
ಮಲೇಬೆನ್ನೂರು: ನಂದಿಗುಡಿ ಮಠದ ಕಟ್ಟಡ ತೆರವು ನೋಟಿಸ್ ಕಾನೂನು ಬಾಹಿರ ಎಂದ ಭಕ್ತರು
ಮಲೇಬೆನ್ನೂರು: ‘ಸಮೀಪದ ನಂದಿಗುಡಿ ವೃಷಭಪುರಿ (ನೊಳಂಬ ಸಮಾಜ) ಸಂಸ್ಥಾನಕ್ಕೆ ಸೇರಿರುವ ಕಲ್ಯಾಣ ಮಂಟಪ, ಗೋಶಾಲೆ ಹಾಗೂ ವಿದ್ಯಾರ್ಥಿ ನಿಲಯದ ಕಟ್ಟಡ ತೆರವು ಮಾಡುವಂತೆ ಹರಿಹರ ತಹಶೀಲ್ದಾರ್ ನೀಡಿರುವ ನೋಟಿಸ್ ಕಾನೂನು ಬಾಹಿರವಾಗಿದೆ’ ಎಂದು ಮಠದ ಭಕ್ತರಾದ ಇಂದೂಧರ್ ಎನ್. ರುದ್ರಗೌಡ ಹೇಳಿದರು.
‘ಮಠದ ಸುತ್ತಮುತ್ತಲಿನ ಸ.ನಂ. 76/7, 76/8, 76/9ರ ಒಟ್ಟು 24 ಗುಂಟೆ ಜಮೀನು ಪಟೇಲ್ ಸರ್ವೀಸ್ ಇನಾಂ ಎಂದು ನಮೂದಾಗಿದೆ. ಎಲ್ಲವೂ ಮಠದ ಆಸ್ತಿಯಾಗಿದ್ದು ಭಕ್ತರು, ಸಂಸದರು, ಸರ್ಕಾರದ ವಿವಿಧ ಯೋಜನೆ ಅಡಿ ಅನುದಾನ ಪಡೆದು ಕಟ್ಟಡ ನಿರ್ಮಿಸಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.
‘ಗ್ರಾಮಸ್ಥ ಪಟೇಲ್ ಬಸವರಾಜ್ ಅವರು ಜಮೀನು ಖಾತೆ ಮಾಡಿಕೊಡುವ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಆದರೆ, ಇನಾಂ ಜಮೀನು ಈವರೆಗೂ ಯಾರ ಹೆಸರಿನಲ್ಲೂ ಇಲ್ಲ. ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ’ ಎಂದರು.
‘ಕಟ್ಟಡ ತೆರವು ಮಾಡುವಂತೆ ಮಠ, ಸ್ವಾಮೀಜಿಗೆ ನೋಟಿಸ್ ನೀಡಲು ತಹಶೀಲ್ದಾರ್ ಅವರಿಗೆ ಅಧಿಕಾರ ಇಲ್ಲ’ ಎಂದು ಪ್ರತಿಪಾದಿಸಿದರು.
ನೊಳಂಬ ಸಮಾಜದ ಮುಖಂಡರಾದ ಹಾಲೇಶಪ್ಪ, ಬಿ.ಎಚ್. ರವಿಗೌಡ, ಎಚ್. ಈರನಗೌಡ, ಪರಮೇಶ್ವರಪ್ಪ, ದಡ್ಡಿ ಹನುಮಗೌಡ ಇದ್ದರು.