
ಬಳ್ಳಾರಿಯಲ್ಲಿ ಸೆಪ್ಟೆಂಬರ್ನಲ್ಲಿ ಬೇಸಿಗೆ ಬಿಸಿ: ತಾಪಮಾನದಲ್ಲಿ ಗಣನೀಯ ಏರಿಕೆ
ಬಳ್ಳಾರಿ: ಬಳ್ಳಾರಿಯಲ್ಲಿ ಸೆಪ್ಟೆಂಬರ್ ಅವಧಿಯ ಉಷ್ಣಾಂಶದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಕಳೆದ ವರ್ಷಕ್ಕೆ (2025) ಹೋಲಿಸಿದರೆ ಈ ಬಾರಿ (2026) ಸೆಪ್ಟೆಂಬರ್ ಮಧ್ಯಭಾಗದಲ್ಲಿ ತಾಪಮಾನ ಸತತವಾಗಿ ಏರುಮುಖದಲ್ಲಿದೆ.
ಹವಾಮಾನ ಇಲಾಖೆಯ ಅಧಿಕೃತ ದತ್ತಾಂಶಗಳ ಪ್ರಕಾರ, ಬಳ್ಳಾರಿಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗ ಹಾಗೂ ಧಗೆಯ ಆತಂಕ ಮೂಡಿಸಿದೆ.
2025ರ ಸೆಪ್ಟೆಂಬರ್ 10 ರಿಂದ 16 ರ ಅವಧಿಯಲ್ಲಿ ಬಳ್ಳಾರಿಯ ಸರಾಸರಿ ಗರಿಷ್ಠ ತಾಪಮಾನವು 27.1 ಡಿಗ್ರಿಯಿಂದ 31.9 ಡಿಗ್ರಿಯಷ್ಟಿತ್ತು (ಸಾಧಾರಣ ತಂಪಾದ ವಾತಾವರಣ). ಆದರೆ 2026ರ ಅದೇ ಅವಧಿಯಲ್ಲಿ ತಾಪಮಾನವು 35 ಡಿಗ್ರಿಯಿಂದ 36.8 ಡಿಗ್ರಿ ವರೆಗೆ ಜಿಗಿದಿದೆ. ಅಂದರೆ ಸರಾಸರಿ 6 ಡಿಗ್ರಿಗಿಂತಲೂ ಹೆಚ್ಚು ಉಷ್ಣಾಂಶ ಹೆಚ್ಚಾಗಿದೆ.
ರಾತ್ರಿಯೂ ಧಗೆ: ಕೇವಲ ಹಗಲಷ್ಟೇ ಅಲ್ಲದೆ ರಾತ್ರಿಯ ವೇಳೆಯ ಕನಿಷ್ಠ ತಾಪಮಾನವೂ ಹೆಚ್ಚಾಗಿದೆ. 2026ರ ಸೆಪ್ಟೆಂಬರ್ 15-16 ರಂದು ಕನಿಷ್ಠ ತಾಪಮಾನ 25 ಡಿಗ್ರಿ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ (23.9 ಡಿಗ್ರಿ) ರಾತ್ರಿಯ ವೇಳೆಯಲ್ಲೂ ಧಗೆ ಹೆಚ್ಚಿರುವುದು ಸ್ಪಷ್ಟವಾಗಿದೆ.
ಅತಿ ಹೆಚ್ಚು ತಾಪಮಾನ ದಾಖಲಾದ ದಿನ: ಈ ವರ್ಷ ಸೆಪ್ಟೆಂಬರ್ 14-15 ಅವಧಿಯಲ್ಲಿ ಬಳ್ಳಾರಿಯಲ್ಲಿ ಅತ್ಯಂತ ಹೆಚ್ಚು ಅಂದರೆ 36.8 ಡಿಗ್ರಿ ತಾಪಮಾನ ದಾಖಲಾಗಿದೆ. ಇದು ಕಳೆದ ವರ್ಷದ ಇದೇ ದಿನದ (30.2 ಡಿಗ್ರಿ) ತಾಪಮಾನಕ್ಕಿಂತ ಬರೋಬ್ಬರಿ 6.6 ಡಿಗ್ರಿ ಹೆಚ್ಚಾಗಿದೆ.
