ಹಾಸನ: ಅರೇಹಳ್ಳಿಯಲ್ಲಿ ಸಾಲದ ವಿಚಾರಕ್ಕೆ ವ್ಯಕ್ತಿಯ ಕೊಲೆ
ಹಾಸನ: ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ ಸಾಲದ ಹಣ ಮರುಪಾವತಿ ವಿಚಾರಕ್ಕೆ ವ್ಯಕ್ತಿಯೊಬ್ಬರನ್ನು ಕತ್ತರಿಯಿಂದ ಇರಿದು ಕೊಲೆ ಮಾಡಲಾಗಿದೆ.
ಅಹಮದ್ ಸಿದ್ದಿಕ್ ಕೊಲೆಯಾಗಿದ್ದು, ಸುಜಿತ್ ಕೊಲೆ ಮಾಡಿದ ಆರೋಪಿ. ಪಟ್ಟಣದ ಈದ್ಗಾ ಬೀದಿಯ ಸುಜಿತ್ ಹಾಗೂ ಅಹಮದ್ ಸಿದ್ದಿಕ್ ನಡುವೆ ಸಾಲದ ಹಣದ ವಿಚಾರವಾಗಿ ಗಲಾಟೆ ನಡೆದಿತ್ತು. ಅಹಮದ್ ಸಿದ್ದಿಕ್ ಅವರ ಪತ್ನಿ ನಿಶಾಬಾನು, ತಮ್ಮ ಸಹೋದರಿ ದಿವ್ಯಾ ಅವರಿಗೆ ಕೊಡಿಸಿದ್ದ ₹55 ಸಾವಿರ ಸಾಲವನ್ನು ಕಂತುಗಳಲ್ಲಿ ತೀರಿಸುತ್ತಿದ್ದರು. ಇದಕ್ಕೆ ಅಹಮದ್ ಸಿದ್ದಿಕ್ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಈ ವಿಚಾರವಾಗಿ ಸೆ.8ರಂದು ಅಹಮದ್ ಸಿದ್ದಿಕ್ ಹಾಗೂ ಸುಜಿತ್ ನಡುವೆ ದೂರವಾಣಿ ಮೂಲಕ ಮಾತುಕತೆ ನಡೆದಿದ್ದು, ಈ ವೇಳೆ ಸುಜಿತ್ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅದೇ ದಿನ ಅರೇಹಳ್ಳಿ ರೋಟರಿ ಕ್ಲಬ್ ಸಮೀಪ ನಡೆದುಕೊಂಡು ಹೋಗುತ್ತಿದ್ದ ಅಹಮದ್ ಸಿದ್ದಿಕ್ ಮೇಲೆ ಸುಜಿತ್ ಕತ್ತರಿಯಿಂದ ದಾಳಿ ನಡೆಸಿದ್ದು, ಮುಖ, ತಲೆ, ಕೈ ಹಾಗೂ ಬೆನ್ನಿಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಅಹಮದ್ ಸಿದ್ದಿಕ್ ಅವರನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬುಧವಾರ ಬೆಳಗಿನ ಜಾವ 4 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ಅಹಮದ್ ಸಿದ್ದಿಕ್ ಅವರ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಕಗ್ಗೆರೆ ಗ್ರಾಮದಲ್ಲಿ ಮನೆಯ ಪಕ್ಕದ ಹಳೆಯ ಮನೆಯಲ್ಲಿ ಸಂಗ್ರಹಿಸಿದ್ದ ₹1.20 ಲಕ್ಷ ಮೌಲ್ಯದ ಕೊಬ್ಬರಿ ಕಳವಾಗಿದೆ.
ಗ್ರಾಮದ ಶಿವೇಗೌಡ ಅವರು ಸೆ.1ರಂದು ರಾತ್ರಿ ಕೊಬ್ಬರಿ ತುಂಬಿದ್ದ 9 ಚೀಲಗಳನ್ನು ಹಳೆಯ ಮನೆಯಲ್ಲಿ ಇಟ್ಟಿದ್ದರು. ಸೆ. 3ರಂದು ಬೆಳಿಗ್ಗೆ ಪರಿಶೀಲಿಸಿದಾಗ ಹಳೆಯ ಮನೆಯ ಹಿಂಭಾಗದ ಬಾಗಿಲಿನ ಚಿಲಕ ಮುರಿದು ಕೊಬ್ಬರಿ ಚೀಲಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಗ್‌ನಲ್ಲಿದ್ದ ₹1.19 ಲಕ್ಷ ಮೌಲ್ಯದ ಚಿನ್ನದ ಸರ ಕಳವು
ಹಾಸನ: ಹೊಳೆನರಸೀಪುರದಿಂದ ಬಸ್‌ನಲ್ಲಿ ಊರಿಗೆ ತೆರಳುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ₹1.19 ಲಕ್ಷ ಮೌಲ್ಯದ ಚಿನ್ನದ ಸರ ಕಳವು ಮಾಡಲಾಗಿದೆ.
