
ಕೊಡಗು: ಮಳೆಗಾಲದಲ್ಲೂ ಬೇಸಿಗೆಯ ನರ್ತನ
ಮಡಿಕೇರಿ: ಸದಾ ತಂಪಿನಿಂದ ಕೂಡಿರುತ್ತಿದ್ದ ಕೊಡಗು ಜಿಲ್ಲೆಯಲ್ಲೀಗ ‘ಎಲ್‌ನಿನೊ’ ನರ್ತನ ಮಾಡಲಾರಂಭಿಸಿದ್ದು, ಮಳೆಗಾಲದಲ್ಲಿ ಬೇಸಿಗೆ ಆವರಿಸಿದೆ. ಒದ್ದೆಯಾಗಿದ್ದ ನೆಲ ಬಿರುಬಿಸಿಲಿಗೆ ಬಿರಿಯಲು ಇನ್ನೇನು ಅಣಿಯಾಗಿದೆ. ನಾಟಿ ಮಾಡಿದ್ದ ಭತ್ತದ ಬೆಳೆ ಮಳೆಗಾಗಿ ಕಾಯುವಂತಾಗಿದೆ. ಮಳೆಗಾಲ ಮುಗಿಯುವುದರೊಳಗೆ ಝರಿ, ತೋಡುಗಳು ಬತ್ತಿ ಹೋಗಿವೆ. ಜಿಲ್ಲೆಯ ಎಲ್ಲೆಡೆ ಸೆಖೆಯ ವಾತಾವರಣ ಮೂಡತೊಡಗಿದೆ.
ಇದು ಈ ಬಾರಿ ಸೆಪ್ಟೆಂಬರ್‌ನಲ್ಲಿ ಕೊಡಗು ಜಿಲ್ಲೆಯಲ್ಲಿ ಕಂಡು ಬಂದ ಚಿತ್ರಣ.
ಸೆಪ್ಟೆಂಬರ್ ತಿಂಗಳಲ್ಲಿ ಮೊದಲ 15 ದಿನಗಳಲ್ಲಿ ಶೇ 86ರಷ್ಟು ಮಳೆ ಕೊರತೆ ಎದುರಾಗಿದೆ. ಇನ್ನು 10 ದಿನಗಳಲ್ಲಿ ಮಳೆ ಬಾರದೇ ಹೋದರೆ ನಾಟಿ ಮಾಡಿರುವ ಭತ್ತದ ಸಸಿಗಳು ಬಾಡತೊಡಗುತ್ತವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರೇ ಆತಂಕ ವ್ಯಕ್ತಪಡಿಸುತ್ತಾರೆ.
ಹಾಗೆ ನೋಡಿದರೆ, ಮುಂಗಾರಿನ ಆರಂಭದಲ್ಲೇ ಎಂದರೆ ಜೂನ್ ತಿಂಗಳಿನಲ್ಲಿ ಶೇ 63ರಷ್ಟು ಮಳೆ ಕೊರತೆಯನ್ನು ಎದುರಿಸಿದ್ದ ಕೊಡಗು ಜಿಲ್ಲೆ ಆಗ ಮಳೆ ಕೊರತೆಯಾದ ಜಿಲ್ಲೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ನಂತರ, ಜುಲೈ ತಿಂಗಳಿನಲ್ಲೂ ಶೇ 30ರಷ್ಟು ಕೊರತೆ ಎದುರಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಒಂದಿಷ್ಟು ಮಳೆ ಸುರಿದ ಪರಿಣಾಮ ಹೆಚ್ಚಿನ ಮಳೆ ಕೊರತೆ ಕಂಡು ಬರಲಿಲ್ಲ.
ಇದರಿಂದ ಸಸಿಮಡಿ ಮಾಡಿ, ಭತ್ತದ ಸಸಿಗಳನ್ನು ಕೃಷಿಕರು ನಾಟಿ ಮಾಡಿದರು. ಬಿತ್ತನೆಯೇ ನಡೆಯುವುದಿಲ್ಲ ಎಂದು ಭಾವಿಸಿದ್ದ ಜಿಲ್ಲೆಯಲ್ಲಿ ಶೇ 82ರಷ್ಟು ಬಿತ್ತನೆ ಪೂರ್ಣಗೊಂಡಿತ್ತು. ಆದರೆ, ಸೆಪ್ಟೆಂಬರ್ ಆರಂಭದಿಂದಲೂ ಮಳೆಯಾಗದೇ ಇರುವುದು ರೈತರನ್ನು ಆತಂಕಕ್ಕೆ ದೂಡಿದೆ.
