ರೈತರಿಗೆ ನೋಟಿಸ್, ಕಿರುಕುಳ ನೀಡಬೇಡಿ: ಅರಣ್ಯ ಅಧಿಕಾರಿಗಳಿಗೆ ಸಿಎಂ ಡಿಕೆಶಿ ಸೂಚನೆ

ರೈತರಿಗೆ ನೋಟಿಸ್, ಕಿರುಕುಳ ನೀಡಬೇಡಿ: ಅರಣ್ಯ ಅಧಿಕಾರಿಗಳಿಗೆ ಸಿಎಂ ಡಿಕೆಶಿ ಸೂಚನೆ

ರೈತರಿಗೆ ನೋಟಿಸ್, ಕಿರುಕುಳ ನೀಡಬೇಡಿ: ಅರಣ್ಯ ಅಧಿಕಾರಿಗಳಿಗೆ ಸಿಎಂ ಡಿಕೆಶಿ ಸೂಚನೆ

ಸಕಲೇಶಪುರ: ಅರಣ್ಯ ಅಧಿಕಾರಿಗಳು ರೈತರಿಗೆ ನೋಟಿಸ್ ಕೊಟ್ಟು ಕಿರುಕುಳ ನೀಡಬಾರದು. ಜನ ಭಯದ ವಾತಾವರಣದಲ್ಲಿ ಬದುಕಬಾರದು ಎಂದು ಮಾರ್ಗದರ್ಶನ ನೀಡಿರುವೆ. ಮುಂದಿನ ದಿನಗಳಲ್ಲಿ ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಇಲ್ಲಿನ ಎಪಿಎಂಸಿಯಲ್ಲಿ ಭಾನುವಾರ ಸಾರ್ವಜನಿಕರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಣ್ಯ ಹಕ್ಕು ಕಾಯ್ದೆಯಲ್ಲಿ ಬುಡಕಟ್ಟು ಜನರಿಗೆ 25 ಹಾಗೂ ಇತರರಿಗೆ 75 ವರ್ಷಗಳ ಮಿತಿ ಇದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ 25 ವರ್ಷಗಳ ಮಿತಿ ನಿಗದಿಗೆ ತೀರ್ಮಾನ ಮಾಡಿ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಲಾಗುವುದು. ಆಗ ಬಿಜೆಪಿ ಹಾಗೂ ಜೆಡಿಎಸ್ ಸಂಸದರು, ನಾಯಕರು ಯಾವ ರೀತಿ ಸಹಕಾರ ನೀಡುತ್ತಾರೆ ನೋಡೋಣ ಎಂದು ಹೇಳಿದರು.

ರೈತನಿಗೆ ವೇತನ, ಬಡ್ತಿ, ನಿವೃತ್ತಿ, ಪಿಂಚಣಿ, ಲಂಚ ಯಾವುದೂ ಇಲ್ಲ. ರೈತರ ಹಿತ ಕಾಪಾಡಲು ಕಸ್ತೂರಿರಂಗನ್ ವರದಿ ವಿಚಾರವಾಗಿ ನಿಮ್ಮ ಅಭಿಪ್ರಾಯ ಕೇಳಲು ಬಂದಿರುವೆ. ಭೌತಿಕ ಸಮೀಕ್ಷೆ ಮಾಡಬೇಕು ಎಂದು ಸಲಹೆ ನೀಡಿದ್ದೀರಿ. ನಿಮ್ಮ ಭಾವನೆಯನ್ನು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ಬೇರೆ ಶಾಸಕರ ಅಭಿಪ್ರಾಯ ಕೇಳುವೆ. ಮತ್ತೆ ಕೆಲವರು ಸಾರಾಸಗಟಾಗಿ ತಿರಸ್ಕರಿಸಿ ಎಂದಿದ್ದಾರೆ. ಆ ರೀತಿ ಮಾಡಿದರೆ ಏನಾಗುತ್ತದೆ ಆಲೋಚನೆ ಮಾಡಬೇಕು. ಗ್ರಾಮ ಸಭೆ, ಸೂಕ್ಷ್ಮ ಪರಿಸರ ವಲಯ, ವಲಯ ನಿರ್ವಹಣೆ ಯೋಜನೆ ಬಗ್ಗೆ ಸಲಹೆ ನೀಡಿದ್ದಾರೆ. ಭೂಮಿ ವಿಚಾರ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಕೇಂದ್ರ ಸರ್ಕಾರ ಈ ಹಕ್ಕನ್ನು ರಾಜ್ಯಕ್ಕೆ ನೀಡಬೇಕು ಎಂದು ಪ್ರಸ್ತಾಪಿಸಿ ಎಂದು ಸಲಹೆ ನೀಡಿದ್ದಾರೆ ಎಂದು ಹೇಳಿದರು.

