ಕಲಬುರಗಿ: ನಶಾ ಮುಕ್ತ ಕರ್ನಾಟಕಕ್ಕಾಗಿ ‘ವಾಕಥಾನ್’
ಕಲಬುರಗಿ: ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರದ ಬೆಳಗು ಎಂದಿನಂತಿರಲಿಲ್ಲ. ಸೂರ್ಯೋದಯದೊಂದಿಗೆ ಹತ್ತಾರು ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳ ಪ್ರವಾಹವೇ ಹರಿದು ಬಂತು. ‘ವ್ಯಸನಮುಕ್ತ ಯುವ ಕರ್ನಾಟಕ’ ಹಾಗೂ ಅಂಗಾಂಗ ದಾನ’ದ ಮಹತ್ವ ಸಾರುವ ಘೋಷಣೆಗಳು ಮೊಳಗಿದವು.
ಗೃಹ ಇಲಾಖೆ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಬೇಡ ಬ್ರೋ, ಆಪರೇಷನ್ ರೈಸ್, ನಶಾಮುಕ್ತ ಯುವ ಕರ್ನಾಟಕ ಮತ್ತು ಅಂಗಾಂಗ ದಾನ ಅಭಿಯಾನ’ ಕುರಿತು ಅರಿವು ಮೂಡಿಸಲು ವಾಕಥಾನ್ ನಡೆಯಿತು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲರು ವಾಕಥಾನ್‌ಗೆ ಚಾಲನೆ ನೀಡಿ ಹೆಜ್ಜೆ ಹಾಕಿದರು. ವಾಕಥಾನ್ ಪೊಲೀಸ್ ಪರೇಡ್ ಮೈದಾನದಿಂದ ಕಲಬುರಗಿ ಸರ್ಕಾರಿ ಬಾಲಕಿಯರ ಕಾಲೇಜು, ಹಳೇ ಎಸ್ಪಿ ರಸ್ತೆ, ಏಷಿಯನ್ ಮಾಲ್, ಐವಾನ್-ಇ-ಶಾಹಿ ಅತಿಥಿ ಗೃಹ ಎದುರಿನಿಂದ ಕೆಕೆಆರ್‌ಡಿ ಕಚೇರಿ, ಡಿಸಿ ಕಚೇರಿ ಗೇಟ್ ಮೂಲಕ ಸರ್ದಾರ ವಲ್ಲಭಭಾಯಿ ಪಟೇಲ ವೃತ್ತ ತಲುಪಿತು. ಅಲ್ಲಿ ಮಾನವ ಸರಪಳಿ ನಿರ್ಮಿಸಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು. ಅಲ್ಲಿಂದ ಮರಳಿ ಮತ್ತೆ ಈ ವಾಕಥಾನ್ ಜಾಥಾ ಪೊಲೀಸ್ ಮೈದಾನ ತಲುಪಿ ಸಂಪನ್ನಗೊಂಡಿತು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಕುಲಪತಿ ಪ್ರೊ.ಬಿ.ಸಿ.ಭಗವಾನ್, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಿ.ಜಿ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ ಹಾಗೂ ಜಗದೇವಪ್ಪ ಗುತ್ತೇದಾರ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಂಕನೂರ, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಡಿಐಜಿ ಶಾಂತನು ಸಿನ್ಹಾ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜೆಸ್ಕಾಂ ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಜೆಸ್ಕಾಂ ಎಂಡಿ ಶಶಿಧರ್ ಕುರೇರ್ ಸೇರಿದಂತೆ ಹಲವರು ಗಣ್ಯರು ವಾಕಥಾನ್‌ನಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು.