
ವಿಶ್ವ ತೆಂಗು ದಿನ ಇಂದು| ತೋವಿನಕೆರೆ: ತೆಂಗಿನ ಸಸಿಗೆ ಬೇಡಿಕೆ; ದರ ಏರಿಕೆ
ತೋವಿನಕೆರೆ: ಎಳನೀರು, ತೆಂಗಿನಕಾಯಿ, ಕೊಬ್ಬರಿ, ಕೊಬ್ಬರಿ ಚಿಪ್ಪಿನ ಧಾರಣೆಯೂ ಗಗನಮುಖಿಯಾದಂತೆ ತೆಂಗಿನ ಸಸಿಗಳಿಗೆ ಬೇಡಿಕೆ ಹೆಚ್ಚಿದೆ.
ಜೂನ್ ಆರಂಭದಲ್ಲಿ ₹150– ₹200ಕ್ಕೆ ಒಂದು ತೆಂಗಿನ ಸಸಿ ಮಾರಾಟವಾಗಿದ್ದರೆ, ಇದೀಗ ₹450 ಕೊಟ್ಟರೂ ಸಸಿ ಎಲ್ಲಿಯೂ ದೊರಕದಾಗಿವೆ.
ದಶಕದಿಂದಲೂ ತೆಂಗಿನ ಮರಗಳು ವಿವಿಧ ರೋಗಕ್ಕೆ ತುತ್ತಾಗಿ ಲಕ್ಷ ಹೆಕ್ಟೇರ್‌ನಲ್ಲಿದ್ದ ಬೆಳೆ ನಶಿಸುತ್ತಿದೆ. ಇಳುವರಿ ಹಲವು ಪಟ್ಟು ಕುಸಿದಿದೆ. ಇದರಿಂದ ಬೇಸತ್ತಿದ್ದ ತೆಂಗು ಬೆಳೆಗಾರರು ಪರ್ಯಾಯದತ್ತ ತಮ್ಮ ಚಿತ್ತ ಹರಿಸಿದ್ದರು. ‘ಕಲ್ಪವೃಕ್ಷ’ವನ್ನು ಕೈಬಿಟ್ಟಿದ್ದರು. ಇದೀಗ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದಿದ್ದರಿಂದ ಮಾರುಕಟ್ಟೆಯಲ್ಲಿ ಧಾರಣೆ ಹೆಚ್ಚಿದ್ದು, ತೆಂಗಿನತ್ತ ಮತ್ತೆ ಹೊರಳುತ್ತಿದ್ದಾರೆ. ಇದರ ಪರಿಣಾಮ ಎಲ್ಲಿಯೂ ಸಸಿಗಳು ಸಿಗದಾಗಿವೆ.
ಜಿಲ್ಲೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳು, ತೋಟಗಾರಿಕೆ ನರ್ಸರಿಗಳಲ್ಲೂ ಸಸಿ ಸಿಗದಾಗಿವೆ. ಒಂದೆರಡು ವರ್ಷ ಮಳೆ ಕೈಕೊಟ್ಟರೂ, ಕೊಳವೆಬಾವಿಯಲ್ಲಿನ ನೀರು ಕಡಿಮೆಯಾದರೂ ತೆಂಗು ಬೆಳೆ ನಿರ್ವಹಣೆ ಸರಳ ಎಂಬ ಕಾರಣಕ್ಕೆ ಹಲವು ರೈತರು ಮತ್ತೆ ತೆಂಗು ಬೇಸಾಯದತ್ತ ಮುಖ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರವು ನೀಡುತ್ತಿದ್ದ ಸಹಾಯಧನವನ್ನು ಹೆಚ್ಚಿಸಿದೆ. ತೆಂಗು ಅಭಿವೃದ್ಧಿ ಮಂಡಳಿಯು ನೆರವು ನೀಡುತ್ತಿದೆ.
‘ಮೂರು ವರ್ಷದ ಹಿಂದೆ ತೆಂಗಿನ ಸಸಿಗಳನ್ನು ಕೇಳುವವರೇ ಇರಲಿಲ್ಲ. ಬೆಳೆಸಿದ್ದ ಪರಿಶ್ರಮದ ಕೂಲಿಯೂ ದೊರೆತಿರಲಿಲ್ಲ. ಕೊಬ್ಬರಿ ಧಾರಣೆ ಕ್ವಿಂಟಲ್‌ಗೆ ₹30 ಸಾವಿರದ ಆಸುಪಾಸಿರುವುದು ಸಸಿಗಳಿಗೆ ಬೇಡಿಕೆ ಹೆಚ್ಚಿಸಿದೆ. ಜಿಲ್ಲೆಯಲ್ಲಿ ತೆಂಗು ಟೆಕ್ನಾಲಜಿ ಪಾರ್ಕ್ ನಿರ್ಮಿಸುವಂತೆ ಒತ್ತಾಯಿಸಿ ಕೇಂದ್ರ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಭಾರತೀಯ ಕೃಷಿ ಸಂಶೋಧನಾ ಕೇಂದ್ರದ ನಾಮನಿರ್ದೇಶನ ಸಮಿತಿ ಸದಸ್ಯ, ಗುಬ್ಬಿ ತಾಲ್ಲೂಕಿನ ಅದಲಗೆರೆಯ ಪ್ರಗತಿಪರ ಕೃಷಿಕ ಎ.ಪಿ.ಶ್ರೀಕಂಠಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ತೆಂಗಿನ ಬೆಳೆಗೆ ತುಮಕೂರು ಜಿಲ್ಲೆ ಪ್ರಶಸ್ತ ವಾತಾವರಣ ಹೊಂದಿದೆ. ತಿಪಟೂರು ಟಾಲ್ ಸಸಿಗಳಿಗೆ ರಾಜ್ಯದಲ್ಲಷ್ಟೇ ಅಲ್ಲ, ದೇಶದ ವಿವಿಧೆಡೆಯೂ ಬೇಡಿಕೆ ಇದೆ. ಜೂನ್‌ನಿಂದ 3 ಲಕ್ಷ ಸಸಿಗಳಿಗೆ ಬೇಡಿಕೆ ಬಂದಿದೆ. ಈ ವರ್ಷ 1 ಲಕ್ಷ ಸಸಿಗಳನ್ನು ಭೂಮಿಗೆ ಹಾಕಿರಬಹುದು’ ಎಂದು ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಪ್ರಶಾಂತ್ ಹೇಳಿದರು.
‘ತೆಂಗಿನ ಉತ್ಪನ್ನಗಳಿಗೆ ಬೇಡಿಕೆಯಿದೆ. ಹೊಸದಾಗಿ ತೋಟ ಮಾಡುವವರಿಗೂ ಸರ್ಕಾರ ನೆರವು ನೀಡುತ್ತಿದೆ’ ಎಂದು ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಶಾರದಮ್ಮ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-17-1240761210