ಮಡಿಕೇರಿ: ಸರ್ವರ್ ಮಂದಗತಿ; ಪಡಿತರಕ್ಕಾಗಿ ಪರದಾಟ

ಮಡಿಕೇರಿ: ಸರ್ವರ್ ಮಂದಗತಿ; ಪಡಿತರಕ್ಕಾಗಿ ಪರದಾಟ

ಮಡಿಕೇರಿ: ಸರ್ವರ್ ಮಂದಗತಿ; ಪಡಿತರಕ್ಕಾಗಿ ಪರದಾಟ

ಮಡಿಕೇರಿ: ಮಂದಗತಿಯ ಸರ್ವರ್‌ ನಿಂದಾಗಿ ಆಗಸ್ಟ್‌ ತಿಂಗಳಿನಲ್ಲಿ ಪಡಿತರ ಪಡೆಯಲು ಪಡಿತರಚೀಟಿದಾರರು ಇನ್ನಿಲ್ಲದ ಪಡಿಪಾಟಿಲು ಅನುಭವಿಸಿದರು. ಒಬ್ಬೊಬ್ಬರೂ ಎರಡೆರಡು ಬಾರಿ ಬೆರಳಚ್ಚು (ಬಯೊಮೆಟ್ರಿಕ್‌) ನೀಡುವಷ್ಟರಲ್ಲಿ ಹೈರಣಾದರು.

ಸರ್ವರ್ ತೀರಾ ಮಂದಗತಿಯಲ್ಲಿ ಇದ್ದುದ್ದರಿಂದ ನ್ಯಾಯಬೆಲೆ ಅಂಗಡಿಗಳ ಮುಂದೆ ಜನರು ಕಾದು ನಿಂತು ಬಸವಳಿದರು. ಈ ಸಮಸ್ಯೆ ಕೊಡಗು ಜಿಲ್ಲೆಯ ಬಹುತೇಕ ಎಲ್ಲ 274 ನ್ಯಾಯ ಬೆಲೆ ಅಂಗಡಿಗಳಲ್ಲೂ ಕಂಡು ಬಂತು.

ಆಗಸ್ಟ್ ತಿಂಗಳ ಉದ್ದಗಲಕ್ಕೂ ಕಂಡು ಬಂದ ಈ ಸಮಸ್ಯೆಯಿಂದಾಗಿ ಪಡಿತರ ವಿತರಣೆಯೂ ವಿಳಂಬವಾಯಿತು. ಮಹಿಳೆಯರು, ವೃದ್ದರು ‍ಪಡಿತರ ಪಡೆದುಕೊಂಡು ಮನೆಗೆ ವಾಪಸ್ಸಾಗುವಷ್ಟರಲ್ಲಿ ಅಕ್ಷರಶಃ ಹೈರಣಾದರು. ಸಾಲುಗಟ್ಟಿ ನಿಂತು ಆ ದಿನದ ಕೂಲಿ ಇಲ್ಲದೇ ಮನೆಗೆ ಮರಳುವಂತಹ ಸ್ಥಿತಿ ಕೂಲಿಕಾರ್ಮಿಕರದ್ದಾಗಿತ್ತು.

‘ಕೆಲವು ದಿನಗಳಲ್ಲಿಯಂತೂ ಸಮಸ್ಯೆ ಮತ್ತೂ ಜೋರಾಗಿತ್ತು. ಒಬ್ಬೊಬ್ಬರ ಬೆರಳಚ್ಚು (ಬಯೊಮೆಟ್ರಿಕ್‌) ಪೂರ್ಣಗೊಳ್ಳಬೇಕಾದರೆ ಕನಿಷ್ಠ 15–20 ನಿಮಿಷಗಳಷ್ಟು ಕಾಲ ಹಿಡಿಯುತ್ತಿತ್ತು. ಇದರಿಂದ ನಮಗೆ ರೋಸಿ ಹೋಗಿತ್ತು, ಇನ್ನು ಜನರ ಸ್ಥಿತಿ ಹೇಗಾಗಿರಬೇಡ’ ಎಂದು ನ್ಯಾಯಬೆಲೆ ಅಂಗಡಿಯೊಂದರ ಮಾಲೀಕರು ‘ಪ್ರಜಾವಾಣಿ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

‘ಬೇರೆ ಜಿಲ್ಲೆಗಳಲ್ಲಿ ಇದ್ದಷ್ಟು ಸಮಸ್ಯೆ ಕೊಡಗು ಜಿಲ್ಲೆಯಲ್ಲಿರಲಿಲ್ಲ. ಆದರೂ, ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್‌ ತಿಂಗಳಿನಲ್ಲಿ ಸಮಸ್ಯೆಯಂತೂ ಇತ್ತು’ ಎಂದು ಮತ್ತೊಂದು ನ್ಯಾಯಬೆಲೆ ಅಂಗಡಿಯ ಮಾಲೀಕರು ಹೇಳಿದರು.

