
ಬೆಂಗಳೂರು| ಮುಗಿಯದ ರಸ್ತೆ ಕಾಮಗಾರಿ: ಜನರಿಗೆ ದಿನವೂ ಕಿರಿಕಿರಿ
ಬೆಂಗಳೂರು: ಬಿಸಿಲಿದ್ದರೆ ದೂಳಿನಲ್ಲಿ ಕಣ್ಣು ಬಿಡುವುದೇ ಕಷ್ಟ, ಮಳೆ ಬಂದರೆ ಹೊಂಡ ಯಾವುದು ಎಂದು ಗೊತ್ತಾಗದೇ ಅಪಘಾತಗಳು ಉಂಟಾಗುವ ಸಂಕಷ್ಟ.
ಇದು ವಿದ್ಯಾಪೀಠ ವಾರ್ಡ್‌ನ ವಿನಾಯಕನಗರ, ಶ್ರೀನಿವಾಸನಗರದ ಅಯೋಮಯ ಸ್ಥಿತಿ.
ವಿನಾಯಕ ನಗರದ ಶಂಕರನಾಗ್ ಸರ್ಕಲ್‌ನಿಂದ ಹೊಸಕೆರೆಹಳ್ಳಿ ಕಡೆಗೆ ಸಾಗುವ ರಸ್ತೆಯ ಕಾಂಕ್ರಿಟ್ ಅನ್ನು ಕಿತ್ತು ಹಾಕಲಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಮಳೆ ನೀರಿನ ಚರಂಡಿ ನಿರ್ಮಿಸಲು, ಯುಟಿಲಿಟಿ ಪೈಪ್ ಅಳವಡಿಸಲು ಗುಂಡಿ ತೋಡಲಾಗಿದೆ. ಇದರಿಂದಾಗಿ ಜನರಿಗೆ ಸಮಸ್ಯೆ ತಪ್ಪದಾಗಿದೆ.
ಹೊಸಕೆರೆಹಳ್ಳಿ– ವಿದ್ಯಾಪೀಠ ನಡುವಿನ 80 ಅಡಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭವಾಗಿ ವರ್ಷ ಕಳೆದರೂ ಪೂರ್ಣಗೊಂಡಿಲ್ಲ. 2.7 ಕಿ.ಮೀ. ಕಾಮಗಾರಿಯಲ್ಲಿ ಒಂದೂವರೆ ಕಿಲೋಮೀಟರ್ ಮಾತ್ರ ಮುಗಿದಿದ್ದು, ಉಳಿದ ಭಾಗದಲ್ಲಿ ಸಂಚಾರ ಸಮಸ್ಯೆಯಾಗಿದೆ. ಪಾದಚಾರಿಗಳು ನಡೆಯಲೂ ಪರದಾಡುವಂತಾಗಿದೆ.
‘ಮೊದಲು ಕೇಬಲ್ ಹಾಕುವುದಾಗಿ ತೋಡಿ, ಮುಚ್ಚಿದರು. ಆ ನಂತರ ಪೈಪ್‌ಲೈನ್ ಮಾಡ್ತೇವೆ ಎಂದು ತೋಡಿದರು. ಈಗ ವೈಟ್‌ಟಾಪಿಂಗ್‌ಗಾಗಿ ತೋಡುತ್ತಿದ್ದೇವೆ ಎಂದು ದಿನಕ್ಕೊಂದು ಕಥೆ ಹೇಳುತ್ತಿದ್ದಾರೆ. ವರ್ಷದಿಂದ ಸಮಸ್ಯೆ ಮಾತ್ರ ಪರಿಹಾರಗೊಳ್ಳುತ್ತಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
‘ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಅಡ್ಡರಸ್ತೆಗಳಲ್ಲೂ ಕೊಳವೆ ಹಾಗೂ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ರಸ್ತೆ ಉಬ್ಬುತಗ್ಗಿನಿಂದ ಕೂಡಿರುವ ಕಾರಣ ದ್ವಿಚಕ್ರ ವಾಹನ ಸವಾರರು ಇಲ್ಲಿಯೂ ಸಮಸ್ಯೆ ಎದುರಿಸು
ತ್ತಿದ್ದಾರೆ’ಎಂದು ಹೇಳಿದರು.
ನಿತ್ಯ ವಾಹನ ದಟ್ಟಣೆ ಇರುವ ಈ ರಸ್ತೆಯಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವವರು, ಕೆಲಸಕ್ಕೆ ತೆರಳುವವರು ಹೆಚ್ಚಿರುವುದರಿಂದ ಬೆಳಿಗ್ಗೆ ಮತ್ತು ಸಂಜೆ ವಿಪರೀತ ದಟ್ಟಣೆ ಉಂಟಾಗುತ್ತಿದೆ. ರಸ್ತೆಗಳನ್ನು ಅಗೆದು ಹಾಕಿರುವುದರಿಂದ ವಾಹನಗಳು ಸರಾಗವಾಗಿ ಸಾಗಲು ಸಾಧ್ಯ
ವಾಗದೇ ಇರುವುದೇ ಸಮಸ್ಯೆಗೆ ಮೂಲ ಎಂದು ಸ್ಥಳೀಯರು ವಿವರಿಸಿದರು.
