
ಕೈಗಾ ಅಣು ಸ್ಥಾವರದ ಮೊದಲ ಘಟಕ ಪುನರಾರಂಭ: 17 ತಿಂಗಳ ಬಳಿಕ ವಿದ್ಯುತ್ ಉತ್ಪಾದನೆ
ಕಾರವಾರ: ನಿರ್ವಹಣೆ ಸಲುವಾಗಿ ಕಳೆದ 17 ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಕೈಗಾದ ಅಣು ವಿದ್ಯುತ್ ಸ್ಥಾವರದ ಮೊದಲನೇ ಉತ್ಪಾದನಾ ಘಟಕವು (ಕೆಜಿಎಸ್–1) ಈಚೆಗೆ ಉತ್ಪಾದನೆ ಪ್ರಕ್ರಿಯೆ ಪುನರಾರಂಭಿಸಿತು.
ಕೆಜಿಎಸ್–1ನ ರಿಯಾಕ್ಟರ್‌ಗೆ ಯುರೇನಿಯಂ ಇಂಧನದ ಬಂಡಲ್‌ಗಳನ್ನು ತುಂಬುವ ಮೂಲಕ ಅಣು ವಿದ್ಯುತ್ ಶಕ್ತಿ ನಿಗಮದ (ಎನ್‌ಪಿಸಿಐಎಲ್) ಹಿರಿಯ ಅಧಿಕಾರಿಗಳು ಪ್ರಕ್ರಿಯೆಗೆ ಚಾಲನೆ ನೀಡಿದರು.
‘ಕೆಜಿಎಸ್–1ರಲ್ಲಿನ ಕೂಲಂಟ್ ಚಾನೆಲ್‌ಗಳ ಸಂಪೈರ್ಣ ಬದಲಾವಣೆ ಮತ್ತು ಸೌಕರ್ಯಗಳ ನಿರ್ವಹಣೆ ಸಲುವಾಗಿ 2025ರ ಏ.1ರಿಂದ ಘಟಕ ಸ್ಥಗಿತಗೊಳಿಸಲಾಗಿತ್ತು. 17 ತಿಂಗಳ ಅವಧಿಯಲ್ಲಿ ಪ್ರತಿಯೊಂದು ಹಂತವನ್ನೂ ಕಠಿಣ ಸುರಕ್ಷತೆ ಮೇಲ್ವಿಚಾರಣೆಯಡಿಯಲ್ಲಿ ನಿರ್ವಹಿಸಲಾಗಿದೆ. ಇಂಧನ ತೆಗೆಯುವಿಕೆ, ಭಾರ ಜಲ ಬರಿದುಗೊಳಿಸುವದು, ಕೂಲಂಟ್ ಚಾನೆಲ್‌ಗಳ ತೆಗೆಯುವಿಕೆ, ರಿಯಾಕ್ಟರ್ ಕೋರ್‌ನೊಳಗಿನ ತಪಾಸಣೆ, ಹೊಸ ಕೂಲಂಟ್ ಚಾನೆಲ್‌ಗಳ ಅಳವಡಿಕೆ ಮತ್ತು ಪರಿಶೀಲನೆ, ಹೊಸ ಇಂಧನ ತುಂಬುವಿಕೆ, ಸೋರಿಕೆ ಪರೀಕ್ಷೆ, ಭಾರಿ ಜಲ ತುಂಬುವಿಕೆ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಸಮರ್ಥವಾಗಿ ನಿಭಾಯಿಸಲಾಗಿದೆ’ ಎಂದು ಎನ್‌ಪಿಸಿಐಎಲ್ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಅಣು ವಿದ್ಯುತ್ ಉತ್ಪಾದನೆ ಸ್ಥಾವರದ ಮೊದಲ ಘಟಕದಲ್ಲಿ ಅಣು ಶಕ್ತಿ ಉತ್ಪಾದನೆಗೆ ಯುರೇನಿಯಂ ಬಂಡಲ್‌ಗಳನ್ನು ರವಾನಿಸುವ 300ಕ್ಕೂ ಹೆಚ್ಚು ಪೈಪ್‌ಗಳಿವೆ. ಅಧಿಕ ತಾಪಮಾನದಿಂದ ಅವು ಬಾಗುತ್ತವೆ. ಹೀಗಾಗಿ, ಪ್ರತಿ 25ರಿಂದ 30 ವರ್ಷಕ್ಕೊಮ್ಮೆ ಅವುಗಳನ್ನು ಬದಲಿಸಿ, ಹೊಸತನ್ನು ಅಳವಡಿಸುವ ಅಗತ್ಯವಿರುತ್ತದೆ.
1999ರಲ್ಲಿ ಕಾರ್ಯಾರಂಭಿಸಿದ್ದ ಈ ಘಟಕವು 220 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಭಾರಜಲ ಮಾದರಿಯ ರಿಯಾಕ್ಟರ್ ಒಳಗೊಂಡಿದೆ. ಸತತ 26 ವರ್ಷಗಳಿಂದ ವಿದ್ಯುತ್ ಉತ್ಪಾದಿಸುತ್ತಿದ್ದ ಸ್ಥಾವರ ಸುಮಾರು 37,670 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಿದೆ. ಇದೇ ಘಟಕವು 2018ರ ಡಿ.10 ರಂದು ಸತತ 962 ದಿನ ವಿದ್ಯುತ್ ಉತ್ಪಾದಿಸುವ ಮೂಲಕ ಇಂಗ್ಲೆಂಡ್‍ನ ಹೇಶಮ್ ಅಣುಸ್ಥಾವರದ ದಾಖಲೆಯನ್ನು ಅಳಿಸಿ, ವಿಶ್ವ ದಾಖಲೆ ಬರೆದಿತ್ತು.