
'ರಸಾರಾಧನಂʼನಲ್ಲಿ ನಿರುಪಮಾ ರಾಜೇಂದ್ರ ಮೋಡಿ, ಕಲಾ ರಸಿಕರಿಗೆ ರಸದೌತಣ
ಬೆಂಗಳೂರು: ಶಿವನ ಓಲೈಕೆಗೆ ಸರ್ವ ಋತುಗಳಲ್ಲಿ ಪಾರ್ವತಿಯ ತಪಸ್ಸು, ಅವಳ ಆತ್ಮ ಸೌಂದರ್ಯದ ಪ್ರೀತಿಗೆ ಹೃದಯ ಭಾಗವನ್ನೇ ನೀಡಿ ಅರ್ಧನಾರೀಶ್ವರನಾಗುವ ಶಿವ. ಕಾಳಿದಾಸನ 'ಕುಮಾರಸಂಭವ' ಆಧಾರಿತ 'ಆತ್ಮ ಸೌಂದರ್ಯ' ರೂಪಕದಲ್ಲಿ ಪಾರ್ವತಿಯು ಬಾಹ್ಯ ಸೌಂದರ್ಯದಿಂದಲ್ಲ, ಬದಲಿಗೆ ತಪಸ್ಸು ಹಾಗೂ ಆಂತರಿಕ ಜ್ಞಾನದಿಂದ ಶಿವನನ್ನು ಒಲಿಸಿಕೊಳ್ಳುವ ಪರಿ ಇದೆಯಲ್ಲ, ಅದು ವೇದಿಕೆಯಲ್ಲಿಯೇ ಕೈಲಾಸ ಸೃಷ್ಟಿಯಾಗುವಂತೆ ಮಾಡಿತು. ನೃತ್ಯಾಂಜಲಿಯಲ್ಲಿ ಮೂಡಿ ಬಂದ ಪ್ರಕೃತಿ, ನವಿಲು, ಕೃಷ್ಣ... ಹರಿ ಮತ್ತು ಹರ ತಮ್ಮ ಶಕ್ತಿಗಳ ಬಗ್ಗೆ ಪರಸ್ಪರ ಪ್ರಶಂಸಿಸಿಕೊಂಡು ತಾವು ಅಭೇದ ಎಂಬುದನ್ನು ತೋರಿಸಿಕೊಟ್ಟ ಬಗೆ ಅತ್ಯಾದ್ಭುತ.
ಇದು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನೃತ್ಯ ಕಲಾವಿದೆ ನಿರುಪಮಾ ರಾಜೇಂದ್ರ. ಅವರು ಪದ್ಮಭೂಷಣ ಶತಾವಧಾನಿ ಡಾ.ಆರ್. ಗಣೇಶ್ ಅವರ ಕೃತಿಗಳಿಗೆ ಭಾನುವಾರ ನಗರದ ದೊಡ್ಡಕಲ್ಲಸಂದ್ರದ ಮೀನಾಕ್ಷಿ ರಂಗಮಂಚದಲ್ಲಿ ಅಭಿನವ ಡ್ಯಾನ್ಸ್ ಕಂಪನಿ ವತಿಯಿಂದ ಪ್ರದರ್ಶಿಸಿದ ಏಕವ್ಯಕ್ತಿ ಶಾಸ್ತ್ರೀಯ ನೃತ್ಯ ಗೌರವ ʼರಸಾರಾಧನಂʼನ ಝಲಕ್. ಪುರಾತನ ದೇವಾಲಯದ ಕಲ್ಲಿನ ಕಂಬಗಳಲ್ಲಿ ಕೆತ್ತಲಾದ ಶಿಲಾಬಾಲಿಕೆಯರು ದಿಢೀರನೆ ಜೀವ ಪಡೆದು, ರಂಗದ ಮೇಲೆ ಮೂಡಿಬಂದರೆ ಹೇಗಿರುತ್ತದೆ? ಇಂತಹದೊಂದು ಅಪರೂಪದ ಕಲ್ಪನೆಯನ್ನು ಪ್ರಯೋಗಕ್ಕೆ ತರುವಲ್ಲಿ ನಾಟ್ಯರಾಣಿ ನಿರುಪಮಾ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ಶಿಲಾಬಾಲಿಕೆಯಾಗಿ ವಿಚಲಿತರಿತರಾಗದೇ ನಿಂತ ನಿರಪಮಾ ಅವರ ಭಂಗಿಯೇ ಅವರ ಕಲಾ ತಪಸ್ಸು ಹೇಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿತ್ತು.
ಕಾಳಿಂಗ ಮರ್ದನದ ದೃಶ್ಯ ನಿರೂಪಿಸುವಾಗ ಹೆಡೆಗಳ ಮೇಲೆ ಜಾರುವ ಕೃಷ್ಣನ ಕಾಲುಗಳು, ತುಂಬಿ ಹರಿಯುವ ಗಂಗೆ, ಯಮುನೆ, ಬೀಸುವ ಗಾಳಿ ಹೀಗೆ ಎಲ್ಲ ಒಂದಲ್ಲ ಒಂದು ವಸ್ತು, ವಿಷಯ ನಿರೂಪಿಸುವಾಗ ಕ್ಷಣ ಮಾತ್ರದಲ್ಲಾಗುವ ಅಭಿವ್ಯಕ್ತಿ ಪರಿವರ್ತನೆ ನಿರುಪಮಾ ಅವರ ಹೆಜ್ಜೆಗಳಲ್ಲಿ ಮೂಡಿ ಬಂದವು. ಸ್ಪುಟವಾದ ಸಂಗೀತ, ಬೆಳಕುಗಳ ನಿಖರ ಕೋನಗಳು ಮತ್ತು ವರ್ಣ ಪಲ್ಲಟ ವೇದಿಕೆಯಲ್ಲಿ ಪುರಾಣ, ದೈವಿಕತೆಯ ಕಾಲಘಟ್ಟದ ದಿವ್ಯ ಲೋಕವನ್ನೇ ಸೃಷ್ಟಿಸಿದವು.
ಹರಿ ಹರ ದೈವಿಕ ಸ್ನೇಹ ಮಿಲನ
'ಹರಿಹರ' ಕೃತಿಯಲ್ಲಿ ವಿಷ್ಣು ಮತ್ತು ಶಿವನ ನಡುವಿನ ಪರಸ್ಪರ ಗೌರವ ಹಾಗೂ ದೈವಿಕ ಸಮಾನತೆಯನ್ನು ಭಾವ, ನೃತ್ಯ ಹಾಗೂ ಕಾವ್ಯದ ಮೂಲಕ ನಿರುಪಮಾ ಅವರು ಅದ್ಭುತ ಲೋಕವನ್ನು ಅನಾವರಣಗೊಳಿಸಿದರು. ಶಿವ-ವಿಷ್ಣುವಿನ ಮಾತುಕತೆ, ಕಲಾರಾಧನೆ ಅಭಿವ್ಯಕ್ತವಾದ ರೀತಿ ಕಿಕ್ಕಿರಿದು ಸೇರಿದ ಕಲಾ ರಸಿಕರಿಗೆ ರೋಮಾಂಚನವಾಗುವಂತೆ ಮಾಡಿತು. ಕೃಷ್ಣಾವತಾರದಲ್ಲಿ ಅಭಿವ್ಯಕ್ತವಾದ ವಿಷ್ಣುವಿನ ಕಲಾ ಪ್ರೌಡಿಮೆ ಹಾಗೂ ಹಿನ್ನೆಲೆಯಲ್ಲಿ ಮೂಡಿ ಬಂದ ಢಮರು ತಾಳಕ್ಕೆ ನಿರುಪಮಾ ಹೆಜ್ಜೆ ಹಾಕಿದ ರೀತಿಗೆ ಪ್ರೇಕ್ಷಕರು ತಲೆದೂಗಿದರು.
'ದೌತ್ಯ ದೀಕ್ಷಿತೆʼ ಕೃತಿಯ ಪ್ರಸ್ತುತಿಯಲ್ಲಿ ನಾಯಕಿಯು ದೂರವಿರುವ ತನ್ನ ಗಂಡನಿಗೆ ಸಂದೇಶ ಕಳುಹಿಸಲು ಎಲ್ಲ ಮಾರ್ಗಗಳು ಸರಿಹೊಂದದೇ ಹೋದಾಗ ತನ್ನ ಮನಸ್ಸನ್ನೇ ಕಳುಹಿಸುವ ಪರಿ ಅಪರೂಪವಾದದ್ದು. ಈ ಪ್ರಸ್ತುತಿಯಲ್ಲಿ ಮೋಡ, ಹುಣ್ಣಿಮೆಯ ಚಂದ್ರ, ನವಿಲು, ಗಿಳಿ, ಗಾಳಿ... ಹಾದು ಹೋದವು. ಗಂಡನಿಗೆ ಪ್ರೀತಿಯಿಂದ ಸಂದೇಶವನ್ನು ಕಳುಹಿಸುವುದು ಹೇಗೆಂದು ಯೋಚಿಸುವ ಹೆಣ್ಣು ಪಡುವ ಪಾಡು ಅಷ್ಟಿಷ್ಟಲ್ಲ. ಮೋಡದ ಮೂಲಕ ಕಳುಹಿಸಿದರೆ ಮಳೆ ಬಂದು ಅಳಿಸಿ ಹೋಗುವ ಭಯ, ಗಾಳಿಯ ಮೂಲಕ ಕಳುಹಿಸಿದರೆ ಛಿದ್ರವಾಗಬಹುದೆಂಬ ಭೀತಿ....ಒಟ್ಟಿನಲ್ಲಿ ಗಂಡನಿಗೆ ಕಳುಹಿಸುವ ಸಂದೇಶಕ್ಕೆ ಯಾವ ಮಾರ್ಗವೂ ಸಿಗದೇ, ಕಡೆಗೇ ತನ್ನ ಮನಸ್ಸಿನ ಮೂಲಕವೇ ಪ್ರೀತಿಯ ಓಲೆ ಕಳುಹಿಸುವ ಕಲ್ಪನೆಯೇ ಅದ್ಭುತ. ರಸ ಭಾವ ತುಂಬಿದ ಶತವಧಾನಿ ಆರ್. ಗಣೇಶ್ ಅವರ ಕಾವ್ಯ ಸೃಷ್ಟಿಗೆ ಕಾಳಿದಾಸನೇ ಪ್ರೇರಣೆ ಎಂಬುವುದು ಸ್ಪಷ್ಟವಾಗುತ್ತಿತ್ತು.
ಶಿಲಾಬಾಲಿಕೆಗೇ ಜೀವ ಬಂದಾಗ
ಪುರಾತನ ದೇವಾಲಯದ ಕಲ್ಲಿನ ಕಂಬಗಳಲ್ಲಿ ಕೆತ್ತಲಾದ ಶಿಲಾಬಾಲಿಕೆಯರು ದಿಢೀರನೆ ಜೀವ ಪಡೆದು, ರಂಗದ ಮೇಲೆ ಮೂಡಿಬಂದರೆ ಹೇಗಿರುತ್ತದೆ? ಇಂತಹದೊಂದು ಅಪರೂಪದ ಕಲ್ಪನೆಯನ್ನು ಪ್ರಯೋಗಕ್ಕೆ ತರುವ ಮೂಲಕ ಪ್ರಸಿದ್ಧ ನೃತ್ಯ ಕಲಾವಿದೆ, ಸಂಗೀತ ನಾಟಕ ಅಕಾಡೆಮಿ ಪುರಸ್ಕೃತೆ ನಿರುಪಮಾ ರಾಜೇಂದ್ರ ಪರಿಪೂರ್ಣ ನೃತಯ ಕಲಾವಿದೆ ಮತ್ತೊಮ್ಮೆ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪದ್ಮಭೂಷಣ ಪುರಸ್ಕೃತ, ಶತಾವಧಾನಿ ಡಾ. ಆರ್. ಗಣೇಶ್ ಅವರ ಸಾಹಿತ್ಯ ಮತ್ತು ಕಾವ್ಯವನ್ನು ರಂಗದ ಮೇಲೆ ಅಭಿನಯ ಹಾಗೂ ನೃತ್ಯದ ಮೂಲಕ ಜೀವಂತಗೊಳಿಸುವ 'ರಸಾರಾಧನ' ಏಕವ್ಯಕ್ತಿ ಭರತನೃತ್ಯ ಪ್ರದರ್ಶನವನ್ನು ನೋಡಲು ಕಲಾ ರಸಿಕರು ಕಿಕ್ಕಿರಿದು ಸೇರಿದ್ದರು. ಡಾ. ಪದ್ಮಾ ಸುಬ್ರಹ್ಮಣ್ಯಂ ಅವರು ದೇವಾಲಯಗಳ ಕರಣಗಳನ್ನು ಆಧರಿಸಿ ಪುನರ್ ರೂಪಿಸಿದ ಹಾಗೂ ಗುರು ಸುಂದರಿ ಸಂತಾನಂ ಅವರಿಂದ ಕಲಿತ 'ಭರತನಾಟ್ಯ' ಶೈಲಿಯಲ್ಲಿ ನಿರುಪಮಾ ಅವರು ನೀಡಿದ ಈ ಪ್ರದರ್ಶನ ಅಮೋಘವಾಗಿತ್ತು.