ಕೆ.ಕೆ. ಹೊಸೂರು ಗ್ರಾಮದ ಚನ್ನಿಗಯ್ಯ ತಮ್ಮ ಪತ್ನಿಯೊಂದಿಗೆ ಹೊಳೆನರಸೀಪುರಕ್ಕೆ ತೆರಳಿ, ಕುಮಾರ್ ಜ್ಯುವೆಲರ್ಸ್‌ನಲ್ಲಿ 18 ಗ್ರಾಂ ತೂಕದ ಚಿನ್ನದ ಸರವನ್ನು ತಯಾರಿಸಿಕೊಂಡಿದ್ದರು. ಬಳಿಕ ಬಸ್‌ನಲ್ಲಿ ಊರಿಗೆ ತೆರಳುವ ವೇಳೆ ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆದಿದ್ದು, ಅದರಲ್ಲಿದ್ದ ಪರ್ಸ್ ಹಾಗೂ ಚಿನ್ನದ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ: ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರೋಪದ ಮೇರೆಗೆ ಸಕಲೇಶಪುರ ಗ್ರಾಮಾಂತರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಉಪಠಾಣೆ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ, ಅನುಮಾನಾಸ್ಪದ ಗೂಡ್ಸ್ ಕಂಟೈನರ್ ತಡೆದು ಪರಿಶೀಲಿಸಿದ್ದಾರೆ. ವಾಹನದಲ್ಲಿ 19 ಗೋವುಗಳು ಪತ್ತೆಯಾಗಿದ್ದು, ಸಾಗಾಟಕ್ಕೆ ಯಾವುದೇ ಅನುಮತಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇಮಾಯುನ್ ಪಾಷಾ, ಅತೀಕ್ ಉರ್ ರೆಹಮಾನ್, ಆಶಿಕ್ ಸಾಬ್ ಹಾಗೂ ಸಿರಾಜುದ್ದೀನ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಕೊಟ್ಟಿಗೆ ಬೀಗ ಮುರಿದು ಎರಡು ಹೋತ ಕಳವು
ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಬೆಗೂರು ಬ್ಯಾಡರಹಳ್ಳಿ ಗ್ರಾಮದಲ್ಲಿ ಕೊಟ್ಟಿಗೆಯ ಬೀಗ ಮುರಿದು ಎರಡು ಹೋತಗಳನ್ನು ಕಳವು ಮಾಡಲಾಗಿದೆ.
ಗ್ರಾಮದ ಸುರ್ಶನ್ ಸಾಕಿದ್ದ ಎರಡು ಹೋತಗಳನ್ನು ಸೆ. 5ರಂದು ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಬೀಗ ಹಾಕಿದ್ದರು. ಮರುದಿನ ಬೆಳಿಗ್ಗೆ ನೋಡಿದಾಗ ಹೋತಗಳು ಕಾಣೆಯಾಗಿದ್ದವು. ಎರಡು ಹೋತಗಳ ಮೌಲ್ಯ ಸುಮಾರು ₹60 ಸಾವಿರ ಎಂದು ಅಂದಾಜಿಸಲಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ: ಅರಕಲಗೂಡು ತಾಲ್ಲೂಕಿನ ಬಿಳಗೂಲಿ ಗ್ರಾಮದಲ್ಲಿ ಶೆಡ್‌ನಲ್ಲಿ ಕಟ್ಟಿದ್ದ ಎರಡು ಸಿಂಧಿ ಹಸುಗಳು, ಒಂದು ಎಮ್ಮೆ ಕರು ಹಾಗೂ ಒಂದು ಹಸುವಿನ ಕರು ಕಳವಾಗಿದೆ.
ಈ ಜಾನುವಾರುಗಳು ಪ್ರದೀಪ್ ಬಿ.ಟಿ. ಎಂಬುವವರಿಗೆ ಸೇರಿವೆ. ಸೆ. 7ರಂದು ಹಾಲು ಕರೆಯಲು ತೆರಳಿದಾಗ, ಜಾನುವಾರು ಕಾಣೆಯಾಗಿದ್ದು, ಈ ಕುರಿತು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ: ಶ್ರವಣಬೆಳಗೊಳ–ನಾಗಮಂಗಲ ಮುಖ್ಯರಸ್ತೆಯ ಮಂಜುನಾಥಪುರ ಗ್ರಾಮದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾರೆ.
ಸಾಣೇಹಳ್ಳಿಕೊಪ್ಪಲು ಗ್ರಾಮದ ನಾಗರಾಜು ಎಸ್. ಮೃತಪಟ್ಟಿದ್ದು, ಶ್ರವಣಬೆಳಗೊಳದ ದೇವೇಗೌಡ ವೃತ್ತದ ಬಳಿ ಹಾರ್ಡ್‌ವೇರ್ ಅಂಗಡಿ ನಡೆಸುತ್ತಿದ್ದರು. ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರು ನೀಡಲಾಗಿದೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.