ರಾಜ್ಯಮಟ್ಟದಲ್ಲಿ ಬಳ್ಳಾರಿಯ ಸ್ಥಾನ: 2026ರ ಸೆಪ್ಟೆಂಬರ್ 15-16ರ ದತ್ತಾಂಶದಂತೆ, ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನ ರಾಯಚೂರಿನಲ್ಲಿ (37.6 ಡಿಗ್ರಿ) ದಾಖಲಾಗಿದೆ. ನಂತರದ ಸ್ಥಾನದಲ್ಲಿ ಕಲಬುರಗಿ (37.0 ಡಿಗ್ರಿ) ಜಿಲ್ಲೆ ಇದೆ. ಮೂರನೇ ಸ್ಥಾನದಲ್ಲಿ ಬಳ್ಳಾರಿ (36.6 ಡಿಗ್ರಿ) ಜಿಲ್ಲೆ ಕಾಣಿಸಿಕೊಂಡಿದೆ.
ಸಾಮಾನ್ಯವಾಗಿ ಸೆಪ್ಟೆಂಬರ್ನಲ್ಲಿ ಹಿಂಗಾರು ಮಳೆಯ ಆಗಮನದ ಸೂಚನೆ ಅಥವಾ ಮೋಡಕವಿದ ವಾತಾವರಣ ಇರಬೇಕಿತ್ತು. ಆದರೆ ಈ ಬಾರಿ ಬಳ್ಳಾರಿಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆ ಹಾಗೂ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಹಠಾತ್ ತಾಪಮಾನ ಏರಿಕೆಯಿಂದ ಸಾರ್ವಜನಿಕರು ಬಿಸಿಲಿನಿಂದ ರಕ್ಷಣೆ ಪಡೆಯಲು ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಶೇ. 58ರಷ್ಟು ಮಳೆ ಕೊರತೆ: ಬಳ್ಳಾರಿಯಲ್ಲಿ ಮುಂಗಾರು ವೈಫಲ್ಯ ಮುಂದುವರಿದಿದೆ.
ಈ ಅವಧಿಯಲ್ಲಿ (ಜೂನ್ 1ರಿಂದ ಇಲ್ಲಿಯವರೆಗೆ) 29.92 ಸೆಂ.ಮೀ ಬದಲಾಗಿ 12.52 ಸೆಂ.ಮೀ ಮಾತ್ರ ಮಳೆಯಾಗಿದ್ದು, ಶೇ 58 ರಷ್ಟು ಕೊರತೆ ಎದುರಾಗಿದೆ.
ತಾಪಮಾನ ಏರಿಕೆಗೆ ಎಲ್ನಿನೋ ಕಾರಣ
ಹೀಗೆ ತಾಪಮಾನದಲ್ಲಿ ವಿಪರೀತ ಏರಿಕೆಯಾಗಲು ಎಲ್ನಿನೋ ಪರಿಣಾಮವೇ ಕಾರಣವೆಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಿಕೆಎಂಎಸ್ (ಗ್ರಾಮೀಣ ಕೃಷಿ ಮೌಸಂ ಸೇವೆ)ಯ ತಾಂತ್ರಿಕ ಅಧಿಕಾರಿ ಲಾವಣ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಎಲ್ನಿನೋ ಪರಿಣಾಮ ಪ್ರತಿ ಐದು ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಈ ಬಾರಿಯದ್ದು ಅತ್ಯಂತ ತೀವ್ರತರದ್ದು. ಸಾಗರದ ಮೇಲ್ಮೈ ಉಷ್ಣಾಂಶ ಹೆಚ್ಚಾಗಿದೆ. ಆದ್ದರಿಂದಲೇ ಮುಂಗಾರು ಮಾರುತಗಳು ವಿಫಲಗೊಂಡವು. ಹೀಗಾಗಿ ವಾತಾ ವರಣದಲ್ಲಿ ತೇವಾಂಶ ಕಡಿಮೆಯಾಗಿ, ತಾಪಮಾನ ಏರಿದೆ ಎಂದು ಹೇಳಿದರು.