ಗೃಹಸ್ಥ ಜೀವನದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ನಡುವೆಯೂ ನಿಷ್ಠೆ ಕಾಯ್ದುಕೊಳ್ಳುವ ಪತ್ನಿ ಮತ್ತು ಕಷ್ಟದ ಕಾಲದಲ್ಲೂ ಸಂಯಮ ಕಳೆದುಕೊಳ್ಳದ ಶ್ರೀರಾಮನ ಸ್ಥಿತಪ್ರಜ್ಞತೆಯನ್ನು ರಂಗದ ಮೇಲೆ ಪ್ರಸ್ತುತಪಡಿಸಿದ ಪರಿ ಸೊಗಸಾಗಿತ್ತು. ಡಾ. ಗಣೇಶ್ ಅವರ ಕಾವ್ಯದಲ್ಲಿರುವ ಶಾಂತತೆ, ಆಂತರಿಕ ಸೌಂದರ್ಯ ಹಾಗೂ ಕಷ್ಟಕಾಲದ ಸಂಯಮದಂತಹ ಆಳವಾದ ಮೌಲ್ಯಗಳನ್ನು ನಿರುಪಮಾ ಅವರು ತಮ್ಮ ಭಾವಾಭಿನಯದ ಮೂಲಕ ಪ್ರೇಕ್ಷಕರಿಗೆ ತಲುಪಿಸಲಿದ್ದಾರೆ. ಶಾಸ್ತ್ರೀಯ ಕಲೆ ಕೇವಲ ಪುಸ್ತಕದ ಸಾಲುಗಳಾಗಿ ಉಳಿಯದೆ, ರಂಗದ ಮೇಲೆ 'ರಸ'ವಾಗಿ ಹರಿದಾಗ ಮಾತ್ರ ಸಾರ್ಥಕತೆ ಪಡೆಯುತ್ತದೆ ಎಂಬುದಕ್ಕೆ ಈ ನೃತ್ಯ ಪ್ರದರ್ಶನ ಪರಿಪೂರ್ಣ ಉದಾಹರಣೆಯಾಗಿತ್ತು.
ನಿರುಪಮಾ ನೃತ್ಯ ತಪ್ಪಸ್ಸಿಗೆ ಶತವಾಧಾನಿ ಗಣೇಶ್ ಅಭಿನಂದನೆ
ಡಾ.ಆರ್. ಗಣೇಶ್ (padma award) ಮಾತನಾಡಿ, 'ನಿರುಪಮಾ ಅವರ ಶ್ರದ್ಧೆ, ಆಸ್ಥೆ ಅದ್ಭುತವಾದದ್ದು. ಅವರು ಅದ್ಭುತ ಪರಿವರ್ತಕರು. ಪ್ರದರ್ಶನದ ವೇಳೆಯಲ್ಲೇ ಮಾಡುವ ಪ್ರಸ್ತುತಿಯ ಸುಧಾರಣೆಗಳು ವಿಶೇಷ. ಶೃಂಗಾರ ರಸವನ್ನು ಸರಿಯಾಗಿ ಅಭಿವ್ಯಕ್ತಪಡಿಸಲು ಬರಬೇಕು. ಆಗ ಭರತ ನಾಟ್ಯ ಎಂಬ ಹೆಸರು ಅರ್ಥಪೂರ್ಣ. ಗುಂಪು ನೃತ್ಯಗಳ (dance) ಬದಲಿಗೆ ಇಂಥಹ ಏಕವ್ಯಕ್ತಿ ಪ್ರದರ್ಶನಗಳು ಹೆಚ್ಚು ನಡೆಯಬೇಕುʼ ಎಂದರು.
ಸಂಗೀತ ವಿದುಷಿ ಎಂ.ಎಸ್. ಶೀಲಾ, ʼನಿರುಪಮಾ ಅವರು ಅಭಿನಯ ಶಾರದೆಯಾಗಿದ್ದಾರೆ. ಅವರ ಕಲಾರಾಧನೆ ನಿರಂತರವಾಗಿ ಮುಂದುವರಿಯಲಿʼ ಎಂದು ಆಶಿಸಿದರು. ನಿರುಪಮಾ ಅವರ ಪತಿ ರಾಜೇಂದ್ರ, ಕುಮಾರನ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ದೀಪಾ ಶ್ರೀಧರ್ ಉಪಸ್ಥಿತರಿದ್ದರು.
ಹಿಮ್ಮೆಳದಲ್ಲಿ ಯಾರಿದ್ದರು?
ಹಿನ್ನೆಲೆಯಲ್ಲಿ ರಘುರಾಮ್ ರಾಜಗೋಪಾಲನ್ (ಗಾಯನ), ಮಹೇಶ್ ಸ್ವಾಮಿ (ಕೊಳಲು), ಪ್ರಶಾಂತ್ ರುದ್ರಪಟ್ಟಣ(ವೀಣೆ), ಶ್ರೀನಿಧಿ ಮಾಥುರ್(ವಯೋಲಿನ್), ಪ್ರಸನ್ನಕುಮಾರ್ ( ತಾಳವಾದ್ಯ ಮತ್ತು ನಟುವಾಂಗ), ವಿದ್ಯಾಶಂಕರ್ (ಮೃದಂಗ) ಸಾಥ್ ನೀಡಿದರು. ಕಶ್ಯಪ್ ನಾಯಕ್ ಮತ್ತು ಅರ್ಜುನ್ ಭಾರಾದ್ವಾಜ್ ನಿರೂಪಿಸಿದರು.