
ಕಾರವಾರ: ಕರಾವಳಿಗೆ ಶಾಪವಾಗಲಿದೆ ನದಿ ತಿರುವು
ಕಾರವಾರ: ಮಳೆ ಸ್ವಲ್ಪ ಕಡಿಮೆ ಸುರಿದರೆ ಬೇಸಿಗೆಯಲ್ಲಿ ಕಾರವಾರ, ಅಂಕೋಲಾಕ್ಕೆ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಬೇಕಾದ ಸ್ಥಿತಿ ಗಂಗಾವಳಿ ನದಿ ಒಡಲಿನಲ್ಲಿ ತಲೆತೋರುತ್ತದೆ. ಕರಾವಳಿ ಭಾಗದ ಜೀವನಾಡಿಯಾಗಿರುವ ನದಿಯ ನೀರನ್ನು ತಿರುಗಿಸಿ ಬಯಲು ಸೀಮೆಗೆ ಕೊಂಡೊಯ್ದರೆ ಸ್ಥಿತಿ ಏನಾಗಬಹುದು ಎಂಬ ಆತಂಕ ಜನರಲ್ಲಿ ಉಂಟಾಗಿದೆ.
ಗಂಗಾವಳಿ ನದಿಯಲ್ಲಿ ಅಂಕೋಲಾದ ಹೊನ್ನಳ್ಳಿ ಬಳಿಯ ಪಂಪ್‍ಹೌಸ್‌ನಿಂದ ಎತ್ತಿದ ನೀರು ಅಂಕೋಲಾ ಪಟ್ಟಣ, ಕಾರವಾರ ನಗರ, ಕದಂಬ ನೌಕಾನೆಲೆ, ಬಿಣಗಾದಲ್ಲಿನ ಗ್ರಾಸಿಮ್ ಇಂಡಸ್ಟ್ರೀಸ್ ಜೊತೆಗೆ 13 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಪೂರೈಕೆಯಾಗುತ್ತಿದೆ. ದಿನವೊಂದಕ್ಕೆ 21 ದಶಲಕ್ಷ ಲೀಟರ್ ನೀರು ಅಗತ್ಯವಾಗುತ್ತಿದೆ.
‘ಗಂಗಾವಳಿ ನದಿಯಿಂದ ಫೆಬ್ರವರಿವರೆಗೆ ಕುಡಿಯುವ ನೀರು ಪೂರೈಸಲು ತೊಂದರೆ ಅಷ್ಟೇನೂ ಎದುರಾಗದು. ಆದರೆ, ಆ ಬಳಿಕ ಮೂರು ತಿಂಗಳು ನೀರು ಪೂರೈಕೆಗೆ ನದಿಗೆ ಮರಳಿನ ಚೀಲದ ಒಡ್ಡು ನಿರ್ಮಿಸಿಕೊಂಡು ನೀರು ಸಂಗ್ರಹಿಸುವುದೇ ಸವಾಲಿನ ಕೆಲಸವಾಗುತ್ತದೆ. ಬಿರುಬೇಸಿಗೆಯಲ್ಲಿ ನೀರು ತಳ ಸೇರಿ ಪೂರೈಕೆ ಸ್ಥಗಿತಗೊಳಿಸಬೇಕಾದ ಸ್ಥಿತಿಯನ್ನು ಈಚಿನ ವರ್ಷದಲ್ಲಿ ಎದುರಿಸಿದ್ದೇವೆ’ ಎನ್ನುತ್ತಾರೆ ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿಯೊಬ್ಬರು.
‘ಕದಂಬ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ ಬಹುತೇಕ ಪೂರ್ಣಗೊಂಡಿದೆ. ಅಲ್ಲಿಗೆ ಈವರೆಗೆ ದಿನವೊಂದಕ್ಕೆ 8 ದಶಲಕ್ಷ ಲೀಟರ್ (ಎಂಎಲ್‌ಡಿ) ನೀರು ಪೂರೈಕೆ ಆಗುತ್ತಿತ್ತು. ಈ ಪ್ರಮಾಣ ಮುಂದಿನ ಕೆಲವೇ ತಿಂಗಳಲ್ಲಿ 21 ಎಂಎಲ್‌ಡಿಗೆ ಏರಿಕೆಯಾಗಬಹುದು. ಅಲಗೇರಿಯಲ್ಲಿ ವಿಮಾನ ನಿಲ್ದಾಣವಾದರೆ ನೀರು ಪೂರೈಕೆ ಪ್ರಮಾಣ ಹೆಚ್ಚಿಸಬೇಕಾಗುತ್ತದೆ. ಕೆಲವೇ ವರ್ಷದಲ್ಲಿ ಗಂಗಾವಳಿ ನದಿಯಿಂದ ದಿನವೊಂದಕ್ಕೆ 45 ಎಂಎಲ್‌ಡಿಗೂ ಹೆಚ್ಚು ನೀರು ಪೂರೈಸಬೇಕಾಗುತ್ತದೆ’ ಎನ್ನುತ್ತಾರೆ ಅವರು.
‘ಗಂಗಾವಳಿ ನದಿಗೆ ಬೇಸಿಗೆಯಲ್ಲಿ ನೀರು ಸಂಗ್ರಹಿಸಿಕೊಳ್ಳಲು ಕಿಂಡಿ ಅಣೆಕಟ್ಟೆ ನಿರ್ಮಾಣ ಶೇ 36ರಷ್ಟು ನಡೆದಿದೆ. ಮುಂದಿನ ವರ್ಷದ ಜೂನ್ ಒಳಗೆ ಅಣೆಕಟ್ಟೆ ನಿರ್ಮಾಣ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದೇವೆ. ಅಲ್ಲಿ ಸಂಗ್ರಹವಾಗುವ ನೀರನ್ನು ಕಾರವಾರ, ಅಂಕೋಲಾಕ್ಕೆ ಹಾಗೂ ನೌಕಾನೆಲೆ ಪ್ರತ್ಯೇಕ ಪೈಪ್‌ಲೈನ್‌ಗಳಲ್ಲಿ ಪೂರೈಸಲಾಗುತ್ತದೆ’ ಎಂದು ನಗರ ನೀರು ಸರಬರಾಜು ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಶಿವರಾಮ ನಾಯ್ಕ ತಿಳಿಸಿದರು.
‘ಗಂಗಾವಳಿ ನದಿಯಲ್ಲಿ ಮಳೆಗಾಲ ನಾಲ್ಕು ತಿಂಗಳು ಮಾತ್ರ ನೀರಿನ ಮಟ್ಟ ಹೆಚ್ಚು, ಉಳಿದ 8 ತಿಂಗಳು ತೀರಾ ಕಡಿಮೆ ಇರುತ್ತದೆ. ಬೇಸಿಗೆಗೆ ಮುನ್ನವೇ ನೀರಿನ ಹರಿವು ಇಳಿಕೆಯಾಗಲಿದೆ. ನದಿ ತಿರುವು ಯೋಜನೆ ಜಾರಿಯಾದರೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮದ ಜೊತೆಗೆ ಕಾರವಾರ, ಅಂಕೋಲಾ, ಗೋಕರ್ಣ ಭಾಗದ ಜನರಿಗೆ ನೀರು ಸಿಗದ ಸ್ಥಿತಿ ನಿರ್ಮಾಣವಾಗಬಹುದು’ ಎಂಬುದು ಗಂಗಾವಳಿ–ಕರಾವಳಿ ಉಳಿಸಿ ಜಾಗೃತಿ ಅಭಿಯಾನದ ಅಧ್ಯಕ್ಷ ಅನಂತ ಅಶೀಸರ ಅವರ ಆತಂಕ.
ಕರಾವಳಿಗರ ಧ್ವನಿ ಗಟ್ಟಿಯಾಗಲಿ
‘ಕರಾವಳಿ ಭಾಗದ ಜೀವನಾಡಿಯಾಗಿರುವ ಗಂಗಾವಳಿ ನದಿಯ ನೀರನ್ನು ಹಾವೇರಿ ಜಿಲ್ಲೆಗೆ ಕೊಂಡೊಯ್ದರೆ ನೀರಿನ ಹರಿವು ಕಡಿಮೆಯಾಗಿ, ಅಂಕೋಲಾ ಭಾಗದ ನದಿ ತೀರದ ಗ್ರಾಮಗಳ ಪರಿಸರ, ಕೃಷಿ ಚಟುವಟಿಕೆ ನಾಶವಾಗಲಿದೆ. ಕಾರವಾರ, ಗೋಕರ್ಣ, ಅಂಕೋಲಾದಲ್ಲಿ ಕುಡಿಯುವ ನೀರಿಗೆ ಪರದಾಡಬೇಕಾಗುತ್ತದೆ. ಸಮುದ್ರದ ಉಪ್ಪು ನೀರು ಒಳಪ್ರದೇಶದವರೆಗೆ ನುಗ್ಗಿ, ಇದರಿಂದ ಜಲಚರಗಳ ನಾಶದ ಜೊತೆಗೆ, ಮೀನುಗಾರಿಕೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಹೀಗಾಗಿ, ನದಿ ಜೋಡಣೆ ವಿರುದ್ಧ ಕರಾವಳಿ ಭಾಗದ ಜನರ ಧ್ವನಿ ಪ್ರಬಲಗೊಳ್ಳಬೇಕು’ ಎಂದು ಗಂಗಾವಳಿ–ಕರಾವಳಿ ಉಳಿಸಿ ಜಾಗೃತಿ ಅಭಿಯಾನದ ಅಧ್ಯಕ್ಷ ಅನಂತ ಅಶೀಸರ ಹೇಳುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-20-1278502566