
ಕೋಲಾರ ಕಸಾಪ ಚಟುವಟಿಕೆ ಸ್ತಬ್ಧ; ಚುನಾವಣೆ ಸನಿಹ, ಆಕಾಂಕ್ಷಿಗಳಿಂದ ಸಿದ್ಧತೆ
ಕೋಲಾರ: ಅನುದಾನ ತೀವ್ರ ಕೊರತೆಯಿಂದ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಈ ನಡುವೆ, ಕೇಂದ್ರ ಕಾರ್ಯಕಾರಿ ಸಮಿತಿ ಅವಧಿ ಮುಗಿಯುತ್ತಿದ್ದು, ಮುಂಬರುವ ಜಿಲ್ಲಾ ಕಸಾಪ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ.
ಹಣಕಾಸಿನ ಅಭಾವದಿಂದ ಕಳೆದ ಒಂದೂವರೆ ವರ್ಷದಿಂದ ಗಡಿ ಜಿಲ್ಲೆಯಲ್ಲಿ ಕನ್ನಡದ ಚಟುವಟಿಕೆಗಳು ನನೆಗುದಿಗೆ ಬಿದ್ದಿವೆ. ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆದು ವರ್ಷಗಳೇ ಕಳೆದಿವೆ. ಕೇಂದ್ರ ಘಟಕದಿಂದ ನಿರ್ವಹಣಾ ವೆಚ್ಚವನ್ನೂ ಕಡಿತಗೊಳಿಸಲಾಗಿದೆ. 2025–26ನೇ ಸಾಲಿನ ಅನುದಾನ ಬಿಡುಗಡೆಯೇ ಆಗಿಲ್ಲ. ಜೊತೆಗೆ 2026–27ನೇ ಸಾಲಿನಲ್ಲಿಯೂ ಇದೇ ಸ್ಥಿತಿ ಮುಂದುವರಿದಿದೆ.
ಸ್ಥಳೀಯ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಸಣ್ಣಪುಟ್ಟ ಕಾವ್ಯಗೋಷ್ಠಿ, ಪುಸ್ತಕ ಬಿಡುಗಡೆ ಅಥವಾ ಸಾಹಿತ್ಯ ಸಂವಾದಗಳನ್ನು ನಡೆಸಲು ಸ್ಥಳೀಯ ದಾನಿಗಳಿಂದ ಹಾಗೂ ಸ್ವಂತ ಹಣದಿಂದ ನಿಧಿ ಸಂಗ್ರಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ, ಆ ಕಾರ್ಯಕ್ರಮಗಳೂ ನಡೆಯುತ್ತಿಲ್ಲ.
2021ರ ನವೆಂಬರ್‌ನಲ್ಲಿ ಕಸಾಪ ಚುನಾವಣೆ ನಡೆದು ಸಮಿತಿ ಅಸ್ತಿತ್ವಕ್ಕೆ ಬಂತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಎನ್.ಬಿ.ಗೋಪಾಲಗೌಡ ಆಯ್ಕೆಯಾಗಿದ್ದರು.
‘2022ರಲ್ಲಿ ಕೋವಿಡ್ ಇತ್ತು, ಆಗ ಅನುದಾನ ಸಿಗಲಿಲ್ಲ. ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ. ನಂತರ ಆಡಳಿತಾಧಿಕಾರಿ ನೇಮಕ ಮಾಡಿದರು. ಒಂದೂವರೆ ವರ್ಷದಿಂದ ಕೋಲಾರ ಸೇರಿದಂತೆ ಯಾವುದೇ ಜಿಲ್ಲೆಗೆ ಅನುದಾನ ಸಿಗಲಿಲ್ಲ. ಹೀಗಾಗಿ, ದೊಡ್ಡ ಮಟ್ಟದ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸಲು ಸಾಧ್ಯವಾಗಿಲ್ಲ’ ಎಂದು ಎನ್.ಬಿ.ಗೋಪಾಲಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ನಮ್ಮ ಅವಧಿ ಮುಗಿಯುವುದರೊಳಗೆ ನಾವೇ ಖರ್ಚು ಹಾಕಿಕೊಂಡು ಪ್ರತಿ ತಾಲ್ಲೂಕಿನಲ್ಲಿ ಮತ್ತೊಮ್ಮೆ ಒಂದೊಂದು ಸಮ್ಮೇಳನ ಮಾಡಬೇಕು ಅಂದುಕೊಂಡಿದ್ದೆವು. ಈಗ ಚುನಾವಣಾಧಿಕಾರಿ ನೇಮಕ ಆಗಿದ್ದು, ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ನ.23ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಅವಧಿ ಮುಗಿಯುತ್ತದೆ. ಸದ್ಯ ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಅವರು ಕಸಾಪ ಆಡಳಿತಾಧಿಕಾರಿಯಾಗಿದ್ದಾರೆ. ಹೊಸ ಸಮಿತಿ ರಚನೆಗೆ ಈಗಾಗಲೇ ಮುಖ್ಯ ಚುನಾವಣಾಧಿಕಾರಿ (ಐಎಎಸ್ ಅಧಿಕಾರಿ ಎ.ಬಿ.ಬಸವರಾಜು) ನೇಮಕ ಆಗಿದ್ದು, ಡಿಸೆಂಬರ್ ಅಥವಾ ಜನವರಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕೋಲಾರ ಸೇರಿದಂತೆ ಕಸಾಪದ 31 ಜಿಲ್ಲೆ ಹಾಗೂ 7 ಗಡಿನಾಡು ಘಟಕಗಳಿಗೆ ಚುನಾವಣೆ ನಡೆಯಬೇಕಿದೆ. ಕಸಾಪ ನಿಯಮದಂತೆ ಚುನಾವಣೆ ನಡೆಯುವ 90 ದಿನಗಳ ಮೊದಲು ಮತದಾರರ ಪಟ್ಟಿಯನ್ನು ಜಿಲ್ಲಾವಾರು ವಿಂಗಡಿಸಿ ಸಿದ್ಧಪಡಿಸಬೇಕು. ಆಮೇಲೆ ಆಕ್ಷೇಪಣೆಗೆ ಅವಕಾಶ ನೀಡಲಾಗುತ್ತದೆ. ನಂತರ ದಿನಾಂಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸುತ್ತಾರೆ.
