
ನರಗುಂದದಲ್ಲಿ ಜೋಕುಮಾರನ ಆಗಮನ; ಮಳೆಗಾಗಿ ಪ್ರಾರ್ಥನೆ
ನರಗುಂದ: ಉರಿಬಿಸಿಲು ಹಾಗೂ ಬರಗಾಲದ ನಡುವೆ ತಾಲ್ಲೂಕಿನ ಹಳ್ಳಿಗಳಲ್ಲಿ ಜೋಕುಮಾರನ ಆಗಮನವಾಗಿದೆ. ಶುಕ್ರವಾರ ಗಣಪತಿ ಮೂರ್ತಿಗಳ ವಿಸರ್ಜನೆ ಆಗಿದ್ದು, ಮರುದಿನ ಅಂದರೆ ಶನಿವಾರ ಜೋಕುಮಾರ ಜನ್ಮತಾಳಿದ್ದಾನೆಂಬುದು ಗ್ರಾಮೀಣರ ನಂಬಿಕೆ.
ಜೋಕುಮಾರನಾದರೂ ಮಳೆ ತರಲಿ ಎನ್ನುವ ಪ್ರಾರ್ಥನೆಯೊಂದಿಗೆ ಸ್ವಾಮಿಯ ಮೂರ್ತಿಯನ್ನು ಸ್ವಾಗತಿಸಿ, ಪೂಜಿಸಲಾಯಿತು. ಅಗಲ ಮುಖ, ದೊಡ್ಡ ಕಣ್ಣು, ಹುರಿ ಮೀಸೆ, ತೆರೆದ ಬಾಯಿ, ಹಣೆಗೆ ವಿಭೂತಿ, ಕುಂಕುಮದ ಪಟ್ಟೆಗಳು, ಕೈಯಲ್ಲಿ ಸಣ್ಣ ಕತ್ತಿ ಹಿಡಿದ ಮಣ್ಣಿನ ಜೋಕುಮಾರ ಜನರಿಂದ ಜೋಕಪ್ಪ ಎಂದು ಕರೆಸಿಕೊಳ್ಳುತ್ತಾನೆ.
ಆತನ ಮೂರ್ತಿಯನ್ನು ದೊಡ್ಡ ಬಿದಿರುಬುಟ್ಟಿಯಲ್ಲಿ ಬೇವಿನಸೊಪ್ಪಿನ ನಡುವೆ ಇಟ್ಟುಕೊಂಡು ಬಂದ ಮಹಿಳೆಯರ ಹಾಡು ಹಾಡಿದರು. ‘ಅಡ್ಡಡ್ಡ ಮಳೆ ಬಂದು... ದೊಡ್ಡ ದೊಡ್ಡ ಕೆರಿ ತುಂಬಿ... ಗೊಡ್ಡುಗಳೆಲ್ಲ ಹೈನಾಗೆ... ಜೋಕುಮಾರ...’ ಎಂದು ಹಾಡಿ, ರೈತರ ಬದುಕು ಹಸನಾಗಲೆಂದು ಕೇಳಿಕೊಂಡರು. ಪಟ್ಟಣದ ಬಾರಕೇರ ಕುಟುಂಬದ ಮಹಿಳೆಯರು ಮೊದಲಿನಿಂದ ಈ ಸಂಪ್ರದಾಯ ಪಾಲಿಸಿಕೊಂಡುಬಂದಿದ್ದಾರೆ. ಹೊಸ ತಲೆಮಾರಿನವರಿಗೂ ಈ ಬಗ್ಗೆ ಅರಿವು ಮೂಡಿಸುತ್ತಾರೆ.
