
ಆರ್‌ಎಸ್ಎಸ್‌ಗೆ ‘ಗುರು’ ಸಂದೇಶ ಮದ್ದು: ದಿಪ್ಸಿತಾ ಧರ್
ಮಂಗಳೂರು: ‘ಹಿಂದುಳಿದ ಸಮುದಾಯದವರಿಗಾಗಿಯೇ ದೇವಸ್ಥಾನಗಳನ್ನು ನಿರ್ಮಿಸಿದ ನಾರಾಯಣ ಗುರುಗಳ ಸಿದ್ಧಾಂತ, ಹಲವು ಬಗೆಯ ಅಸ್ಪೃಶ್ಯತೆ ಆಚರಿಸುತ್ತಿರುವ ಆರ್‌ಎಸ್ಎಸ್ ಮನಃಸ್ಥಿತಿಗೆ ಮದ್ದಾಗಬೇಕು’ ಎಂದು ಯುವಜನ ನಾಯಕಿ, ಪಶ್ಚಿಮ ಬಂಗಾಳದ ದಿಪ್ಸಿತಾ ಧರ್ ಹೇಳಿದರು.
‘ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯದ ಹಕ್ಕಿಕಾಗಿ, ಯುವಜನರ ಭದ್ರತೆಯ ಬದುಕಿಗಾಗಿ’ ಎಂಬ ಘೋಷಣೆಯಡಿ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಡಿವೈಎಫ್‌ಐ) ನಗರದಲ್ಲಿ ಭಾನುವಾರ ಆಯೋಜಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಮತ್ತು ಆರ್‌ಎಸ್ ಮನಃಸ್ಥಿತಿಯವರು ಇಂದಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರು, ಹಿಂದುಳಿದವರನ್ನು ಹತ್ತಿರ ಸೇರಿಸಿಕೊಳ್ಳಲು ತಯಾರಿಲ್ಲ. ಎಲ್ಲರೂ ಒಂದೇ ಎಂದು ಹೇಳುತ್ತಲೇ ಅವರು ತಳ ಸಮುದಾಯದವರನ್ನು ದೂರ ಇರಿಸುತ್ತಾರೆ. ಮನುವಾದವನ್ನು ಪಾಲಿಸುತ್ತಿರುವ ಆ ಪಕ್ಷ ಮತ್ತು ಸಂಘಟನೆ ಮಹಿಳೆಯನ್ನು ಕೂಡ ಗೌರವಿಸುತ್ತಿಲ್ಲ. ಆಕೆಯನ್ನು ಸಂತಾನೋತ್ಪತ್ತಿಯ ಯಂತ್ರ ಎಂದು ತಿಳಿದುಕೊಂಡಿವೆ ಎಂದು ದಿಪ್ಸಿತಾ ಹೇಳಿದರು.
2014ರಲ್ಲಿ ನರೇಂದ್ರ ಮೋದಿ ಮಂದಾಳುತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಾಗ ಎಲ್ಲರ ಜೊತೆಗೂಡಿ ಸರ್ವರ ಅಭಿವೃದ್ಧಿ ಎಂಬ ಘೋಷಣೆ ಕೇಳಿಬಂತು. ಮೋದಿ ಅವರನ್ನು ವಿಕಾಸ ಪುರುಷ ಎಂದು ಹೇಳಲಾಯಿತು. ಆದರೆ 12 ವರ್ಷಗಳಲ್ಲಿ ಅವರು ವಿನಾಶ ಪುರುಷ ಆಗಿದ್ದಾರೆ. ಭಾರತದ ಉತ್ತಮ ಗುಣಗಳನ್ನೆಲ್ಲ ನಾಶ ಮಾಡಿದ್ದಾರೆ. ಅವರ ಆಡಳಿತದಲ್ಲಿ ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆ. ತಾಯ್ತನದ ರಜೆಗೂ ಸಮಸ್ಯೆ ಆಗಿದೆ. ಕೃಷಿ ಸಂಸ್ಕೃತಿ ನಾಶವಾಗಿದೆ. ರೈತರ ಆತ್ಮಹತ್ಯೆ ಸುದ್ದಿ ಪ್ರತಿದಿನವೂ ಕೇಳಿಬರುತ್ತಿದೆ. ವಿಶ್ವ ಹಸಿವು ಸೂಚ್ಯಂಕದಲ್ಲಿ ಆಫ್ರಿಕಾದ ನಂತರದ ಸ್ಥಾನದಲ್ಲಿ ಭಾರತ ಇದೆ. ಭಾರತದಲ್ಲಿ ಪ್ರತಿ ಮಗು ಕೂಡ ಹಸಿವೆಯಲ್ಲೇ ಜನಿಸುತ್ತದೆ ಎಂದು ಅವರು ಹೇಳಿದರು.
ಡಿವೈಎಫ್‌ಐ ರಾಜ್ಯ ಸಮಿತಿ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ ಶಿಕ್ಷಣ ಸಂಸ್ಥೆಗಳು ಮಾರಾಟವಾಗಿದ್ದು ಶಿಕ್ಷಣ ವ್ಯವಸ್ಥೆಯ ಮೇಲೆ ದಾಳಿ ನಡೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಂದಾಗ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಿಟ್ಟಿಲ್ಲ. ಬಂದರಿನಲ್ಲಿ ಮೀನು ಮಾರಾಟಗಾರರು ಮತ್ತು ಕಾರ್ಮಿಕರ ಕೆಲಸಕ್ಕೆ ಅಡ್ಡಿಪಡಿಸಲಾಯಿತು. ಅವರಿಗೆ ಮೀನು ಮಾರಾಟಗಾರರ ವಾಸನೆ ಬಡಿಯಬಾರದು ಎಂದು ಜಿಲ್ಲಾಡಳಿತ ಅಂದುಕೊಂಡಿತ್ತೋ ಎಂದು ಪ್ರಶ್ನಿಸಿದರು.
ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯೆ ಮಾಧುರಿ ಬೋಳಾರ್, ಜಿಲ್ಲಾ ಸಮಿತಿ ಅಧ್ಯಕ್ಷ ಅಜ್ಲಾನ್ ಬೆಂಗ್ರೆ, ಕಾರ್ಯದರ್ಶಿ ಸಂತೋಷ್ ಬಜಾಲ್, ಕೋಶಾಧಿಕಾರಿ ಮನೋಜ್ ವಾಮಂಜೂರು, ಮಂಗಳೂರು ನಗರ ಸಮಿತಿ ಕಾರ್ಯದರ್ಶಿ ತಯ್ಯೂಬ್ ಬೆಂಗ್ರೆ, ಎಸ್‌ಎಫ್‌ಐ ಜಿಲ್ಲಾ ಸಮಿತಿ ಕಾರ್ಯದರ್ಶಿ ನಿವಾಯಕ್ ಮಂಗಳೂರು ಪಾಲ್ಗೊಂಡಿದ್ದರು.