ಬಿಡದಿ: ಜಿಬಿಐಟಿ ಯೋಜನೆ ವಿರೋಧಿಸಿ ಅನಿರ್ದಿಷ್ಟಾವಧಿ ಉಪವಾಸ, ರೈತರು ಅಸ್ವಸ್ಥ
ಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ವಿರೋಧಿಸಿ ಬೈರಮಂಗಲ ವೃತ್ತದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಂಗಳವಾ ರವೂ ಮುಂದುವರಿದಿದೆ. ಉಪವಾಸನಿರತ ಆರು ರೈತರು ಮಧ್ಯಾಹ್ನ ಅಸ್ವಸ್ಥ
ರಾಗಿದ್ದು, ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಸೋಮವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರಾದ ನಾಗೇಶ್, ಕೃಷ್ಣಪ್ಪ, ವೀರೇಶ್ ಸೇರಿದಂತೆ ಆರು ಮಂದಿ ಮಧ್ಯಾಹ್ನ ಅಸ್ವಸ್ಥರಾದರು. ಸ್ಥಳಕ್ಕೆ ಬಂದ ವೈದ್ಯರು ಮೂವರಿಗೂ ಹಣ್ಣಿನ ರಸ ಕುಡಿಸಿ ಚಿಕಿತ್ಸೆ ನೀಡಿದರು. ಆದರೂ ಚೇತರಿಸಿಕೊಳ್ಳದ ಅವರನ್ನು ಆಂಬುಲೆನ್ಸ್‌ನಲ್ಲಿ ಸಮೀಪದ
ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕರೆ
ದೊಯ್ಯಲಾಯಿತು. ಸದ್ಯ ಎಲ್ಲರೂ ಚೇತರಿಸಿ ಕೊಂಡಿದ್ದಾರೆ ಎಂದು ಸಮಿತಿಯವರು ತಿಳಿಸಿದರು.
ಮಂಗಳವಾರ ಬೆಳಿಗ್ಗೆ ಬಿಡದಿ- ಹಾರೋಹಳ್ಳಿ ಮುಖ್ಯರಸ್ತೆಯನ್ನು ಬಂದ್ ಮಾಡಿದ ರೈತರು, ರಸ್ತೆಯಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಉಪವಾಸ ಕುಳಿತರು. ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ಭೂಮಿ ಉಳಿಸಿಕೊಳ್ಳಲು 18 ತಿಂಗಳಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದೇವೆ. ಬೇಡಿಕೆಗೆ ಸ್ಪಂದಿಸದ ಸರ್ಕಾರ ಬಲವಂತವಾಗಿ ಭೂಸ್ವಾಧೀನ ನಡೆಸುತ್ತಿದೆ’ ಎಂದು ಭೂ ಹಿತರಕ್ಷಣಾ ಸಂಘದ ಹೊಸೂರು ಪ್ರಕಾಶ್ ಆರೋಪಿಸಿದರು. ಸರ್ಕಾರ
ಸ್ಪಂದಿಸುವವರೆಗೆ ಈ ಹೋರಾಟ ನಿಲ್ಲದು’ ಎಂದು ಸಂಘದ ಖಜಾಂಚಿ ಮಂಡಲಹಳ್ಳಿ ನಾಗರಾಜ್ ಹೇಳಿದರು.
’ಬದುಕು ಬೀದಿಗೆ ಬಂದಿದೆ‘
‘ಯೋಜನಾ ಪ್ರದೇಶದಲ್ಲಿರುವ ಬಹುತೇಕ ರೈತರು ತುಂಡು ಭೂಮಿ ಹೊಂದಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಜೊತೆಗೆ ಹೈನುಗಾರಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದೇವೆ. ಯೋಜನೆಗೆ ಭೂಮಿ ಕೊಡುವ ರೈತರಿಗೆ ಸರ್ಕಾರ ಉದ್ಯೋಗ ಕೊಡುತ್ತದೆಯೇ? ಆಗಲೂ ನಾವು ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸಲು ಸಾಧ್ಯವೇ’ ಎಂದು ಹೋರಾಟನಿರತ ಮಹಿಳೆಯರು ಪ್ರಶ್ನಿಸಿದರು.
‘ಊರು ಮನೆಯಲ್ಲೇ ಕೃಷಿ ಜೊತೆಗೆ ಕೂಲಿ ಮಾಡಿಕೊಂಡು ಬದುಕುತ್ತಿರುವ ನಮ್ಮನ್ನು ಸರ್ಕಾರ ಟೌನ್‌ಶಿಪ್ ಹೆಸರಲ್ಲಿ ಬೀದಿಗೆ ತರಲು ಮುಂದಾಗಿದೆ. ನಮಗೆ ಟೌನ್‌ಶಿಪ್ ಬೇಡ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಲಿ. ಯೋಜನೆ ಪರವಾಗಿರುವವರ ಭೂಮಿಯಲ್ಲಿ ಟೌನ್‌ಶಿಪ್ ಮಾಡಿಕೊಳ್ಳಲಿ’ ಎಂದು ಆಗ್ರಹಿಸಿದರು.