
ಬಾಗಲಕೋಟೆ| ದಕ್ಷಿಣಕ್ಕೆ ಕೃಷ್ಣಾ ನೀರು: ಜನಪ್ರತಿನಿಧಿಗಳ ಮೌನಕ್ಕೆ ಆಕ್ರೋಶ
ಬಾಗಲಕೋಟೆ: ಕೃಷ್ಣಾ ನದಿ ನೀರನ್ನು ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹರಿಸುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲಾಗುವುದು ಎಂಬ ಕೇಂದ್ರ ಸಚಿವ ಸೋಮಣ್ಣ ಅವರ ಮಾತಿಗೆ ಜಿಲ್ಲೆಯ ಜನಪ್ರತಿನಿಧಿಗಳು ಮೌನವಾಗಿರುವುದಕ್ಕೆ ರೈತ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಕೃಷ್ಣಾ ನದಿ ನೀರು ಹರಿಸುವ ಯೋಜನೆಯ ಬಗ್ಗೆ ಸೋಮಣ್ಣ ಹೇಳಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೂ ಇಂತಹದೇ ಹೇಳಿಕೆಯನ್ನು ನೀಡಿದ್ದರು. ಆಗಲೂ ಕೃಷ್ಣಾ ನದಿ ನೀರು ಬಳಸಿಕೊಳ್ಳುವ ಜಿಲ್ಲೆಯ ಜನಪ್ರತಿನಿಧಿಗಳಿಂದ ಹೆಚ್ಚಿನ ವಿರೋಧ ವ್ಯಕ್ತವಾಗಿರಲಿಲ್ಲ.
ಯುಕೆಪಿ ಮೂರನೇ ಹಂತದ ನೀರು ಹಂಚಿಕೆಯಲ್ಲಿಯೂ ಬಾಗಲಕೋಟೆ ಜಿಲ್ಲೆಗೆ ಅನ್ಯಾಯವಾಗಿದೆ. ವಿಜಯಪುರ ಜಿಲ್ಲೆಗೆ 80 ಟಿಎಂಸಿ ಅಡಿಯಷ್ಟು ನೀರು ಹಂಚಿಕೆಯಾಗಿದ್ದರೆ, ಜಿಲ್ಲೆಗೆ ಕೇವಲ 4.5 ಟಿಎಂಸಿ ಅಡಿಯಷ್ಟು ನೀರು ಹಂಚಿಕೆಯಾಗಿದೆ. ವಿಜಯಪುರ ಜಿಲ್ಲೆ ಬಹುತೇಕ ಪ್ರದೇಶ ನೀರಾವರಿಯಾಗುತ್ತಿದ್ದರೆ, ಹುನಗುಂದ, ಇಳಕಲ್, ಬಾದಾಮಿ ಸೇರಿದಂತೆ ಹಲವು ತಾಲ್ಲೂಕುಗಳ ಭೂಮಿ ನೀರಾವರಿಗಾಗಿ ಕಾಯುತ್ತಿವೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಐದು ವರ್ಷದೊಳಗೆ ಯುಕೆಪಿ ಸೇರಿದಂತೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ₹2 ಲಕ್ಷ ಕೋಟಿ ವೆಚ್ಚ ಮಾಡಿ, ಪೂರ್ಣಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಅದು ಈಡೇರಲೇ ಇಲ್ಲ.
ಬಾಗಲಕೋಟೆಯಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದಾಗಲೂ, ಮೂರು ವರ್ಷಗಳಲ್ಲಿ ಪರಿಹಾರ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ, ಒಂದುವರೆ ವರ್ಷದಲ್ಲಿ ಕೇವಲ ₹3 ಸಾವಿರ ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ.
ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು, ಯುಕೆಪಿ ಯೋಜನೆಯ ಬಗ್ಗೆ ಮಾತನಾಡುತ್ತಾರೆ. ನಂತರದಲ್ಲಿ ಮರೆತು ಬಿಡುತ್ತಾರೆ. ನೀರು ಹಂಚಿಕೆ ವಿಷಯದಲ್ಲಿ ಜಿಲ್ಲೆಗೆ ಅನ್ಯಾಯವಾದಗಲೂ ಅವರು ಮಾತನಾಡಿಲ್ಲ. ನೀರಿನ ಹಕ್ಕನ್ನು ಕೇಳುತ್ತಿಲ್ಲ ಎಂಬುದೇ ಜನರ ದೂರು.
ಉತ್ತರ ಕರ್ನಾಟಕ ಅಭಿವೃದ್ಧಿಯಿಂದ ವಂಚಿತರಾಗಿರುವುದಕ್ಕೆ ಈ ಭಾಗದ ರಾಜಕಾರಣಿಗಳ ಸ್ವಾರ್ಥ ಮನೋಭಾವ ಕಾರಣವಾಗಿದೆ ಎಂದು ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಸಂಚಾಲಕ ಪ್ರಕಾಶ ಅಂತರಗೊಂಡ ದೂರಿದ್ದಾರೆ. ಯುಕೆಪಿ ಯೋಜನೆಗಾಗಿ ರೈತರು ಬಹಳಷ್ಟು ಭೂಮಿ ಕಳೆದುಕೊಂಡಿದ್ದಾರೆ. ಅವರಿಗೆ ಪರಿಹಾರ ಸಿಕ್ಕಿಲ್ಲ. ಜಿಲ್ಲೆಯ ಬಹಳಷ್ಟು ಭೂಮಿ ನೀರಾವರಿಗೆ ಒಳಪಟ್ಟಿಲ್ಲ. ಕೆರೆಗಳನ್ನು ತುಂಬಿಸುವ ಯೋಜನೆಗಳಾಗಿಲ್ಲ. ಹೀಗಿರುವಾಗ ನೀರನ್ನು ಕೋಲಾರಕ್ಕೆ ಒಯ್ಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಯುಕೆಪಿ: ಅಭಿಪ್ರಾಯ ಹೇಳಿ
ಕೃಷ್ಣಾ ನದಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಗುವ ಕುರಿತು, ಯುಕೆಪಿ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಹಣ ನೀಡದಿರುವ ಹಾಗೂ ನೀರು ಹಂಚಿಕೆ ಬಗ್ಗೆ ಜಿಲ್ಲೆಗೆ ಅನ್ಯಾಯವಾಗಿರುವ ಬಗ್ಗೆ 50 ಪದಗಳಲ್ಲಿ ನಿಮ್ಮ ಅಭಿಪ್ರಾಯ ಕಳುಹಿಸಬಹುದಾಗಿದೆ.
ನಿಮ್ಮ ಹೆಸರು, ವಿಳಾಸ, ಇತ್ತೀಚಿನ ಭಾವಚಿತ್ರದೊಂದಿಗೆ ಅಭಿಪ್ರಾಯವನ್ನು pvbagalkote@prajavani.co.in ಗೆ ಕಳುಹಿಸಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-19-725720900