
ಈದ್ ಮಿಲಾದ್ ವೇಳೆ ಡಿಜೆ ಬಳಕೆ: ಮಾಲೀಕನ ಬಂಧನ
ಹಿರಿಯೂರು: ನಗರದಲ್ಲಿ ಈದ್ ಮಿಲಾದ್ ಹಬ್ಬದಂದು ನಡೆದ ಮೆರವಣಿಗೆಯಲ್ಲಿ ಡಿ.ಜೆ ಬಳಸದಂತೆ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಿದ್ದರೂ, ಬಳಸಿದ್ದ ಆರೋಪದ ಮೇಲೆ ಎಂ.ಆರ್. ಡಿಜೆ ಮಾಲೀಕ ಶಾರೂಕ್ ಎಂಬವರನ್ನು ಶನಿವಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈದ್ ಮಿಲಾದ್ ಮೆರವಣಿಗೆಯಲ್ಲಿ ಅತಿಯಾದ ಶಬ್ದದೊಂದಿಗೆ ಡಿಜೆ ಸೌಂಡ್ ಸಿಸ್ಟಮ್ ಹಾಕಿ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಡಿ.ಜೆ ಬದಲಾಗಿ, ನೃತ್ಯ, ವಾದ್ಯಸಂಗೀತ, ಕಲಾತಂಡಗಳೊಂದಿಗೆ ಹಬ್ಬಹರಿದಿನಗಳನ್ನು ಆಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮನವಿ ಮಾಡಿದ್ದಾರೆ.