ಪರಿಸ್ಥಿತಿ ಮನಗಂಡ ಕೊಡಗು ಜಿಲ್ಲೆಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಭಾನುವಾರವೂ ಪಡಿತರ ವಿತರಣೆಗೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಚಿಸಿದ್ದರು. ಹಲವೆಡೆ ಭಾನುವಾರವೂ ವಿತರಣೆ ಕಾರ್ಯ ನಡೆದಿರುವುದರಿಂದ ನಿಗದಿತ ಗುರಿ ತಲುಪಲು ಸಾಧ್ಯವಾಗಿದೆ.

ಈ ಆಗಸ್ಟ್‌ ತಿಂಗಳಿನಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯ ಪಡಿತರ ವಿತರಣೆ ನಡೆದಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್‌ ತಿಂಗಳು ಸೇರಿಸಿ ಒಟ್ಟು 10 ಕೆ.ಜಿ ಅಕ್ಕಿ ಬಿಪಿಎಲ್ ಪಡಿತರಚೀಟಿದಾರರಿಗೆ ಸಿಕ್ಕಿದೆ.

‘ಈ ಯೋಜನೆಯಡಿ ಎರಡು ಬಾರಿ ಬಯೊಮೆಟ್ರಿಕ್ ನೀಡಬೇಕಿದ್ದರಿಂದ ಆಗಸ್ಟ್‌ ತಿಂಗಳಿನಲ್ಲಿ ಸಮಸ್ಯೆ ಹೆಚ್ಚಿತ್ತು’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಪ್ರಭಾರ ಜಂಟಿ ನಿರ್ದೇಶಕಿ ರಮಾ ತಿಳಿಸಿದರು.

ಇನ್ನು ಸೆಪ‍್ಟೆಂಬರ್‌ ತಿಂಗಳಿನಲ್ಲಿ ರಾಜ್ಯಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಆಗಸ್ಟ್ ಮತ್ತು ಸೆಪ್ಟೆಂಬರ್‌ ತಿಂಗಳ ಒಟ್ಟು 10 ಕೆ.ಜಿ ಅಕ್ಕಿ ವಿತರಣೆ ನಡೆಯುತ್ತದೆ. ಇದರಲ್ಲಿ ಕೇವಲ ಒಂದು ಬೆರಳಚ್ಚು(ಬಯೊಮೆಟ್ರಿಕ್) ಮಾತ್ರ ಸಾಕಾಗುವುದರಿಂದ ಸಹಜವಾಗಿ ಆಗಸ್ಟ್‌ ತಿಂಗಳಿನಲ್ಲಿ ಇದ್ದಷ್ಟು ಸರ್ವರ್‌ ಮಂದಗತಿಯ ಸಮಸ್ಯೆ ಸೆಪ್ಟೆಂಬರ್‌ನಲ್ಲಿ ಉದ್ಭವಿಸುವುದಿಲ್ಲ ಎಂದರು.

‘ಅದು ಕೇಂದ್ರ ಸರ್ಕಾರದ್ದೋ, ರಾಜ್ಯ ಸರ್ಕಾರದ್ದೋ ನಮಗಂತೂ ಗೊತ್ತಿಲ್ಲ. 10 ಕೆ.ಜಿ ಅಕ್ಕಿ ಕೊಡುತ್ತಾರೆ. ಅದನ್ನೇ ಸ್ವಲ್ಪ ಬೇಗ ಕೊಟ್ಟರೆ ಸಾಲುಗಟ್ಟಿ ನಿಲ್ಲುವುದು ತಪ್ಪುತ್ತದೆ. ಮಳೆಯಲ್ಲಿ, ಚಳಿಯಲ್ಲಿ ಕೊಡೆ ಹಿಡಿದು ನಿಲ್ಲುವ ಕಷ್ಟ ನಿಂತರವರಿಗಷ್ಟೇ ಗೊತ್ತು. ಇನ್ನಾದರೂ, ಸರ್ಕಾರ ಸರ್ವರ್‌ ಅನ್ನು ಚುರುಕುಗೊಳಿಸಿ, ತಕ್ಷಣವೇ ಬೆರಳಚ್ಚು ಮೂಡುವ ವ್ಯವಸ್ಥೆ ರೂಪಿಸಲಿ’ ಎಂದು ಮಡಿಕೇರಿಯ ರಾಣಿ ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-51-2058578802

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