
ರೆಸಾರ್ಟ್‌ನಲ್ಲಿ AEE ಪರೀಕ್ಷೆ; ಅಕ್ರಮದಲ್ಲಿ ಪ್ರಿಯಾಂಕ್ ಭಾಗಿ: ಕುಮಾರಸ್ವಾಮಿ
ನವದೆಹಲಿ: ‘ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಹುದ್ದೆಗಳ ಅಭ್ಯರ್ಥಿಗಳನ್ನು ರೆಸಾರ್ಟ್‌ನಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ. ಈ ಹುದ್ದೆಗಳ ನೇಮಕದಲ್ಲಿ ನಡೆದಿರುವ ಅಕ್ರಮದಿಂದ ಸಚಿವ ಪ್ರಿಯಾಂಕ್ ಖರ್ಗೆ ಪಾರಾಗಲು ಸಾಧ್ಯವಿಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿನ ಎಲ್ಲ ವಿದ್ಯಮಾನಗಳ ಬಗ್ಗೆ ಪ್ರಿಯಾಂಕ್ ಅವರಿಗೆ ಮಾಹಿತಿ ಇರುತ್ತದೆ. ಆದರೆ, ಸ್ವತಃ ತಾವೇ ನಿರ್ವಹಿಸಿದ್ದ ಇಲಾಖೆಯಲ್ಲಿ ಏನೇನು ನಡೆದಿದೆ ಎಂಬುದು ಗೊತ್ತಿಲ್ಲ ಎಂದರೆ ಹೇಗೆ? ಈ ರೀತಿಯಾಗಿ ಅತೀ ಜಾಣತನ ಪ್ರದರ್ಶಿಸುವ ಅಗತ್ಯವಿಲ್ಲ’ ಎಂದು ವ್ಯಂಗ್ಯವಾಡಿದರು.
‘ಸಾಮಾನ್ಯವಾಗಿ ಪರೀಕ್ಷೆಗಳು ಶಾಲಾ-ಕಾಲೇಜುಗಳಲ್ಲಿ ನಡೆಯುತ್ತವೆ. ಆದರೆ, ಪ್ರಿಯಾಂಕ್ ಸಚಿವರಾಗಿದ್ದ ಇಲಾಖೆಯಲ್ಲಿ ಅಭ್ಯರ್ಥಿಗಳಿಗೆ ರೆಸಾರ್ಟ್‌ನಲ್ಲಿ ಪರೀಕ್ಷೆ ಬರೆಸಲಾಗಿದೆ. ದೇಶದಲ್ಲಿಯೇ ಇದು ಮೊತ್ತ ಮೊದಲ ಪ್ರಯೋಗ. ಇದಕ್ಕಾಗಿ ಪ್ರಿಯಾಂಕ್ ಅವರನ್ನು ಭೇಷ್ ಎನ್ನಲೇಬೇಕು. ದುಡ್ಡು ಕೊಟ್ಟ ವಿದ್ಯಾರ್ಥಿಗಳಿಗೆ ಮೊದಲೇ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು ಉತ್ತರ ಬರೆಸಲಾಗಿದೆ. ರಾಜ್ಯ ಸರ್ಕಾರದ ನಿಷ್ಕ್ರಿಯತೆ ಹಾಗೂ ಭ್ರಷ್ಟಾಚಾರ ಇಲ್ಲಿ ಎದ್ದು ಕಾಣುತ್ತದೆ’ ಎಂದು ಅವರು ಟೀಕಿಸಿದರು.
‘ಎಇಇ ನೇಮಕಾತಿ ಪ್ರಕ್ರಿಯೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಚಿವರು ಸಮಜಾಯಿಷಿ ನೀಡಿದ್ದಾರೆ. ಇಲಾಖೆಯ ಪರೀಕ್ಷಾ ಪ್ರಕ್ರಿಯೆ ಬಗ್ಗೆ ಗೊತ್ತಿಲ್ಲ ಎಂದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದೇ ಅರ್ಥ. ಅವರ ಮಾತುಗಳಲ್ಲಿ ಪ್ರಾಮಾಣಿಕತೆ ಕಾಣುತ್ತಿಲ್ಲ. ಹಗರಣ ಮುಚ್ಚಿ ಹಾಕಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.