ರಾಜ್ಯದಲ್ಲಿ ಸುಮಾರು 4.05 ಲಕ್ಷ ಕಸಾಪ ಮತದಾರರು ಇದ್ದಾರೆ. ಕೋಲಾರ ಜಿಲ್ಲೆಯಲ್ಲಿಯೇ 12 ಸಾವಿರ ಸದಸ್ಯರಿದ್ದಾರೆ. ಮೂರು ವರ್ಷ ಮೊದಲು ಸದಸ್ಯರಾಗಿದ್ದವರಿಗೆ ಮತದಾನದ ಹಕ್ಕು ಇರುತ್ತದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸದಸ್ಯತ್ವ ಪಡೆದು 5 ವರ್ಷ ಆಗಿರಬೇಕು.
ಅನುದಾನದ ಕೊರತೆಯಿಂದ ಕಸಾಪ ಕಾರ್ಯಚಟುವಟಿಕೆಗಳು ಮಂದಗತಿಯಲ್ಲಿದ್ದರೂ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಸಾಹಿತ್ಯಿಕ ರಾಜಕೀಯದ ಕಾವು ಏರತೊಡಗಿದೆ. ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳು ಸದಸ್ಯರ ಮನವೊಲಿಸುವ ಸದ್ದಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರೆ.
ನಾನು ಈ ಬಾರಿ ಸ್ಪರ್ಧೆ ಮಾಡುವುದಿಲ್ಲ. ಒಂದು ಅವಧಿಗೆ ಅಧ್ಯಕ್ಷನಾಗಲು ಅವಕಾಶ ಕೊಡಿ ಎಂಬುದಾಗಿ ಕಳೆದ ಬಾರಿ ಚುನಾವಣೆಯಲ್ಲಿಯೇ ಹೇಳಿದ್ದೆ. ಸದ್ಯದಲ್ಲಿಯೇ ಚುನಾವಣೆ ನಡೆಯಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ಈವರೆಗೆ ಯಾರೂ ಮುಂದೆ ಬಂದಿಲ್ಲ. ಈ ತಿಂಗಳ ಕೊನೆ ಅಥವಾ ಅಕ್ಟೋಬರ್‌ನಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.
ಅನುದಾನ ಕೊರತೆಯಿಂದ ಒಂದೂವರೆ ವರ್ಷಗಳಿಂದ ಸಮ್ಮೇಳನ ಸೇರಿದಂತೆ ಪ್ರಮುಖ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ. ಆದರೆ, ಪ್ರತಿ ತಾಲ್ಲೂಕಿನಲ್ಲಿ ಎರಡು ತಿಂಗಳಿಗೊಮ್ಮೆ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ
ಎನ್.ಬಿ.ಗೋಪಾಲಗೌಡ, ಜಿಲ್ಲಾ ಕಸಾಪ ಅಧ್ಯಕ್ಷ, ಕೋಲಾರ
5 ವರ್ಷದಲ್ಲಿ ಒಂದೇ ಜಿಲ್ಲಾ ಸಮ್ಮೇಳನ
ಕೋಲಾರ ಜಿಲ್ಲೆಯಲ್ಲಿ 2023ರ ಫೆಬ್ರುವರಿಯಲ್ಲಿ ಮುಳಬಾಗಿಲಿನಲ್ಲಿ ನಡೆದ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವೇ ಕೊನೆ. ಮೂರು ವರ್ಷಗಳಿಂದ ಜಿಲ್ಲಾ ಸಮ್ಮೇಳನವೇ ನಡೆದಿಲ್ಲ. ಸಾಮಾನ್ಯವಾಗಿ ವರ್ಷಕ್ಕೆ ಒಂದು ಜಿಲ್ಲಾ ಸಮ್ಮೇಳನ ನಡೆಯಬೇಕು. ಐದು ವರ್ಷಗಳಲ್ಲಿ ಜಿಲ್ಲೆಯ ಆರೂ ತಾಲ್ಲೂಕಿನಲ್ಲಿ ಒಮ್ಮೆ ಮಾತ್ರ ಸಮ್ಮೇಳನ ನಡೆಸಲಾಗಿದೆ.
‘ಒಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನಿಷ್ಠ ₹ 6ಲಕ್ಷದಿಂದ 7 ಲಕ್ಷದವರೆಗೆ ಅನುದಾನ ಬೇಕಾಗುತ್ತದೆ. ಅದೇ ರೀತಿ ಒಂದು ತಾಲ್ಲೂಕು ಸಮ್ಮೇಳನ ನಡೆಸಲು ₹ 2ಲಕ್ಷದಿಂದ 3 ಲಕ್ಷ ಅನುದಾನ ಬೇಕಾಗುತ್ತದೆ’ ಎಂದು ಜಿಲ್ಲಾ ಕಸಾಪ ಮೂಲಗಳು ತಿಳಿಸಿವೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-18-1751589315