ಪಾಲಿಕೆ ಶಾಲೆಗಳಲ್ಲಿ ಮುಖಚರ್ಯೆ ಆಧಾರಿತ ಹಾಜರಾತಿ ಜಾರಿಗೊಳಿಸಿ: ಕೃಷ್ಣ ಬೈರೇಗೌಡ

ಪಾಲಿಕೆ ಶಾಲೆಗಳಲ್ಲಿ ಮುಖಚರ್ಯೆ ಆಧಾರಿತ ಹಾಜರಾತಿ ಜಾರಿಗೊಳಿಸಿ: ಕೃಷ್ಣ ಬೈರೇಗೌಡ

ಪಾಲಿಕೆ ಶಾಲೆಗಳಲ್ಲಿ ಮುಖಚರ್ಯೆ ಆಧಾರಿತ ಹಾಜರಾತಿ ಜಾರಿಗೊಳಿಸಿ: ಕೃಷ್ಣ ಬೈರೇಗೌಡ

ಬೆಂಗಳೂರು: ಐದೂ ನಗರ ಪಾಲಿಕೆಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ‘ಮುಖಚರ್ಯೆ ಆಧಾರಿತ ಹಾಜರಾತಿ ವ್ಯವಸ್ಥೆ’ ಜಾರಿಗೊಳಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.

ಅಭಿವೃದ್ಧಿ ಕಾಮಗಾರಿಗಳು, ಯೋಜನೆಗಳು, ಕಾರ್ಯಕ್ರಮಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮುಖಚರ್ಯೆ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಯಲ್ಲಿದ್ದು, ಆ ಮಾದರಿಯನ್ನು ಪಾಲಿಕೆ ಶಾಲೆಗಳಲ್ಲಿಯೂ ಅಳವಡಿಸಿಕೊಳ್ಳುವಂತೆ ಹೇಳಿದರು.

ಶಾಲಾ ಮಕ್ಕಳಿಗೆ ಸಮವಸ್ತ್ರಗಳನ್ನು ನಿಗದಿತ ಸಮಯದಲ್ಲಿ ವಿತರಿಸಬೇಕು. ಸಿಎಸ್‌ಆರ್ ಅನುದಾನದಲ್ಲಿ ಶೌಚಾಲಯಗಳನ್ನು ನಿರ್ಮಿಸಿ, ಅವುಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಪಾಲಿಕೆಗಳಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಬೇಕು ಎಂದು ಆಯುಕ್ತರಿಗೆ ತಿಳಿಸಿದರು.

ನಗರದಲ್ಲಿ ₹1,700 ಕೋಟಿ ವೆಚ್ಚದಲ್ಲಿ 120.60 ಕಿ.ಮೀ. ಉದ್ದದ 117 ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಪೈಕಿ 61.43 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಇರುವ 59.26 ಕಿ.ಮೀ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು.

ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಪಾದಚಾರಿ ಮಾರ್ಗಗಳನ್ನು ಅತಿಯಾಗಿ ಎತ್ತರಿಸುವ ಬದಲು, ವ್ಹೀಲ್‌ಚೇರ್‌ಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಿರ್ಮಿಸಬೇಕು. ಮರಗಳ ಸುತ್ತಲೂ ಗ್ರಾಸ್ ಪೇವರ್ ಬ್ಲಾಕ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುಷಮಾ ಗೋಡಬೋಲೆ, ನಿತೀಶ್, ವೆಂಕಟಾಚಲಪತಿ, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ. ಜಗದೀಶ್, ಡಾ. ರಾಜೇಂದ್ರ ಕೆ.ವಿ., ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ ಉಪಸ್ಥಿತರಿದ್ದರು.

