
ಬೀದರ್ | ಶಾಲಾ ವಾಹನಗಳಲ್ಲಿ ‘ಕೇರ್ ಟೇಕರ್’ ಕಡ್ಡಾಯ
ಬೀದರ್: ‘ಶಾಲಾ ವಾಹನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಅದರಲ್ಲಿ ಕಡ್ಡಾಯವಾಗಿ ಕೇರ್ ಟೇಕರ್ ಇರುವಂತೆ ನೋಡಿಕೊಳ್ಳಬೇಕು’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುಹಮ್ಮದ್ ಜಾಫರ್ ಸಾದಿಕ್ ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ನಗರದ ಮೈಲೂರಿನ ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ಶಾಲಾ ವಾಹನ ಚಾಲಕರಿಗೆ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಅರಿವು ಕಾರ‍್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಾಲಾ ವಾಹನ ಚಲಾಯಿಸುವವರಿಗೆ ಐದು ವರ್ಷ ಚಾಲನಾ ಅನುಭವ ಹೊಂದಿರಬೇಕು. ಅತಿ ವೇಗ ಹಾಗೂ ಓವರ್ ಟೇಕ್ ಮಾಡುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯಲ್ಲಿ ಸಮಾಧಾನದಿಂದ ರಸ್ತೆ ಚಾಲನಾ ನಿಯಮಗಳನ್ನು ಪಾಲಿಸುವ ಮೂಲಕ ವಾಹನ ಚಲಾಯಿಸಬೇಕು ಎಂದು ಸಲಹೆ ಮಾಡಿದರು.
ಅನಾರೋಗ್ಯದಿಂದ ಬಳಲುತ್ತಿದ್ದರೆ ವಾಹನ ಚಲಾಯಿಸಬಾರದು. ಒಂದುವೇಳೆ ಗುಳಿಗೆ ತೆಗೆದುಕೊಂಡರೆ ಕನಿಷ್ಠ 2 ಗಂಟೆ ವಿಶ್ರಾಂತಿ ಮಾಡಿದ ಬಳಿಕವೇ ವಾಹನ ಓಡಿಸಬೇಕು. ಮದ್ಯಪಾನ ಮಾಡಿ ವಾಹನವನ್ನು ಓಡಿಸಲೇಬಾರದು. ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ₹10 ಸಾವಿರ ದಂಡ ಹಾಗೂ ಆರು ತಿಂಗಳು ಜೈಲು ಶಿಕ್ಷೆ ಇದೆ ಎಂದರು.
ಕಾಲೇಜಿನ ಆಡಳಿತಾಧಿಕಾರಿ ಆರ್.ಡಿ. ಸಿಂಗ‌್, ಪ್ರಾಂಶುಪಾಲ ವೀಣಾ ಎಸ್., ಉಪ ಪ್ರಾಂಶುಪಾಲ ಧನಂಜಯ ಎಂ. ಸತೀಶ್, ಎಚ್.ಎಂ. ಮುಹಮ್ಮದ ಮುಕ್ರಂ, ಮನದೀಪ್ ಸಿಂಗ್, ಅಜಯ್ ರಾಜ‌್ ಸಿಂಧೆ, ಅಮರಜೀತ್ ಸಿಂಗ‌್, ಮಹೇಶ ದೀಕ್ಷಿತ್, ವಾಹನ ತರಬೇತಿ ಶಾಲೆಯ ಪ್ರಾಂಶುಪಾಲ ಶಿವರಾಜ ಜಮಾದಾರ ಖಾಜಾಪುರ ಹಾಗೂ ಗುರುನಾನಕ್ ಸಂಸ್ಥೆಯ ಶಾಲಾ ಬಸ್ ವಾಹನ ಚಾಲಕರು ಇದ್ದರು.