
ಬೆಳಗಾವಿ: ಶತಮಾನದಷ್ಟು ಹಳೆಯ ಶಾಲೆಯ SSLC ಫಲಿತಾಂಶದಲ್ಲಿ ಗಮನಾರ್ಹ ಸಾಧನೆ
ಬೆಳಗಾವಿ: ಇದು ಶತಮಾನದಷ್ಟು ಹಳೆಯದಾದ ಶಾಲೆ. ಹಲವು ವರ್ಷ ಈ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶೇ 40ರಷ್ಟು ದಾಟಿರಲಿಲ್ಲ. 2024–25ನೇ ಸಾಲಿನ ಫಲಿತಾಂಶವೂ ಶೇ 42ರಷ್ಟು ಮಾತ್ರ ದಾಖಲಾಗಿತ್ತು.
ಆದರೆ, 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ–1ರಲ್ಲಿ ಈ ಶಾಲೆ ಶೇ 89ರಷ್ಟು ಫಲಿತಾಂಶ ದಾಖಲಿಸಿ ಗಮನಾರ್ಹ ಸಾಧನೆ ಮಾಡಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ–2ರಲ್ಲಿ ಶೇ 9ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಶಾಲೆ ಸ್ಥಾಪನೆಯಾದ 176 ವರ್ಷಗಳ ಇತಿಹಾಸದಲ್ಲೇ(ಕೊರೊನಾ ಅವಧಿ ಹೊರತುಪಡಸಿ) ದಾಖಲಾದ ಗರಿಷ್ಠ ಫಲಿತಾಂಶವಿದು. ಅಷ್ಟಕ್ಕೂ ಈ ಸಾಧನೆಗೆ ಕಾರಣವಾಗಿದ್ದು ಉಪ ಪ್ರಾಚಾರ್ಯ ಶಿವಶಂಕರ ಹಾದಿಮನಿ ಮತ್ತು ಶಿಕ್ಷಕರ ತಂಡ.
ನಗರದ ಹೃದಯಭಾಗದಲ್ಲೇ ಇರುವ ಈ ಶಾಲೆಯಲ್ಲಿ ಅನಾಥರು, ಏಕಪಾಲಕರು ಇರುವ ಮಕ್ಕಳು, ಕೂಲಿಕಾರರ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದಾರೆ. ಆದರೆ, ಬಹುತೇಕರು ನಿಯಮಿತವಾಗಿ ಶಾಲೆಗೆ ಹಾಜರಾಗುತ್ತಿರಲಿಲ್ಲ. ಓದಿನತ್ತ ಲಕ್ಷ್ಯ ವಹಿಸುತ್ತಿರಲಿಲ್ಲ. ಇದಕ್ಕೆ ಕಂಡುಕೊಂಡ ಪರಿಹಾರ ಶಾಲೆಗೆ ಉತ್ತಮ ಫಲಿತಾಂಶ ತಂದುಕೊಟ್ಟಿದೆ.
‘ಮಕ್ಕಳನ್ನು ಓದಿನತ್ತ ಸೆಳೆಯಲು ಹೊಸ ಕಾರ್ಯಕ್ರಮ ರೂಪಿಸಿದೆವು. ಮಕ್ಕಳ ಹಾಜರಾತಿ ಮೇಲೆ ನಿಗಾ ಇರಿಸಿದೆವು. ನಿಯಮಿತವಾಗಿ ಶಾಲೆಗೆ ಹಾಜರಾಗದ ಮಕ್ಕಳ ಮನೆಗೆ ಭೇಟಿ ನೀಡಿ ಮನವೊಲಿಸಿದೆವು. ನಿತ್ಯವೂ ವಿಶೇಷ ತರಗತಿ ಸಂಘಟಿಸಿದೆವು. ಎಲ್ಲ ಶಿಕ್ಷಕರೂ ಮುತುವರ್ಜಿಯಿಂದ ಕೆಲಸ ಮಾಡಿದರು. ಹಾಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಿಸಿದೆ’ ಎಂದು ಶಿವಶಂಕರ ಹಾದಿಮನಿ ಹೇಳಿದರು.
ನಾಲ್ಕೈದು ವರ್ಷಗಳ ಹಿಂದೆ ಈ ಶಾಲೆಯಲ್ಲಿ ಬೇಡಿಕೆಯಷ್ಟು ಮೂಲಸೌಕರ್ಯವೂ ಇರಲಿಲ್ಲ. ಆದರೆ, ಶಿಕ್ಷಕರ ಸತತ ಪ್ರಯತ್ನದಿಂದಾಗಿ ಈಗ ಭೌತಿಕ ಸೌಲಭ್ಯ ಸುಧಾರಿಸಿವೆ. 10 ತರಗತಿ ಕೊಠಡಿಗಳಲ್ಲಿ ಪ್ರೊಜೆಕ್ಟರ್ ಇವೆ. ಟಾಲ್ಪ್ ಲ್ಯಾಬ್, ಭಾಷಾ ಪ್ರಯೋಗಾಲಯ ಮತ್ತು ವರ್ಚ್ಯುವಲ್ ಲ್ಯಾಬ್ ತಲೆ ಎತ್ತಿದೆ. ಸುರಕ್ಷತೆ ದೃಷ್ಟಿಯಿಂದ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರತಿ ತರಗತಿ ಕೊಠಡಿಗೂ ಇಂಟರ್‌ಕಾಮ್ ವ್ಯವಸ್ಥೆ ಇದ್ದು, ಉಪ ಪ್ರಾಚಾರ್ಯರು ತಮ್ಮ ಕಚೇರಿಯಿಂದ ಆಯಾ ಕೊಠಡಿಗೆ ನೇರವಾಗಿ ಸೂಚನೆ ಕೊಡಬಹುದು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-21-42684627