ಈಗ ಹಲವೆಡೆ ನೀರಿನ ಒರತೆಗಳು ಬತ್ತಿವೆ. ತೋಡಿನಲ್ಲಿ ಹರಿಯುತ್ತಿದ್ದ ನೀರು ಕಾಣದಾಗಿದೆ. ಬಿಸಿಲಿನ ಝಳಕ್ಕೆ ಕೇವಲ 15 ದಿನಗಳಲ್ಲಿ ನೀರೆಲ್ಲವೂ ಆಪೋಶನಗೊಂಡಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಈಗ ನಾಟಿ ಮಾಡಿರುವ ಭತ್ತ ಉಳಿಯುವುದು ಬಹುತೇಕ ಕಷ್ಟ ಎನಿಸಿದೆ.
ಫೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸಿರುವ ಜಾಗತಿಕ ಹವಾಮಾನ ವೈಪರೀತ್ಯ ‘ಎಲ್‌ನಿನೊ’ ಈಗ ಕೊಡಗಿನಲ್ಲೂ ತನ್ನ ಪರಿಣಾಮಗಳನ್ನು ಬೀರಲಾರಂಭಿಸಿದೆ. ಮುಂಗಾರು ಬರಿದಾಗಿದ್ದು, ಪಶ್ಚಿಮದಿಂದ ಬರುವ ಮೋಡಗಳೂ ಒಣಗಿವೆ. ಕಳೆದೆರಡು ವಾರಗಳಿಂದ ಮೋಡಗಳೂ ನಾಪತ್ತೆಯಾಗಿದ್ದು, ಬೇಸಿಗೆಯಲ್ಲಿ ಕಾಣುವಂತಹ ನೀಲಿ ಆಗಸ ಎಲ್ಲೆಡೆ ಕಂಡು ಬರುತ್ತಿದೆ. ಇದರಿಂದ ನಿಗಿನಿಗಿ ಕೆಂಡದಂತಾಗಿರುವ ಸೂರ್ಯ ಬೇಸಿಗೆಯ ಬಿಸಿಲನ್ನೇ ಹರಿಸಿದ್ದಾನೆ. ಹೀಗಾಗಿ, ಇಡೀ ಕೊಡಗು ಜಿಲ್ಲೆಯಲ್ಲಿ ಬೇಸಿಗೆಯಂತಹ ಅನುಭವವಾಗುತ್ತಿದೆ.
ಇಂತಹ ಪರಿಸ್ಥಿತಿ ಹಿಂದೆಂದೂ ಕಂಡು ಬಂದಿರಲಿಲ್ಲ. ಮಳೆ ಕಡಿಮೆಯಾದರೂ ಮೋಡಗಳು ಇರುತ್ತಿದ್ದವು. ಉಷ್ಣಾಂಶ ಈ ಪರಿಯಲ್ಲಿ ಏರಿಕೆಯಾಗುತ್ತಿರಲಿಲ್ಲ. ಆದರೆ, ಈ ವರ್ಷ ಮಳೆಗಾಲದಲ್ಲೆ ಫ್ಯಾನ್ ಹಾಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ನಾಪೋಕ್ಲುವಿನ ಸುರೇಶ್ ಹೇಳುತ್ತಾರೆ.
ಮತ್ತೊಂದೆಡೆ, ರೈತರು ನಾಟಿ ಮಾಡಿರುವ ಭತ್ತವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಹಲವೆಡೆ ಹಳ್ಳ, ಕೊಳ್ಳದ ನೀರನ್ನು ಪಂಪ್ ಮೂಲಕ ಮೇಲೆತ್ತಿ ಹಾಕುತ್ತಿದ್ದಾರೆ. ಆದರೆ, ಹಳ್ಳ ಕೊಳ್ಳದ ನೀರೂ ಬತ್ತಿ ಹೋದರೆ ಮುಂದೇನು ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.
ಮತ್ತೆ ಹಲವರು, ಮಳೆಯನ್ನೇ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ಮಳೆರಾಯನ ವಿಳಾಸವೇ ಸಿಗುತ್ತಿಲ್ಲ.
