು ಎಕರೆಯಲ್ಲಿ 20 ಕ್ವಿಂಟಲ್ ಚೆಂಡು ಹೂ, 10 ಕ್ವಿಂಟಲ್ ಸೇವಂತಿಗೆ ಹೂ ಕಟಾವು ಮಾಡಿ ಮಾರಾಟ ಮಾಡಿದ್ದೆ. ಈಗ ಎಕರೆಗೆ 4 ಕ್ವಿಂಟಲ್ ಸಹ ಸಿಗುತ್ತಿಲ್ಲ. ಆಯಾ ದಿನದ ತಾಜಾ ಹೂವುಗಳನ್ನು ತಂದು, ₹1,250 ಕಮಿಷನ್ ಕೊಟ್ಟರೂ ಏಜೆಂಟರು ಅನ್ಯಾಯ ಮಾಡುತ್ತಿದ್ದಾರೆ’ ಎಂದರು.
‘ಪ್ರಕೃತಿ ವಿಕೋಪದಿಂದ ಹೂವಿನ ಬೆಳೆ ನಾಶವಾದರೆ ಒಣಭೂಮಿ ಹೆಕ್ಟೇರ್‌ಗೆ ₹8,500, ನೀರಾವರಿಗೆ ₹17,000 ಪರಿಹಾರ ನೀಡಲು ಅವಕಾಶವಿದೆ. ಮಾರುಕಟ್ಟೆ ದರ ನಿಯಂತ್ರಣ ಇಲಾಖೆ ವ್ಯಾಪ್ತಿಯಲಿಲ್ಲ’ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
‘ಬೆಳೆ ನಾಶ ಮಾಡಲು ನಿರ್ಧಾರ’
‘ಮಳೆ ಕೊರತೆಯಿಂದ ಕೊಳವೆಬಾವಿಯಲ್ಲಿ ನೀರು ಸಿಗದೆ ವಾರಕ್ಕೆ ಎರಡ್ಮೂರು ಸಲ ಟ್ಯಾಂಕರ್ ನೀರು ಹಾಯಿಸಿ ಸೇವಂತಿಗೆ, ಚೆಂಡು ಹೂವು ಬೆಳೆದಿರುವೆ. ಕಳೆದ ವರ್ಷ ₹8 ಲಕ್ಷದಷ್ಟು ಆದಾಯ ಗಳಿಸಿದ್ದೆ. ಈ ಬಾರಿ ಕೆ.ಜಿ ₹10ರಿಂದ ₹20ಕ್ಕೆ ಮಾರಾಟ ಮಾಡಿದ್ದೂ ಇದೆ. ಹೂವಿನ ಕೃಷಿಯಿಂದ ಇಷ್ಟು ವರ್ಷ ಜೀವನ ನಡೆಸಿರುವೆ. ಈಗ ಜೀವನ ನಿರ್ವಹಣೆ ಕಷ್ಟವಾಗಿದೆ’ಎಂದು ಹೂವಿನ ಬೆಳೆಗಾರ ಆನಂದಗೌಡ ಪಾಟೀಲ ಅಲವತ್ತುಕೊಂಡರು.
‘ಎಪಿಎಂಸಿಗೆ ಹೊರ ಜಿಲ್ಲೆಗಳಿಂದ ಹೂವು ತರದಂತೆ ಈ ಹಿಂದೆ ಬಂದ್ ಮಾಡಿಸಿದ್ದೆವು. ಈಗ ಮತ್ತೆ ಆರಂಭವಾಗಿದೆ. ಹೂವಿನ ಮಾರಾಟಕ್ಕೆ ಗದಗ ಮಾರುಕಟ್ಟೆಯನ್ನೇ ಸಂಪೂರ್ಣ ಅವಲಂಬಿಸಿದ್ದೇನೆ. ಕೆಲ ದಿನಗಳಲ್ಲೇ ರೂಟರ್ ಹೊಡೆದು ಬೆಳೆ ನಾಶ ಮಾಡಲು ನಿರ್ಧರಿಸಿದ್ದೇನೆ’ ಎಂದು ಬೇಸರದಿಂದ ನುಡಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-23-812416431