
ಮಂಕಾಗುತ್ತಿದೆ ತುರುವೇಕೆರೆ ಎಪಿಎಂಸಿ: ಕೊಬ್ಬರಿ ವ್ಯಾಪಾರದ ಮೇಲೇ ಅವಲಂಬನೆ
ತುರುವೇಕೆರೆ: ಪಟ್ಟಣವು ‘ಕಾಯಿ ಸೀಮೆ’ ಎಂದು ಪ್ರಸಿದ್ಧಿ ಹೊಂದಿದ್ದರೂ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಬಹುತೇಕ ಕೊಬ್ಬರಿ ವ್ಯಾಪಾರವನ್ನೇ ಅವಲಂಬಿಸಿದೆ. ಉಂಡೆ ಕೊಬ್ಬರಿಗೆ ವೈಜ್ಞಾನಿಕ ಮತ್ತು ಬೆಂಬಲ ಬೆಲೆ ಸಿಕ್ಕಲ್ಲಿ ಮಾತ್ರ ಎಪಿಎಂಸಿ ಸದೃಢವಾಗುವುದರ ಜತೆಗೆ ತೆಂಗು ಬೆಳೆಗಾರರ ಆರ್ಥಿಕ ಮಟ್ಟವೂ ಉತ್ತಮಗೊಳ್ಳಲಿದೆ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು 1959ರಲ್ಲಿ ಸ್ಥಾಪನೆಯಾಗಿದೆ. ನೂತನ ಕಟ್ಟಡದ ಉದ್ಘಾಟನೆ 1986ರಲ್ಲಿ ನಡೆಯಿತು. ಎಪಿಎಂಸಿ 12 ಎಕರೆ 7 ಕುಂಟೆ ವಿಸ್ತೀರ್ಣ ಹೊಂದಿದೆ. ಪ್ರತಿ ಸೋಮವಾರ ಮತ್ತು ಗುರುವಾರ ಕೊಬ್ಬರಿ ಹರಾಜು ನಡೆಯುತ್ತದೆ.
ತಾಲ್ಲೂಕಿನ ದಂಡಿನಶಿವರ, ಕಸಬಾ, ದಬ್ಬೇಘಟ್ಟ ಮತ್ತು ಮಾಯಸಂದ್ರ ಹೋಬಳಿಯ ರೈತರು ಈ ಮಾರುಕಟ್ಟೆಗೆ ಶೇ 60ರಷ್ಟು ಕೊಬ್ಬರಿ ತರುತ್ತಾರೆ. ಉಳಿದ ಶೇ 40ರಷ್ಟು ಕೊಬ್ಬರಿಯನ್ನು ಗಡಿಭಾಗದ ರೈತರು ತಿಪಟೂರು ಮತ್ತು ಗುಬ್ಬಿ ತಾಲ್ಲೂಕಿನ ವರ್ತಕರಿಗೆ ಮಾರುತ್ತಾರೆ. ಹೀಗಾಗಿ ತಾಲ್ಲೂಕಿನ ಎಪಿಎಂಸಿಗೆ ಬರುವ ಆದಾಯವೂ ಕಡಿಮೆಯಾಗುತ್ತದೆ.
ಇಲ್ಲಿನ ಎಪಿಎಂಸಿಯಲ್ಲಿ ಉಂಡೆ ಕೊಬ್ಬರಿ ವ್ಯಾಪಾರವೇ ಜೋರು. ರಾಜ್ಯ ಉಗ್ರಾಣ ನಿಗಮದ ಎರಡು ರಾಗಿ ಖರೀದಿ ಕೇಂದ್ರಗಳಿವೆ. ಕೆ.ಎಫ್.ಸಿ.ಎಸ್.ಸಿ ಗೋದಾಮು ಇದೆ. ಸಣ್ಣ ಮತ್ತು ಸಾಧಾರಣ ಮಟ್ಟದ 40 ಮಳಿಗೆಗಳಿವೆ. ಇವುಗಳಿಂದ ಪ್ರತಿ ತಿಂಗಳು ₹1.15 ಲಕ್ಷ ಬಾಡಿಗೆ ಬರುತ್ತಿದೆ.
ಕಚೇರಿ ಸಿಬ್ಬಂದಿ, ರೈತರು, ವರ್ತಕರು ಮತ್ತು ಹಮಾಲಿಗಳಿಗೆಂದು ಅಲ್ಲಲ್ಲಿ 14 ಶೌಚಾಲಯಗಳಿವೆ. ರೈತರು ಮತ್ತು ಹಮಾಲಿಗಳಿಗೆ ಕ್ಯಾಂಟೀನ್ ಸೌಲಭ್ಯವಿದೆ. ಎರಡು ಕುಡಿಯುವ ನೀರಿನ ಘಟಗಳಿವೆ. ಇಲ್ಲಿನ ಮಂಡಿಗಳಲ್ಲಿ ಕೆಲಸ ಮಾಡುವ 42 ಹಮಾಲಿಗಳು ವಿಶ್ರಾಂತಿ ಪಡೆಯಲು ಶ್ರಮಿಕ ಭವನ ಇದೆ.
