
ಕಲ್ಯಾಣ ಕರ್ನಾಟಕ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಮುಖ್ಯಮಂತ್ರಿಗೆ ಮನವಿ
ಕಲಬುರಗಿ: ಸರ್ಕಾರದ ಗುತ್ತಿಗೆ ಕೆಲಸಗಳನ್ನು ನಿರ್ವಹಿಸಿ ವರ್ಷಗಳಾದರೂ ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ಪಾವತಿ ಮಾಡದೇ ಇರುವುದರಿಂದ ಕಲ್ಯಾಣ ಕರ್ನಾಟಕದ ಗುತ್ತಿಗೆದಾರರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಗುತ್ತಿಗೆದಾರರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಪ್ರಥಮ ದರ್ಜೆ ಗುತ್ತಿಗೆದಾರರಾದ ಜಗನ್ನಾಥ ಶೇಗಜಿ, ಮೊಹಸಿನ್ ಎಂ. ಪಟೇಲ್, ರಾಜಶೇಖರ ಸಿ. ನಾಯನೇಗಲಿ, ‘ಕೆಕೆಆರ್‌ಡಿಬಿಯ ಮೂರನೇ ಗುಣಮಟ್ಟ ತಪಾಸಣಾ ತಂಡದಿಂದಾಗಿ ಸುಮಾರು ಆರು ತಿಂಗಳಿಂದ 300 ಕಾಮಗಾರಿಗಳ ಬಿಲ್ ಪಾವತಿಯಾಗಿಲ್ಲ. ಈ ಸಮಸ್ಯೆ ಪರಿಹರಿಸಲು ಮಂಡಳಿ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಬೇಕು. ಕೆಆರ್‌ಐಡಿಎಲ್, ನಿರ್ಮಿತಿ ಕೇಂದ್ರ ಸೇರಿದಂತೆ ಇತರ ಸರ್ಕಾರಿ ಸಂಸ್ಥೆಗಳು ಕಾಮಗಾರಿಗಳನ್ನು ನಿರ್ವಹಿಸುವುದರಿಂದ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಿಗೆ ಕಾಮಗಾರಿಗಳು ದೊರೆಯುತ್ತಿಲ್ಲ. ಈ ಸಂಸ್ಥೆಗಳಿಗೆ ನಿಯಮಾವಳಿಗಳನ್ನು ಬಿಟ್ಟು ಕಾಮಗಾರಿ ನೀಡದಂತೆ ಸೂಚನೆ ನೀಡಬೇಕು. ಕಲ್ಯಾಣ ಕರ್ನಾಟಕದ ಗುತ್ತಿಗೆದಾರರಿಗೆ ಕಲಬುರಗಿ ಕೇಂದ್ರ ಸ್ಥಾನದಲ್ಲಿ ಕಚೇರಿ ಕಟ್ಟಡಕ್ಕೆ ಗುತ್ತಿಗೆದಾರರ ಬಿಲ್ಲುಗಳಲ್ಲಿ ಕಡಿತಗೊಂಡ (ಸಿಬಿಎಫ್) ಅನುದಾನದಲ್ಲಿ ₹ 3 ಕೋಟಿಯನ್ನು ಬಡ್ಡಿರಹಿತವಾಗಿ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.