
ಮೈಸೂರು ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಸಿಗ್ನಲ್ ಜಾಮರ್ ಅಳವಡಿಕೆ - ಡಿಜಿಪಿ
ಮೈಸೂರು: ಮೈಸೂರಿನ ಕೇಂದ್ರ ಕಾರಾಗೃಹದ ಕೆಲವು ಕಡೆ ಮೊಬೈಲ್ ಸಿಗ್ನಲ್ ಸಿಗುತ್ತಿದೆ. ಹೀಗಾಗಿ ಇಲ್ಲಿ ತುರ್ತಾಗಿ ಜಾಮರ್ ಹಾಕುವ ಅಗತ್ಯವಿದೆ. ಮೊಬೈಲ್ ಇಟ್ಟುಕೊಳ್ಳುವುದು ತಪ್ಪು, ಇಟ್ಟುಕೊಳ್ಳುವುದಕ್ಕೆ ಸಹಕಾರ ನೀಡುವುದೂ ತಪ್ಪು. ಇಬ್ಬರ ಮೇಲೂ ಕ್ರಮವಹಿಸುತ್ತೇವೆ ಎಂದು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಎಂಟು ತಿಂಗಳಲ್ಲಿ 300 ಮೊಬೈಲ್ ವಶಪಡಿಸಿಕೊಂಡಿದ್ದೇವೆ. ಇನ್ನೂ ಐದಾರು ಫೋನ್ ಇರುವ ಶಂಕೆ ಇದೆ. ಅದನ್ನು ವಶಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಮೈಸೂರು ಕೇಂದ್ರ ಕಾರಾಗೃಹಕ್ಕೆ ಶುಕ್ರವಾರ ದಿಢೀರ್ ಭೇಟಿ ನೀಡಿ ಬ್ಯಾರಕ್‌ಗಳ ತಪಾಸಣೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಜೈಲುಗಳಲ್ಲಿ ಮೊಬೈಲ್ ಸೆಟ್‌ಗಳು ಇಲ್ಲವೇ ಇಲ್ಲ ಎಂದು ಹೇಳಲು ಸಿದ್ಧನಿಲ್ಲ. ಆದರೆ ನಿಯಂತ್ರಣ ಮಾಡುವ ಪ್ರಯತ್ನವಂತೂ ನಡೆಯುತ್ತಿದೆ’ ಎಂದರು.
ಕಾರಾಗೃಹಕ್ಕೆ ನಿತ್ಯ 200 ಜನರು ಬರುತ್ತಾರೆ. ಕೆಲವರು ಸಿಮ್ ನುಂಗಿರುತ್ತಾರೆ. ಮೊಬೈಲ್ ತಮ್ಮ ದೇಹದೊಳಗೆ ಇಟ್ಟುಕೊಂಡಿರುತ್ತಾರೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸುವುದು ಕಷ್ಟವಾಗಿದೆ. ತಡೆಯಲು ಪ್ರಯತ್ನ ಮಾಡಿದರು ಮೊಬೈಲ್ ಜೈಲಿನ ಒಳಗೆ ಬರುತ್ತಿವೆ. ಶೀಘ್ರ ಕಡಿವಾಣ ಹಾಕಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.