ಕೊಳವೆಗಳು, ಕಾಂಕ್ರೀಟ್ ಸ್ಲ್ಯಾಬ್ ಗಳನ್ನು ರಸ್ತೆಯಲ್ಲಿಯೇ ಇರಿಸಿದ್ದು, ಸಂಚಾರಕ್ಕೆ ತೊಡಕಾಗಿದೆ. ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
‘ಕೊಳವೆ ಅಳವಡಿಕೆ ಕಾಮಗಾರಿ ಬಹುತೇಕ ಮುಗಿದಿದ್ದು ಕೆಲವೇ
ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಜಲಮಂಡಳಿ ಎಂಜಿನಿಯರ್ ತಿಳಿಸಿದರು
ರಸ್ತೆಗಳನ್ನು ಅಗೆದು ಹಾಕುವುದು ಕಾಣುತ್ತದೆ. ಮುಚ್ಚುವುದು ಕಾಣುತ್ತಿಲ್ಲ. ಸರಿ ಇದ್ದ ರಸ್ತೆಯನ್ನು ಹಾಳು ಮಾಡುವುದು ಎಂದರೆ ನಮ್ಮನ್ನು ಆಳುವವರಿಗೆ ಖುಷಿಯ ವಿಷಯ ಇರಬೇಕು. ಜನರು ಹೊಂಡಗಳಿಗೆ ಬಿದ್ದು ಸಾಯುವ ಮೊದಲು ರಸ್ತೆ ಸರಿಪಡಿಸಬೇಕು.
ರಸ್ತೆ ಅಗೆದು ಸರಿಯಾಗಿ ಮುಚ್ಚದ ಕಾರಣ ಅಪಘಾತಗಳು ಹೆಚ್ಚಿವೆ. ಇಂಥ ಕೆಟ್ಟ ರಸ್ತೆಯಲ್ಲಿ ಸಾಗುವ ವಾಹನಗಳು ಬೇಗ ಹಾಳಾಗುತ್ತವೆ. ಆದಷ್ಟು ಬೇಗ ವೈಟ್‌ಟಾಪಿಂಗ್ ಕಾಮಗಾರಿ ಮುಗಿಸುವ ಮೂಲಕ ಜನಸಂಪರ್ಕದ ರಸ್ತೆಯಲ್ಲಿ ಜನರು ಆತಂಕ ಇಲ್ಲದೇ ಓಡಾಡುವಂತೆ ಮಾಡಬೇಕು.
ವರ್ಷದಿಂದ ರಸ್ತೆ ಬದಿಯಲ್ಲಿ ಅಗೆದು, ಸರಿಯಾಗಿ ಮುಚ್ಚದೇ ಬಿಡುವ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ಕೆಲವು ದಿನಗಳ ಹಿಂದೆ ರಸ್ತೆಯನ್ನೇ ಪೂರ್ತಿ ಅಗೆದು ಹಾಕಿದ್ದಾರೆ. ಮಳೆ ಬಂದರೆ ರಸ್ತೆ ಯಾವುದು, ಹೊಂಡ ಯಾವುದು ಎಂದು ಗೊತ್ತಾಗುತ್ತಿಲ್ಲ. ನನ್ನ ಬೈಕ್ ಹಲವು ಬಾರಿ ಹೊಂಡದಲ್ಲಿ ಸಿಲುಕಿಕೊಂಡಿದೆ.
ನಾರಾಯಣ ರಾವ್, ಬ್ಯಾಂಕ್ ಕಾಲೊನಿ
ರಸ್ತೆ ಅಗೆದು ಹಾಕಿ ರುವುದರಿಂದ ವಾಹನಗಳ ಪಾರ್ಕಿಂಗ್ ಮಾಡಲು, ಪಾದಚಾರಿಗಳಿಗೆ ನಡೆಯಲು ಜಾಗವಿಲ್ಲ. ಇದರಿಂದ ಜನರು ಈ ಕಡೆ ಬಾರದೇ ಅಂಗಡಿ, ಹೋಟೆಲ್‌ಗಳಿಗೆ ವ್ಯಾಪಾರ ಇಲ್ಲದಂತಾಗಿದೆ. ಆದಷ್ಟು ಬೇಗ ದುರಸ್ತಿ ಕಾರ್ಯ ಮುಗಿಸಬೇಕು.
ಡಿ.ಕೆ. ಕೆಂಪಣ್ಣ, ಶ್ರೀನಿವಾಸನಗರ