
ವಿಶ್ವಕರ್ಮರಿಗೆ ಕಲೆ, ನೈಪುಣ್ಯ ರಕ್ತಗತ: ನಾಗೇಶ ಅಭಿಮತ
ಬೈಂದೂರು: ವಿಶ್ವಕರ್ಮ ಸತ್ಯ ಯುಗದಲ್ಲಿ ಸ್ವರ್ಗ ಲೋಕವನ್ನು, ತ್ರೇತಾ ಯುಗದಲ್ಲಿ ಲಂಕೆಯನ್ನು, ದ್ವಾಪರ ಯುಗದಲ್ಲಿ ದ್ವಾರಕೆ ಮತ್ತು ಹಸ್ತಿನಾಪುರವನ್ನು ಕಲಿಯುಗದಲ್ಲಿ ಇಂದ್ರಪ್ರಸ್ಥವನ್ನು ನಿರ್ಮಿಸಿದ್ದ. ಅಂತೆಯೇ ರಾವಣನ ಚಿನ್ನದ ಅರಮನೆ, ಶಸ್ತ್ರಾಸ್ತ್ರ, ಯುದ್ಧ ಸಾಮಗ್ರಿ ಮತ್ತು ಮಹಾಭಾರತದಲ್ಲಿ ದೈವೀಕ ಪಾತ್ರಗಳು ಮತ್ತು ರಾಮಾಯಣದಲ್ಲಿದ್ದ ರಥಗಳನ್ನು ವಿನ್ಯಾಸಗೊಳಿಸಿದ್ದ. ಹೀಗಾಗಿ ವಿಶ್ವಕರ್ಮ ಸಮುದಾಯಕ್ಕೆ ಕಲೆ, ನೈಪುಣ್ಯ ರಕ್ತಗತವಾಗಿ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಹೇಳಿದರು.
ತಾಲ್ಲೂಕಿನ ಉಪ್ರಳ್ಳಿಯ ಶ್ರೀಕಾಳಿ ಕಾಂಬಾ ದೇವಸ್ಥಾನದ ಸಭಾಭವನದಲ್ಲಿ ಗುರುವಾರ ವಿಶ್ವಕರ್ಮ ಜಯಂತಿ ಪ್ರಯುಕ್ತ ನಡೆದ ವಾರ್ಷಿಕ ವಿಶ್ವಕರ್ಮ ಪೂಜಾ ಮಹೋತ್ಸವ, ಹೊರೆಕಾಣಿಕೆ ವಾಹನ ಜಾಥಾ, ಧಾರ್ಮಿಕ ಸಭೆಯಲ್ಲಿ ಅವರು ಮಾತನಾ ಡಿದರು.
ವೆಂಕಟರಮಣ ಆಚಾರ್ಯ ನೀರ‍್ಕೆರೆ, ಶಂಕರ ಆಚಾರ್ಯ ಕೊಡ್ಲಾಡಿ, ಮಂಜುನಾಥ ಆಚಾರ್ಯ, ಚಂದ್ರಯ್ಯ ಆಚಾರ್ಯ ಚಿತ್ತೂರು, ರಾಘವೇಂದ್ರ ಆಚಾರ್ಯ ಸೇನಾಪುರ ಅವರನ್ನು ಸನ್ಮಾನಿಸಲಾಯಿತು. ವಿಶ್ವಕರ್ಮ ಜಯಂತಿ ಪ್ರಯುಕ್ತ ಬೈಂದೂರು ತಾಲ್ಲೂಕು ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗಾಗಿ ನಡೆಸಿದ ವಿವಿಧ ಸ್ಪಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಆಡಳಿತ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರುರಾಜ ಗಂಟಿಹೊಳೆ, ಉದ್ಯಮಿ ನಿತಿನ್ ನಾರಾಯಣ್, ಅನಂತ ಪದ್ಮನಾಭ ಆಚಾರ್ಯ ಮೂಡುಬಗೆ, ಉಪ ತಹಶೀಲ್ದಾರ್ ಲತಾ ಶೆಟ್ಟಿ, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಆಲೂರು, ಎರಡನೇ ಮೊಕೇಸರ ಉದಯ ಆಚಾರ್ಯ ಕಟ್‌ಬೆಲ್ಲೂರು, ಮೂರನೇ ಮೊಕೇಸರ ಶ್ರೀಧರ ಆಚಾರ್ಯ ಮರವಂತೆ, ಸೇವಾ ಸಮಿತಿಯ ಅಧ್ಯಕ್ಷ ಪ್ರಶಾಂತ ಆಚಾರ್ಯ, ಮಹಿಳಾ ಸಮಿತಿ ಅಧ್ಯಕ್ಷೆ ಶೈಲಾ ರಾಮಕೃಷ್ಣ ಆಚಾರ್ಯ ಉಪ್ಪುಂದ, ಆರೋಗ್ಯ ಸಮಿತಿ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಕಟ್‌ಬೆಲ್ತೂರು, ಕಾಳಿಕಾಂಬಾ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ, ಕುಂದಾಪುರ ಹಾಗೂ ಬೈಂದೂರು ತಾಲ್ಲೂಕು ಕಾರ್ಪೆಂಟರ್ ಯೂನಿಯನ್ ಅಧ್ಯಕ್ಷ ಮಹೇಶ ಆಚಾರ್ಯ ಉಪ್ಪುಂದ, ಗುರುಸೇವಾ ಪರಿಷತ್ ಅಧ್ಯಕ್ಷ ಲಕ್ಷ್ಮಣ ಆಚಾರ್ಯ ಮಟ್ನಕಟ್ಟೆ ಭಾಗವಹಿಸಿದ್ದರು.ಬೆಳಿಗ್ಗೆ ತಾಲ್ಲೂಕು ಆಡಳಿತದ ವತಿಯಿಂದ ಇಲ್ಲಿನ ಸಭಾಭವನದಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ವಿಶ್ವಕರ್ಮ ಕಾಷ್ಟಶಿಲ್ಪದ ಟ್ಯಾಬ್ಲೊ, ವಾಹನ ಜಾಥಾ ತಹಶೀಲ್ದಾರ್ ಕಚೇರಿಯಿಂದ ರಥಬೀದಿಯಲ್ಲಿ ಸಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ನಾಗೂರು ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ತನಕ ನಡೆಯಿತು. ಕಾಳಹಸ್ತೇಂದ್ರ ಸರಸ್ವತೀ ಶ್ರೀಗಳ 50ನೇ ಜನ್ಮ ವರ್ಧಂತ್ಯುತ್ಸವದ ಪ್ರಯುಕ್ತ ಬೆಳಿಗ್ಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಮಹಿಳಾ ಸಮಿತಿ ಸದಸ್ಯರು ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ನರ‍್ಕೆರೆ ಸ್ವಾಗತಿಸಿದರು. ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯ ಕೊಡ್ಲಾಡಿ ನಿರೂಪಿಸಿದರು.