ಇದರ ಜೊತೆಗೆ ಅಕ್ರಮ ಸಕ್ರಮ, ಬಗರ್ ಹುಕುಂ, ಅರಣ್ಯ ಹಕ್ಕು ಅರ್ಜಿ ವಿಲೇವಾರಿ ಮಾಡಿ, ನಿಮ್ಮ ಸಮಸ್ಯೆಗೆ ಪರಿಹಾರ ನೀಡಲು ನಮ್ಮ ಸರ್ಕಾರ ಆದ್ಯತೆ ನೀಡಲಿದೆ. ನಾವು ತೇಗದ ಸಿರಿ ಕಾರ್ಯಕ್ರಮ ತಂದಿದ್ದೇವೆ. ಅದನ್ನು ಬೆಳೆಸಲು ರೈತರಿಗೆ ಜವಾಬ್ದಾರಿ ನೀಡಲಾಗುವುದು. ಕಟಾವು ಬಂದಾಗ ಆದಾಯದಲ್ಲಿ ಶೇ 70, ರೈತರಿಗೆ ಶೇ30 ಸರ್ಕಾರಕ್ಕೆ ಬರಲಿದೆ. ರೈತರ ಬದುಕಿನಲ್ಲಿ ಶಕ್ತಿ ತುಂಬಲು ಇಂತಹ ಯೋಜನೆ ರೂಪಿಸಲಾಗಿದೆ" ಎಂದರು.

ಎಲ್ಲ ಶಾಸಕರು ಉತ್ತಮ ಸಲಹೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಜನರ ನೋವು ಅರಿತು ಪರಿಹಾರ ನೀಡಲು ಪ್ರಜಾಸೇವೆ ಇಲಾಖೆ ಆರಂಭಿಸಿರುವೆ. ಶಾಸಕರು ಸಭೆಯಲ್ಲಿ ಭಾಗವಹಿಸದೇ ಇದ್ದರೂ ಜಿಲ್ಲಾ ಮಂತ್ರಿಗಳು ತಿಂಗಳಿಗೆ 2 ದಿನ 2 ತಾಲ್ಲೂಕಿಗೆ ಹೋಗಬೇಕು. ಶಾಸಕರು ಜನರ ಬಳಿ ಹೋಗದೇ ಇದ್ದರೆ ಅಧಿಕಾರಿಗಳು ಹೋಗಬೇಕು. ನಂತರ ಹೋಬಳಿ ಮಟ್ಟದಲ್ಲಿ ಚರ್ಚೆ ಮಾಡಲಾಗುವುದು ಎಂದರು.

ಲಂಚ ಮುಕ್ತ ರಾಜ್ಯಕ್ಕೆ ದೃಢ ಸಂಕಲ್ಪ: ನಮ್ಮ ಹಿಂದಿನ ಸರ್ಕಾರಗಳು ಉಳುವವನಿಗೆ ಭೂಮಿ, ಬಗರ್ ಹುಕುಂ ಸಾಗುವಳಿ ಭೂಮಿ ನೀಡಿದೆ. ರೈತರಿಗೆ ಸಹಾಯ ಮಾಡಲು ಅನೇಕ ಅಡಚಣೆ ಇದೆ. ರೈತರ ಭೂಮಿಗೆ ಖಾತಾ ಸೇರಿದಂತೆ ಸೂಕ್ತ ದಾಖಲೆ ನೀಡಲು ನಿಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಇದಕ್ಕೆ ಯಾರೂ ಲಂಚ ನೀಡಬಾರದು. ಲಂಚ ಮುಕ್ತ ರಾಜ್ಯ ಮಾಡುವುದು, ನಮ್ಮ ದೃಢ ಕರ್ನಾಟಕದ ಸಂಕಲ್ಪ ಎಂದು ಹೇಳಿದರು.