‘ಪಾರ್ಕ್‌ ನಿರ್ವಹಣೆಯ ಹಣ ಲೂಟಿ’

ನಗರದಲ್ಲಿರುವ ಉದ್ಯಾನಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹಲವು ಉದ್ಯಾನಗಳಲ್ಲಿ ಕಸ ಹಾಗೆಯೇ ಬಿದ್ದಿದ್ದು, ಸಮರ್ಪಕವಾಗಿ ಕೆಲಸ ನಿರ್ವಹಿಸದೆ ನಿರ್ವಹಣೆಯ ಹೆಸರಿನಲ್ಲಿ ಹಣ ಲೂಟಿ ಮಾಡಲಾಗುತ್ತಿದೆಯೇ? ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

ಬೆಂಗಳೂರು ಹಿಂದೆ ಉದ್ಯಾನಗಳಿಗೆ ಹೆಸರುವಾಸಿಯಾಗಿತ್ತು. ಆದರೆ ಈಗ ಅವುಗಳ ಸ್ಥಿತಿ ಸರಿಯಿಲ್ಲ. ಸರಿಯಾಗಿ ನಿರ್ವಹಿಸದಿದ್ದರೆ, ನೀವೇ ಜವಾಬ್ದಾರರಾಗುತ್ತೀರಿ’ ಎಂದು ತೋಟಗಾರಿಕಾ ವಿಭಾಗದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸುಮನಹಳ್ಳಿಯಲ್ಲಿ ಮಾತ್ರ ಪ್ರಾಣಿಗಳ ಚಿತಾಗಾರವಿದ್ದು, ಉಳಿದ ಪಾಲಿಕೆಗಳಲ್ಲಿಯೂ ಪ್ರಾಣಿಗಳ ಚಿತಾಗಾರಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

‘ನಗರ ಹಾಳು ಮಾಡಲೆಂದೇ ಕೆಲಸ ಮಾಡುತ್ತಿದ್ದೀರಾ’

‘ಹೊರವಲಯ ರಸ್ತೆಯಲ್ಲಿ ಹೈಡೆನ್ಸಿಟಿ ಕಾರಿಡಾರ್ ಯೋಜನೆಯಡಿ ಪೂರ್ಣಗೊಂಡಿರುವ ಕಾಮಗಾರಿಗಳಲ್ಲಿ ಪ್ರತಿ 20 ಮೀಟರ್‌ಗೆ ಒಂದು ವಿದ್ಯುತ್ ಕಂಬ ಅಳವಡಿಸಬೇಕಿದೆ. ಆದರೆ ಹಳೆಯ ಹಾಗೂ ಹೊಸ ವಿದ್ಯುತ್ ಕಂಬಗಳನ್ನು ಒಳಗೊಂಡಂತೆ ಕೆಲವೆಡೆ 5ರಿಂದ 10 ಮೀಟರ್‌ಗೊಂದು ಕಂಬಗಳನ್ನು ಅಳವಡಿಸಿರುವುದು ಕಂಡುಬಂದಿದೆ. ಇದು ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡುತ್ತಿರುವ ಕಾಮಗಾರಿಯೇ ಅಥವಾ ಗುತ್ತಿಗೆದಾರರಿಗೆ ಬಿಲ್ ಪಾವತಿಸುವ ಉದ್ದೇಶದಿಂದ ಮಾಡುತ್ತಿರುವ ಕಾಮಗಾರಿಯೇ’ ಎಂದು ಸಚಿವರು ಪ್ರಶ್ನಿಸಿದರು.

‘ಬೆಂಗಳೂರು ಸುಧಾರಣೆಯಾಗಬೇಕೆಂದು ನೀವು ಕೆಲಸ ಮಾಡುತ್ತಿಲ್ಲ. ಹಾಳು ಮಾಡಲೆಂದೇ ಕೆಲಸ ಮಾಡುತ್ತಿದ್ದೀರಿ’ ಎಂದು ಬಿ-ಸ್ಮೈಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಿ-ಸ್ಮೈಲ್ ವತಿಯಿಂದ ಕೈಗೆತ್ತಿಕೊಳ್ಳುತ್ತಿರುವ ಎಲಿವೇಟೆಡ್ ಕಾರಿಡಾರ್, ರೋಟರಿ ಮೇಲ್ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳ ಕುರಿತು ಎಲ್ಲಾ ನಗರ ಪಾಲಿಕೆಗಳ ಹಿರಿಯ ಅಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ನೀಡಿ, ಕಾಮಗಾರಿಗಳ ಸಮಗ್ರ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-4-1483620361

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