ಕಾಫಿ ಬೆಳೆಗಾರರು ಮಳೆ ಕೊರತೆಯಿಂದ ಪರಿತಪಿಸುವ ಹಂತಕ್ಕೆ ತಲುಪಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಗೊಬ್ಬರ ಹಾಕಬೇಕಿತ್ತು. ಆದರೆ, ಸೆಪ್ಟೆಂಬರ್ ಬರುತ್ತಿದ್ದಂತೆ ದೂರವಾದ ಮಳೆ ಇನ್ನೂ ವಾಪಸ್ ಬಂದಿಲ್ಲ. ಹೀಗಾಗಿ, ಅವರೂ ಸಹ ಮಳೆ ಇಲ್ಲದೇ ಪರಿದಾಡುವಂತಾಗಿದೆ. ಒಂದು ವೇಳೆ ಗೊಬ್ಬರ ಹಾಕದೇ ಹೋದರೆ ಗಿಡ ಬೆಳೆಯುವುದಿಲ್ಲ. ಅದು ಮುಂದಿನ ವರ್ಷ ಇಳುವರಿಯ ಮೇಲೆ ನೇರ ಪರಿಣಾಮ ಬೀರಲಿದೆ ಎಂಬುದು ಬಹುತೇಕ ಮಂದಿಯ ಅಭಿಪ್ರಾಯ.
ಫೆಸಿಫಿಕ್ ಮಹಾಸಾಗರದ ಉಷ್ಣಾಂಶ ಏರಿಕೆಯಾಗಿರುವುದರಿಂದ ತೇವಾಂಶಭರಿತ ಗಾಳಿ ಬೀಸುತ್ತಿಲ್ಲ. ಒಣ ಗಾಳಿಯನ್ನೇ ಹೊತ್ತು ತರುತ್ತಿರುವ ಮುಂಗಾರು ಸಹ ಈ ವರ್ಷ ವಾಪಸ್ ತೆರಳಲು ಸಿದ್ಧತೆಯಲ್ಲಿ ತೊಡಗಿದೆ. ಒಂದು ವೇಳೆ ವಾಯುಭಾರ ಕುಸಿತದಂತಹ ಅಚಾನಕ್ ಘಟನೆಗಳು ನಡೆಯದೇ ಹೋದರೆ ಈ ವರ್ಷ ಭತ್ತದ ಫಸಲು ಕೈಸೇರುವುದೂ ಅನುಮಾನ ಎನಿಸಿದೆ.
ಎಲ್‌ನಿನೊ ಪರಿಣಾಮ ಕೇವಲ ಒಂದೆರಡು ತಿಂಗಳಿಗಷ್ಟೇ ಸೀಮಿತವಾಗಿಲ್ಲ. ಅದು ಮುಂಬರುವ ವರ್ಷದ ಏಪ್ರಿಲ್‌ವರೆಗೂ ಇರಲಿದೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ.
‘ಇಲ್ಲಿಯವರೆಗೂ ಕೇವಲ ಆರಂಭಿಕ ಹಂತದಲ್ಲಿದ್ದ ಎಲ್‌ನಿನೊ ಈಗ ತನ್ನ ಉತ್ಕೃಷ್ಠ ಹಂತವನ್ನು ತಲುಪುತ್ತಿದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್‌ನಲ್ಲಿ ಗರಿಷ್ಠ ಮಟ್ಟದಲ್ಲಿರುವುದರಿಂದ ಈ ವರ್ಷದ ಮಳೆಗಾಲ ಮಾತ್ರವಲ್ಲ, ಚಳಿಗಾಲವೂ ಸಹ ಬೇಸಿಗೆಯಂತಿರುತ್ತಿದೆ’ ಎಂದು ಮೈಸೂರಿನ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ತಾಂತ್ರಿಕ ಅಧಿಕಾರಿ ಸುಮಂತ್‌ಕುಮಾರ್ ಹೇಳುತ್ತಾರೆ.
ಈ ಮುನ್ಸೂಚನೆಯೂ ಸಹ ಈಗ ಆತಂಕಕ್ಕೆ ಎಡೆ ಮಾಡಿದೆ.
ಹೆಚ್ಚು ಮಳೆ ಬೀಳುವ ಕೊಡಗಿನಲ್ಲಿಯೂ ಸಹ ಇನ್ನಾದರೂ ಜಲಸಾಕ್ಷರತೆಯನ್ನು ಜನರಿಗೆ ನೀಡಬೇಕಿದೆ. ಅಂತರ್ಜಲ ಮರುಪೂರಣ ವ್ಯವಸ್ಥೆ, ಮಳೆ ನೀರು ಕೊಯ್ಲುವಿನಿಂತಹ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಿದೆ. ಒಂದು ಮಳೆ ಬಿದ್ದರೆ ಸಾಕು ಅದನ್ನು ಹತ್ತು ದಿನಕ್ಕೆ ಆಗುವಷ್ಟು ಹಿಡಿದಿಡುವಂತಹ ತರಬೇತಿಗಳನ್ನು ಪಡೆದು ಅಂತಹ ವಿಧಾನಗಳನ್ನು ಅನುಷ್ಠಾನಕ್ಕೆ ತರಬೇಕಿದೆ.