ಕಲಬುರಗಿ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಪ್ರವಾಸ ಮಾಡುತ್ತಿರುವೆ. ಮಂಗಳೂರಿನಲ್ಲಿ ಯುವಕರ ವಲಸೆ ತಪ್ಪಿಸಿ ಅಲ್ಲಿಯೇ ಉದ್ಯೋಗ ಸೃಷ್ಟಿಸಲು ಪ್ರವಾಸೋದ್ಯಮ ನೀತಿ ರೂಪಿಸಿದೆ. ಮಲೆನಾಡಿನಲ್ಲೂ ಇದೇ ಪರಿಸ್ಥಿತಿ ಇರುವುದರಿಂದ ಕರಾವಳಿ ಜೊತೆಗೆ ಮಲೆನಾಡು ಭಾಗಕ್ಕೆ ಪ್ರವಾಸೋದ್ಯಮ ನೀತಿ ರೂಪಿಸಿ ಬಂಡವಾಳ ಹೂಡಿಕೆದಾರರಿಗೆ ಉತ್ತೇಜನ ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ತಲೆಮಾರುಗಳಿಂದ ನಿಮ್ಮ ಭೂಮಿ ಕಾಪಾಡುತ್ತಿದ್ದೀರಿ. ನೀವು ಹೊಸದಾಗಿ ಒತ್ತುವರಿ ಮಾಡಬೇಡಿ. ಪರವಾನಗಿ ಇಲ್ಲದೇ ಬಂದೂಕು ಇಟ್ಟುಕೊಂಡಿರುವವರು ನ. 1ರೊಳಗೆ ಸರ್ಕಾರಕ್ಕೆ ಒಪ್ಪಿಸಿ. ಅಕ್ರಮವಾಗಿ ಬಂದೂಕು ಇಟ್ಟುಕೊಂಡವರಿಂದ ಇತ್ತೀಚಿಗೆ ಏನಾಗಿದೆ ಎಂದು ನಿಮಗೆ ಗೊತ್ತಿದೆ. ನಿಮಗೆ ಅಗತ್ಯ ಇದ್ದರೆ ಸರ್ಕಾರ ಪರವಾನಗಿ ನೀಡಲಿದೆ. ಅಕ್ರಮವಾಗಿ ಬಂದೂಕು ಇಟ್ಟುಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ‌.ಎಸ್.ಪೊನ್ನಣ್ಣ, ಶಾಸಕ ರಾಜೇಗೌಡ, ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ಮಾಜಿ ಶಾಸಕ ಬಿ.ಆರ್.ಗುರುದೇವ್, ಗ್ಯಾರಂಟಿ ಯೋಜನೆ ಸಮಿತಿಯ ತಾಲ್ಲೂಕು ಅಧ್ಯಕ್ಷ ಮುರುಳಿ ಮೋಹನ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸೈಯದ್ ಮುಫೀಜ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ, ಜಿಲ್ಲಾ ಪಂಚಾಯಿತಿ ಸಿಇಒ ಶುಭಂ ಶುಕ್ಲಾ, ಎಸ್ಪಿ ಶುಭನ್ವಿತಾ, ಉಪ ವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ, ತಹಶೀಲ್ದಾರ್‌ ಸುಪ್ರೀತ, ಮಾಜಿ ಸಚಿವ ಚ್‌.ಎಂ.ವಿಶ್ವನಾಥ್‌, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಎಚ್‌.ಎಚ್‌.ಉದಯ್‌, ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಮೇಘರಾಜ್‌ ಉಪಸ್ಥಿತರಿದ್ದರು.

ಜನರ ಮನೆ ಬಾಗಿಲಿಗೆ ಸರ್ಕಾರ

ಸರ್ಕಾರ ಮತ್ತು ಜನರ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವುದು ತಮ್ಮ ಉದ್ದೇಶ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಸರ್ಕಾರಕ್ಕೂ ಜನರಿಗೂ ಮಧ್ಯೆ ಇರುವ ಗೋಡೆಯನ್ನು ಒಡೆಯಬೇಕು. ಎಷ್ಟು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವೋ ಅಷ್ಟು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುತ್ತೇವೆ ಎಂದರು.

ಪ್ರತಿ ಶನಿವಾರ ಸಚಿವರು ಹಾಗೂ ಶಾಸಕರು ಕಡ್ಡಾಯವಾಗಿ ಜನರ ಮಧ್ಯೆ ತೆರಳಿ ಅಹವಾಲು ಸ್ವೀಕರಿಸುವಂತೆ ಸೂಚಿಸಲಾಗಿದೆ. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸಹಕಾರ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ಉದ್ದೇಶದಿಂದ ‘ಪ್ರಜಾಸೇವಾ’ ವ್ಯವಸ್ಥೆಯನ್ನೂ ಆರಂಭಿಸಲಾಗಿದ್ದು, ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಟೀಕೆ ಸಾಯುತ್ತದೆ, ಕೆಲಸ ಉಳಿಯುತ್ತೆ

ಕೆಲವರು ನಾನು ಏನೇ ಮಾಡಿದರೂ ಟೀಕೆ ಮಾಡುತ್ತಾರೆ. ನಾನು ಸಚಿವ ಸಂಪುಟ ಮಾಡಿದರೂ ಟೀಕೆ, ನಡೆದರೂ ಟೀಕಿಸುತ್ತಾರೆ. ಅವರು ಮಾಡಲಿ, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಬಿಜೆಪಿಯವರು ಅಧಿವೇಶನದಲ್ಲಿ ಬರ, ಕಸ್ತೂರಿರಂಗನ್ ವಿಚಾರವಾಗಿ ಚರ್ಚೆ ಮಾಡದೇ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಕಾಲಹರಣ ಮಾಡಿದರು. ನಾನು ಅಧಿವೇಶನ ಮೋಟಕುಗೊಳಿಸಿ ರಾಜ್ಯದ ನಮ್ಮ ಶಾಸಕರು ಹಾಗೂ ಸಂಸದರ ಸಭೆ ಮಾಡಿದೆ. ಆಗ ಜನಪ್ರತಿನಿಧಿಗಳು ಇದರ ಮಹತ್ವದ ವಿವರಿಸಿದರು. ನಾನು ರಾಜೀನಾಮೆ ಪಡೆದ ಬಳಿಕ ಪಾದಯಾತ್ರೆ ಮಾಡಿದರು. ಆ ಮೂಲಕ ರಾಜಕೀಯ ಹೆಚ್ಚು ಎಂದು ತೋರಿಸಿದ್ದಾರೆ ಎಂದು ಟೀಕಿಸಿದರು.