‘ಎಎಇ ಪರೀಕ್ಷಾ ಅಕ್ರಮದ ತನಿಖೆಗೆ ಮೂವರು ಸದಸ್ಯರ ಸಮಿತಿಯನ್ನು ಕೆಪಿಎಸ್‌ಸಿ ರಚಿಸಿತ್ತು. ಈ ಸಮಿತಿಗೆ ಕೆಪಿಎಸ್‌ಸಿ ಕಾರ್ಯದರ್ಶಿ ಯಾವುದೇ ಸಹಕಾರ ನೀಡಲಿಲ್ಲ. ಹೀಗಾಗಿ, ಈ ಸಮಿತಿ ವರದಿ ಕೊಡಲಿಲ್ಲ. ಬಳಿಕ, ಐವರು ಸದಸ್ಯರ ಸಮಿತಿ ರಚಿಸಲಾಗಿತ್ತು. ಈ ಸಮಿತಿ 40 ಸಭೆಗಳನ್ನು ನಡೆಸಿ ವರದಿ ಕೊಟ್ಟಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಗೊತ್ತಿದ್ದರೂ ಕೆಪಿಎಸ್‌ಸಿ ಕಾರ್ಯದರ್ಶಿಯವರು ಸರ್ಕಾರಕ್ಕೆ ಅಂತಿಮ ಆಯ್ಕೆ ಪಟ್ಟಿ ಕಳುಹಿಸಿದ್ದರು. ಇದಕ್ಕೆ ಆಕ್ಷೇಪಿಸಿ ಕೆಪಿಎಸ್‌ಸಿ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಾಗಿ ನಾಲ್ಕು ತಿಂಗಳ ಬಳಿಕ ಅಭ್ಯರ್ಥಿಗಳಿಗೆ ಷರತ್ತುಬದ್ಧ ನೇಮಕಾತಿ ಪತ್ರ ನೀಡಲಾಗಿತ್ತು. ಸಚಿವರ ನೇತೃತ್ವದಲ್ಲೇ ತರಾತುರಿಯಲ್ಲಿ ನೇಮಕಾತಿ ಪತ್ರ ನೀಡುವ ಅಗತ್ಯ ಏನಿತ್ತು’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಒಟ್ಟು 12 ಬಾರಿ ವಿಚಾರಣೆ ನಡೆದಿದೆ. ಎಲ್ಲ ಸಂದರ್ಭಗಳಲ್ಲಿ ಒಂದು ನೆಪ ಹೇಳಿ ವಿಚಾರಣೆಯನ್ನು ಮುಂದೂಡುವ ಪ್ರಯತ್ನವನ್ನು ಸರ್ಕಾರ ಮಾಡಿದೆ. ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದೇ ಸರ್ಕಾರ ತಪ್ಪು ಮಾಡುತ್ತಿದೆ. ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಪ್ರಿಯಾಂಕ್ ಸವಾಲು ಹಾಕಿದ್ದಾರೆ. ಅವರ ರಾಜಕೀಯ ನಿವೃತ್ತಿ ಬಯಸುವುದಿಲ್ಲ. ಆದರೆ, ಪಾರದರ್ಶಕವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂಬುದೇ ನನ್ನ ಆಗ್ರಹ’ ಎಂದರು.
‘ಕೆಪಿಎಸ್‌ಸಿ ಅಕ್ರಮದ ಬಗ್ಗೆ ಪ್ರಿಯಾಂಕ್ ಸೇರಿ ಎಲ್ಲ ಸಚಿವರಿಗೂ ಮಾಹಿತಿ ಇತ್ತು. ಅಕ್ರಮದ ತನಿಖೆಗೆ ಜಾರಿ ನಿರ್ದೇಶನಾಲಯ ರಂಗ ಪ್ರವೇಶ ಮಾಡಿದ ಕೂಡಲೇ ಎಲ್ಲರಿಗೂ ಭಯ ಶುರುವಾಯಿತು. ಇ.ಡಿ.ಯನ್ನು ಅಮಿತ್ ಶಾ ಅವರೇನೂ ಕಳುಹಿಸಿಲ್ಲ. ನಿಮ್ಮ ಹೇಳಿಕೆಗಳನ್ನು ನೋಡಿದರೆ ಇಡೀ ಹಗರಣದಲ್ಲಿ ನೀವು ಭಾಗಿಯಾಗಿರುವ ಅನುಮಾನ ಗಟ್ಟಿಯಾಗುತ್ತಿದೆ’ ಎಂದರು.
‘ಪರೀಕ್ಷಾ ನಿಯಂತ್ರಣ ಅಧಿಕಾರಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ದೆಹಲಿಗೆ ಹೋಗಿ ಅಲ್ಲೆಲ್ಲೋ ರೆಸಾರ್ಟಿಗೆ ಹೋಗಿದ್ದು, ಆ ರೆಸಾರ್ಟ್‌ನಲ್ಲಿ ಯಾರೊಂದಿಗೋ ಗಲಾಟೆ ಮಾಡಿಕೊಂಡಿದ್ದು, ನಂತರ ಮತ್ತೆಲ್ಲಿಗೋ ಹೋಗಿದ್ದು, ಅಲ್ಲಿಂದ ಚೆನ್ನೈಗೆ ಬಂದಿದ್ದು, ಚೆನ್ನೈನಿಂದ ದೇವನಹಳ್ಳಿಯ ರೆಸಾರ್ಟಿಗೆ ಬಂದು ಮೂರು ದಿನ ಉಳಿದುಕೊಂಡಿದ್ದು.... ಇವೆಲ್ಲವೂ ಯಾವುದೋ ಸಿನಿಮಾ ಕಥೆಯಂತಿದೆ. ಅಧಿಕಾರಿಯ ಹಿಂದೆ ಯಾರಿದ್ದಾರೆ ಎಂಬುದು ಈಗ ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ’ ಎಂದರು.
‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ರೀಡೂ ಮಾಡಿದ್ದ ಶ್ಯಾಮ್ ಭಟ್ ಅವರನ್ನು 2016-17ರಲ್ಲಿ ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಕೆಪಿಎಸ್‌ಸಿಯಲ್ಲಿ ಅವರು ನಡೆಸಿದ್ದ ಅಕ್ರಮಗಳ ಬಗ್ಗೆ ಕಾಂಗ್ರೆಸ್ ನಾಯಕರು ಮೌನವಾಗಿದ್ದಾರೆ. ಯಾವ ಮಾನದಂಡದ ಆಧಾರದಲ್ಲಿ ಭಟ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು ಎಂಬ ಬಗ್ಗೆ ಪ್ರಿಯಾಂಕ್ ಖರ್ಗೆ ವಿವರಣೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.