ಸಿಬ್ಬಂದಿ ಕೊರತೆ: ಮಾರುಕಟ್ಟೆ ಉತ್ತಮ ಆಡಳಿತ ನಿರ್ವಹಣೆಗೆ ಸಾಕಷ್ಟು ಸಿಬ್ಬಂದಿ ಬೇಕಾಗಿದ್ದಾರೆ. ಆದರೆ ಇಲ್ಲಿ ಕಾರ್ಯದರ್ಶಿ ಮತ್ತು ಲೆಕ್ಕಿಗರ ಹುದ್ದೆ ಹೊರತುಪಡಿಸಿ, ಸಹಾಯಕ ಕಾರ್ಯದರ್ಶಿ (1), ಮಾರಾಟ ಸಹಾಯಕರು (3), ಎಫ್.ಡಿ.ಎ (1) ಮತ್ತು 2 ಸಿಪಾಯಿ ಹುದ್ದೆ ಖಾಲಿ ಇವೆ. ಈ ಖಾಲಿ ಹುದ್ದೆಗಳಿಂದ ಎಪಿಎಂಸಿಯ ದೈನಂದಿನ ಕಾರ್ಯ ಪ್ರಕ್ರಿಯೆ ವೇಗ ಕುಂಠಿತವಾಗುತ್ತಿದೆ. ಅದರಿಂದ ಮಾರುಕಟ್ಟೆ ಅಭಿವೃದ್ಧಿಗೂ ಹಿನ್ನಡೆಯಾಗುತ್ತಿದೆ ಎನ್ನುವುದು ಗ್ರಾಹಕರು ಅಭಿಪ್ರಾಯ.
ನನೆಗುದಿಗೆ ಬಿದ್ದ ಸಮಿತಿ ಚುನಾವಣೆ: ರೈತರ ಬೇಡಿಕೆ ಮತ್ತು ಎಪಿಎಂಸಿಯ ಶ್ರೇಯೋಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮತ್ತು ನಿರ್ದೇಶಕರ ಆಯ್ಕೆಯು ಹಿಂದೆ ಚುನಾವಣೆ ಮೂಲಕ ನಡೆಯುತ್ತಿತ್ತು. ಇದರಿಂದ ಇಲ್ಲಿಗೆ ಕೊಬ್ಬರಿ ತರುವ ರೈತರು, ವರ್ತಕರು ಹಾಗೂ ಮಾರುಕಟ್ಟೆ ಹಿತಾಸಕ್ತಿ ಕಾಪಾಡಲು ಸಾಧ್ಯವಾಗುತ್ತಿತ್ತು. ಆದರೆ, 2022ರಲ್ಲಿ ಈ ಸಮಿತಿಯ ಆಡಳಿತ ಮಂಡಳಿ ಅಧಿಕಾರ ಮುಗಿದು ನಾಲ್ಕು ವರ್ಷಗಳಾದರೂ ಸರ್ಕಾರ ಇಲ್ಲಿವರೆಗೂ ಚುನಾವಣೆ ನಡೆಸುವ ಇಚ್ಛಾಶಕ್ತಿಯನ್ನೇ ತೋರಿಲ್ಲ ಎಂದು ಸಾರ್ವಜನಿಕರು ಆಕ್ಷೇಪಿಸುತ್ತಾರೆ.
ಪರವಾನಗಿ ಪಡೆದ 112 ವರ್ತಕರು ವ್ಯಾಪಾರ ವಹಿವಾಟು ನಡೆಸುತ್ತಾರೆ. ಇವರು ಪ್ರತಿ ₹100ಕ್ಕೆ 60 ಪೈಸೆಯಂತೆ ತಿಂಗಳಲ್ಲಿ ಎಷ್ಟು ಮೊತ್ತದ ವಹಿವಾಟು ಮಾಡಿದ್ದಾರೊ ಆ ಮೊತ್ತಕ್ಕೆ ಎಪಿಎಂಸಿಗೆ ಶುಲ್ಕ ಸಂದಾಯ ಮಾಡುತ್ತಾರೆ.