ನಾನು ಇದಕ್ಕಾಗಿ ವಿಶೇಷ ಅಧಿವೇಶನ ಕರೆದಿದ್ದೇನೆ. ಅವರು ಭಾವನೆ ಮೇಲೆ ರಾಜಕಾರಣ ಮಾಡಿದರೆ, ನಾನು ಬದುಕಿನ ಮೇಲೆ ರಾಜಕಾರಣ ಮಾಡಲು ಜನರ ಬಳಿ ಬಂದಿದ್ದೇನೆ. ನಿಮ್ಮ ನೋವು, ಸಮಸ್ಯೆ ಆಲಿಸಲು ಬಂದಿದ್ದೇನೆ. ವಿಧಾನಸೌಧದಲ್ಲಿ ಚರ್ಚೆ ಮಾಡುವ ಮುನ್ನ ನಮ್ಮ ಶಾಸಕರು ಇಲ್ಲದ ಕ್ಷೇತ್ರಗಳ ಜನರ ಅಭಿಪ್ರಾಯ ಸಂಗ್ರಹಿಸಲು ಬಂದಿರುವೆ ಎಂದು ತಿಳಿಸಿದರು.

ಮಲೆನಾಡಿನ ಜನರ ಕಷ್ಟದ ಬದುಕು

ಸಕಲೇಶಪುರ ಪ್ರವಾಸಿಗರ ಸ್ವರ್ಗ, ಹೊರಗಿನಿಂದ ನೋಡುವವರಿಗೆ ಇಲ್ಲಿಯ ಜನರು ಶ್ರೀಮಂತರಂತೆ ಕಾಣುತ್ತಾರೆ. ಆದರೆ ಈ ಭಾಗದ ಕಾಫಿ ಬೆಳೆಗಾರರು, ರೈತರ ಬದುಕು, ಅತಿವೃಷ್ಟಿ, ಅನಾವೃಷ್ಟಿ, ನಿತ್ಯ ಕಾಡಾನೆಗಳೊಂದಿಗೆ ಸಂಘರ್ಷ, ಕಾಡು ಪ್ರಾಣಿಗಳಿಂದ ಬೆಳೆ ಹಾನಿ, ಜೀವ ಹಾನಿ ಮುಂದುವರಿದಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಕಾಡಾನೆ ನಿರಂತರ ದಾಳಿಯಿಂದ ಭತ್ತ ಬೆಳೆಯುವುದನ್ನು ಬಹುತೇಕ ರೈತರು ಕೈಬಿಟ್ಟಿದ್ದಾರೆ. ಹಣ ಕೊಟ್ಟು ಅಂಗಡಿಯಿಂದ ಅಕ್ಕಿ ತಂದು ತಿನ್ನಬೇಕಾದ ಸ್ಥಿತಿ ಇದೆ ಎಂದರು.

ಹಲವು ಗ್ರಾಮಗಳಿಗೆ ಸೇತುವೆ, ರಸ್ತೆ, ಕಟ್ಟಡ ಸೇರಿದಂತೆ ಮೂಲಸೌಲಭ್ಯಗಳ ಕೊರತೆ ಕಾಢುತ್ತಿದೆ. ಇಷ್ಟೆಲ್ಲಾ ಕಷ್ಟಗಳ ನಡುವೆ ಕಸ್ತೂರಿರಂಗನ್ ವರದಿಯ ಮರಣ ಶಾಸನ ನೂರಾರು ರೈತರು, ಗ್ರಾಮಸ್ಥರ ನೆತ್ತಿಯ ಮೇಲಿದೆ. ಮುಖ್ಯಮಂತ್ರಿ ಜನರ ಮನೆ ಬಾಗಿಲಿಗೆ ಬಂದು ಸಮಸ್ಯೆ ಆಲಿಸುತ್ತಿರುವುದಕ್ಕೆ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಕಸ್ತೂರಿ ರಂಗನ್ ವರದಿಯನ್ನು ಸರ್ಕಾರ ಸಾರಾ ಸಗಟಾಗಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