ಬರ; ಅಧಿವೇಶನದಲ್ಲಿ ಧ್ವನಿ ಎತ್ತುವೆ - ಅರವಿಂದ ಬೆಲ್ಲದ
ಧಾರವಾಡ: ‘ಉತ್ತರ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಇದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಲ್ಲಿನ ಬರದ ಬಗ್ಗೆ ಗಮನ ಹರಿಸಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ದೂರಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಧಾರವಾಡ ಜಿಲ್ಲೆಯಲ್ಲಿ ನೀರಾವರಿ ಇಲ್ಲ. ಇಲ್ಲಿನ ಬರ ಪರಿಸ್ಥಿತಿ ಅವರಿಗೆ ಕಾಣಸಿಲ್ಲ. ಈ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ. ರಾಜ್ಯ ಸರ್ಕಾರವು ಕೇಂದ್ರದ ಕಡೆಗೆ ಬೊಟ್ಟು ಮಾಡದೆ ಬರ ಪರಿಸ್ಥಿತಿ ನಿಭಾಯಿಸುವ ಕೆಲಸ ಮಾಡಬೇಕು. ಧಾರವಾಡ ಜಿಲ್ಲೆಯ ತಾಲ್ಲೂಕುಗಳನ್ನು ಬರ ಪ್ರದೇಶಗಳ ಪಟ್ಟಿಗೆ ಸೇರಿಸುತ್ತಾರೆ ಎಂಬ ಭರವಸೆ ಇದೆ’ ಎಂದರು.
‘ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಸಚಿವ ಸತೀಶ ಜಾರಕಿಹೊಳಿ ಅವರ ಮನೆ ಮೇಲೆ ದಾಳಿ ಮಾಡಿರುವುದು ರಾಜಕೀಯ ಪ್ರೇರಿತವಲ್ಲ. ದಾಳಿ ಸಂದರ್ಭದಲ್ಲಿ ದಾಖಲೆ, ₹ 3ಕೋಟಿ ನಗದು ಸಿಕ್ಕಿದೆ ಎಂದು ವರದಿಯಾಗಿದೆ. ಅವರು ಬಂಗಾರದ ಗಣಿಯಲ್ಲಿ ಹಣ ತೊಡಗಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲದರ ಕುರಿತು ಇ.ಡಿ ವಿಚಾರಣೆಯಲ್ಲಿ ತೊಡಗಿದೆ’ ಎಂದರು.