ಶಿರಸಿಯಲ್ಲಿ ಕೆಸರುಮಯ ಪಥದಲ್ಲೇ ಚಾಲನಾ ಪರೀಕ್ಷೆ

ಶಿರಸಿಯಲ್ಲಿ ಕೆಸರುಮಯ ಪಥದಲ್ಲೇ ಚಾಲನಾ ಪರೀಕ್ಷೆ

ಶಿರಸಿಯಲ್ಲಿ ಕೆಸರುಮಯ ಪಥದಲ್ಲೇ ಚಾಲನಾ ಪರೀಕ್ಷೆ

ಶಿರಸಿ: ಇಲ್ಲಿನ ಪ್ರಾದೇಶಿಕ ರಸ್ತೆ ಸಾರಿಗೆ ಕಚೇರಿ (ಆರ್.ಟಿ.ಒ) ವ್ಯಾಪ್ತಿಯಲ್ಲಿ ವಾಹನ ಚಾಲನಾ ಪರೀಕ್ಷೆಗೆ ಬರುವ ಸಾರ್ವಜನಿಕರು ಹಾಗೂ ಹವ್ಯಾಸಿ ಚಾಲಕರು ನಿತ್ಯವೂ ಹೈರಾಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿ ಮುಂಭಾಗದಲ್ಲಿದ್ದ ಹಳೆಯ ಚಾಲನಾ ಪರೀಕ್ಷಾ ಪಥ ಸಂಪೂರ್ಣವಾಗಿ ಹದಗೆಟ್ಟಿದ್ದು, ಸೂಕ್ತ ನಿರ್ವಹಣೆಯಿಲ್ಲದೆ ಕೆಸರಿನಿಂದ ಕೂಡಿದೆ.

ವರ್ಷದ ಹಿಂದೆ ನಗರದ ಬಶೆಟ್ಟಿಕೆರೆ ಪಕ್ಕದ ಆರ್.ಟಿ.ಒ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದರೂ, ಚಾಲನಾ ಪರೀಕ್ಷೆಯನ್ನು ಮಾತ್ರ ಇಂದಿಗೂ ಹಳೇ ಕಚೇರಿ ಆವರಣದಲ್ಲೇ ನಡೆಸಲಾಗುತ್ತಿದೆ. ಆದರೆ, ಈ ಹಳೆಯ ಕಟ್ಟಡದಲ್ಲಿ ಪ್ರಸ್ತುತ ಖಾಸಗಿ ಶಾಲೆಯೊಂದು ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿದಿನ ನೂರಾರು ಮಕ್ಕಳು ಈ ಆವರಣದಲ್ಲಿ ಸಂಚರಿಸುತ್ತಾರೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ಚಾಲನಾ ಪರೀಕ್ಷೆ ನಡೆಯುತ್ತಿರುವುದರಿಂದ ಪುಟ್ಟ ಮಕ್ಕಳಿಗೆ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ. ಇವೆಲ್ಲಕ್ಕಿಂತ ಮಿಗಿಲಾಗಿ, ಪ್ರಸ್ತುತ ಇರುವ ಚಾಲನಾ ಪಥವು ಮಣ್ಣಿನಿಂದ ಕೂಡಿದ್ದಾಗಿದ್ದು, ಇತ್ತೀಚೆಗೆ ಸುರಿದ ಭಾರಿ ಮಳೆಗೆ ಸಂಪೂರ್ಣ ಕೆಸರುಮಯವಾಗಿದೆ. ವಾಹನಗಳು ಆಯತಪ್ಪಿ ಬಿದ್ದು ಗಾಯಗೊಂಡ ಉದಾಹರಣೆಗಳೂ ಇವೆ.

ನಗರದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿರುವ ದೊಡ್ನಳ್ಳಿ ಸಮೀಪ ಆಧುನಿಕ ಉಪಕರಣಗಳನ್ನೊಳಗೊಂಡ ಸ್ವಯಂಚಾಲಿತ ಹೊಸ ಚಾಲನಾ ಪಥದ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಪ್ರಸ್ತುತ ಈ ಹೊಸ ಪಥದ ಸಿವಿಲ್ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆಯಾದರೂ, ವಾಹನಗಳ ಚಲನವಲನವನ್ನು ನಿಖರವಾಗಿ ಗುರುತಿಸುವ ಸೆನ್ಸಾರ್ ಹಾಗೂ ಡಿಜಿಟಲ್ ತಂತ್ರಜ್ಞಾನ ಉಪಕರಣಗಳ ಅಳವಡಿಕೆ ಕಾರ್ಯ ಇನ್ನು ಬಾಕಿಯಿದೆ. ತಾಂತ್ರಿಕ ಪ್ರಕ್ರಿಯೆಗಳು ವಿಳಂಬವಾಗುತ್ತಿರುವುದರಿಂದ ಹೊಸ ಪಥವು ಲೋಕಾರ್ಪಣೆಗೊಳ್ಳದೆ ಹಾಗೆಯೇ ಉಳಿದುಕೊಂಡಿದೆ’ ಎಂಬುದು ಇಲಾಖೆ ಅಧಿಕಾರಿಗಳ ಮಾತು.

‘ಹಳೆಯ ಪಥದಲ್ಲಿ ಸುಲಭವಾಗಿ ವಾಹನ ಚಲಾಯಿಸಲು ಸಾಧ್ಯವಾಗದೆ ಚಾಲನಾ ಪರೀಕ್ಷೆಗೆ ಬಂದವರು ಕಷ್ಟಪಡುತ್ತಿದ್ದರೆ, ಅಧಿಕಾರಿಗಳು ಮಾತ್ರ ತಾಂತ್ರಿಕ ಕಾರಣಗಳನ್ನು ನೀಡಿ ದಿನ ದೂಡುತ್ತಿದ್ದಾರೆ’ ಎಂದು ಚಾಲಕ ರವೀಶ ಗೌಡ ಆರೋಪಿಸಿದರು.

‘ಬಾಕಿಯಿರುವ ಸೆನ್ಸಾರ್ ಅಳವಡಿಕೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಹೊಸ ಸ್ವಯಂಚಾಲಿತ ಪಥವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಆ ಮೂಲಕ ಸಾರ್ವಜನಿಕರಿಗೆ ಎದುರಾಗಿರುವ ಜೀವಭಯ ಹಾಗೂ ಅನಾನುಕೂಲವನ್ನು ತಪ್ಪಿಸಬೇಕು’ ಎನ್ನುತ್ತಾರೆ ಅವರು.

ಸಾರಿಗೆ ವ್ಯವಸ್ಥೆ ಕಲ್ಪಿಸಿ

ಅಭಿವೃದ್ಧಿಯ ಹೆಸರಿನಲ್ಲಿ ಮೂಲಸೌಕರ್ಯಗಳನ್ನು ನಗರದಿಂದ 7 ಕಿಮೀ ದೂರಕ್ಕೆ ಒಯ್ಯುವಾಗ ಸಾರ್ವಜನಿಕರ ತಲುಪುವಿಕೆ ಹಾಗೂ ಸಾರಿಗೆ ಸಾಮೀಪ್ಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸುತ್ತಿದ್ದಾರೆ.

ಹೊಸ ಪಥ ಲೋಕಾರ್ಪಣೆಗೊಳ್ಳುವ ಮುನ್ನವೇ ಬಹು ದೂರ ಎಂಬ ದೂರು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದ್ದು, ಕನಿಷ್ಠ ಪಕ್ಷ ಅಲ್ಲಿಗೆ ಸುಲಭವಾಗಿ ತಲುಪಲು ನಗರದಿಂದ ನಿಯಮಿತ ಎನ್‍ಡಬ್ಲ್ಯುಕೆಆರ್‌ಟಿಸಿ ಸಾರಿಗೆ ವ್ಯವಸ್ಥೆಯನ್ನಾದರೂ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-20-33197398

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