‘ಕಳೆದ ಎರಡು ವರ್ಷಗಳಿಂದಲೂ ಉಂಡೆ ಕೊಬ್ಬರಿಗೆ ಉತ್ತಮ ಬೆಲೆ ಸಿಗುತ್ತಿರುವ ಕಾರಣ ನಾಫೆಡ್ ತೆರೆಯುತ್ತಿಲ್ಲ. ಒಂದು ವೇಳೆ ಬೆಲೆ ಕುಸಿತವಾದರೆ ನಾಫೆಡ್ ತೆರೆಯುತ್ತಾರೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ’ ಎಂದು ತೆಂಗು ಬೆಳೆಗಾರರ ಸಂಘದ ಮಾಚೇನಹಳ್ಳಿ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟಿದ್ದಾರೆ.
ಮಾರುಕಟ್ಟೆಗೆ ಕೊಬ್ಬರಿ ಪೂರೈಕೆ ಪ್ರಮಾಣ 2023-24ರಲ್ಲಿ 50,753 ಕ್ವಿಂಟಲ್, 2024-25ರಲ್ಲಿ 2,33,433 ಕ್ವಿಂಟಲ್ ಮತ್ತು 2025-26ರಲ್ಲಿ 1,78,638 ಕ್ವಿಂಟಲ್ ಬಂದಿದೆ.
ಇಲ್ಲಿ ಬೆಳೆಯುವ ತೆಂಗಿನಕಾಯಿಗೆ ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಪ್ರಾದೇಶಿಕ ಪ್ರಾಶಸ್ತ್ಯವಿದೆ. ಈ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ವ್ಯಾಪಾರಕ್ಕೆ ಉತ್ತೇಜನ ದೊರೆಯುತ್ತಿಲ್ಲ. ಹಿಂದೆ ಇಲ್ಲಿ ತೆಂಗಿನಕಾಯಿ ಸಂತೆಯು ನಡೆಯುತ್ತಿತ್ತು. ಕಾಲಕ್ರಮೇಣ ಅದೂ ನಿಂತುಹೋಯಿತು ಎಂಬುದು ರೈತರ ಬೇಸರ.
ಏನೇನು ಬೇಕು: ಇಲ್ಲಿನ ರಸ್ತೆಗಳು ಹಾಳಾಗಿದ್ದು ಮಳೆಗಾಲದಲ್ಲಿ ಕೆಸರುಮಯವಾಗುತ್ತವೆ. ಸಿಸಿ ರಸ್ತೆ ನಿರ್ಮಿಸಬೇಕು. ಕೊಬ್ಬರಿ ಸಂಗ್ರಹಕ್ಕೆ ಶೀತಲ ಘಟಕ ತೆರೆಯಬೇಕು. ಆನ್‌ಲೈನ್ ಮೂಲಕ ಟೆಂಡರ್ ಮಾಡುವ ನಿಯಮ ರೂಪಿಸಬೇಕು ಎಂದು ಸಾರ್ವಜನಿಕರ ಒತ್ತಾಯ.
₹3.40 ಕೋಟಿಗೆ ಪ್ರಸ್ತಾವ
ಕುರಿ ಸಂತೆಗೆ ಸೌಕರ್ಯದ ಕೊರತೆ
ತಾಲ್ಲೂಕಿನಾದ್ಯಂತ ರೈತರು ಸಾಕಿದ ಕುರಿ, ಮೇಕೆ ಮತ್ತು ಹೋತಗಳನ್ನು ಪ್ರತಿ ಸೋಮವಾರ ಇಲ್ಲಿನ ಮಾರುಕಟ್ಟೆಗೆ ತಂದು ಮಾರುತ್ತಾರೆ. ಮೇಕೆ ವ್ಯಾಪಾರ ಮಾರುಕಟ್ಟೆಯೊಳಗಿನ ರಸ್ತೆಗಳಲ್ಲೇ ನಡೆಯುತ್ತದೆ. ತಿಪಟೂರು ತಾಲ್ಲೂಕಿನ ‘ಕಲ್ಪತರು’ ಮತ್ತು ‘ಉಣ್ಣೆ ಉತ್ಪಾದಕರ ಸಹಕಾರ ಸಂಘ’ ಇದರ ನಿರ್ವಹಣೆ ಮಾಡುತ್ತಿದೆ. ಪ್ರತಿ ಕುರಿ ಅಥವಾ ಮೇಕೆಗೆ ₹5 ಸುಂಕ ಸಂಗ್ರಹಿಸಲಾಗುತ್ತಿದೆ. ಆದರೆ ಸಂತೆಗೆ ಬೇಕಾದ ಸೌಕರ್ಯ ಒದಗಿಸುತ್ತಿಲ್ಲ ಎಂದು ರೈತರು ದೂರಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-17-1975530422