‘ಗಂಗಾಮತಸ್ಥರ ಮನೆಯಲ್ಲಿ ಹುಟ್ಟುವ ಜೋಕುಮಾರನನ್ನು, ಆ ಮನೆತನದ ಪುರುಷರೊಂದಿಗೆ ಮಹಿಳೆಯರು ಹೊತ್ತು ಮನೆ ಮನೆಗೆ ತೆರಳುತ್ತಾರೆ. ಈ ಆಚರಣೆಗೆಂದೇ ನಿಗದಿತ ಹಾಗೂ ಸಿಮೀತವಾದ ಕುಟುಂಬಗಳಿವೆ. ಹಲವು ವರ್ಷಗಳ ಹಿಂದೆ ಏಳು ದಿನವರೆಗೆ ಜೋಕುಮಾರ ಸ್ವಾಮಿಯನ್ನು ಹೊತ್ತು ಮನೆ ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಸಾಕಷ್ಟು ಪ್ರಮಾಣದಲ್ಲಿ ಜೋಳ, ಅಕ್ಕಿ, ಗೋಧಿ, ಒಣ ಮೆಣಸಿನಕಾಯಿ, ಎಣ್ಣೆ, ಕಾಸು ದೊರೆಯುತ್ತಿತ್ತು. ಜೋಕುಮಾರನ ಬಾಯಿ ತುಂಬ ಬೆಣ್ಣೆ ಇರುತ್ತಿತ್ತು’ ಎಂದು ಪಟ್ಟಣದ ಲಕ್ಷ್ಮವ್ವ ಬಾರಕೇರ ನೆನಪಿಸಿಕೊಂಡರು.
‘ಆದರೀಗ ಸಮರ್ಪಕ ಮಳೆಯೂ ಇಲ್ಲ, ಜನರ ಬಳಿ ಹಣವೂ ಇಲ್ಲ. ಉದಾರವಾಗಿ ದಾನ ಕೊಡುವವರೂ ಕಡಿಮೆ. ಜೋಕುಮಾರ ಸ್ವಾಮಿಯನ್ನು ಹೊತ್ತು ತಿರುಗುವವರೂ ಕಡಿಮೆಯಾಗಿದ್ದಾರೆ. ದೊಡ್ಡವರು ಮಾಡಿದ ಪದ್ಧತಿಯನ್ನು ನಾವು ಪಾಲಿಸುತ್ತಿದ್ದೇವೆ’ ಎಂದು ಯಲ್ಲಮ್ಮ ಹಾಗೂ ರತ್ನಮ್ಮ ಹೇಳುತ್ತಾರೆ.
ಜೋಕುಮಾರ ಹುಣ್ಣಿಮೆ ಆಚರಣೆ
ಜೋಕುಮಾರನ ಕುರಿತು ಹಾಡು ಹೇಳುವವರು ಮೊದಲು ಗೌಡರು ಇಲ್ಲವೇ ಶಾನುಭೋಗರ ಹಾಗೂ ಆಯಾಗಾರರ ಮನೆಗಳಿಗೆ ಭೇಟಿ ನೀಡುತ್ತಾರೆ. ಏಳನೇ ದಿನ ಜೋಕಪ್ಪ ಸಾಯುತ್ತಾನೆ. ಅವನನ್ನು ಊರಿನ ಹೊರಗೆ ಅಗಸರು ಬಟ್ಟೆ ಒಗೆಯುವ ಬಂಡೆ ಅಡಿ ಹಾಕಲಾಗುತ್ತದೆ. ಇದು ಹುಣ್ಣಿಮೆಯಂದು ನಡೆಯು ವುದರಿಂದ ಜೋಕುಮಾರ ಹುಣ್ಣಿಮೆ ಎಂದೂ ಕರೆಯುತ್ತಾರೆ.
ಸಂಚಾರದ ಸಂದರ್ಭದಲ್ಲಿ ದೊರೆತ ಧಾನ್ಯಗಳಿಂದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುತ್ತಾರೆ. ಜೋಳದ ನುಚ್ಚನ್ನು ಪ್ರಸಾದವಾಗಿ ನೀಡಲಾಗುತ್ತದೆ. ಜೋಕುಮಾರನಿಗೆ ಅರ್ಪಿಸಿದ ಬೇವಿನ ತೊಪ್ಪಲು ಮತ್ತು ಉಪ್ಪು ಮಿಶ್ರಿತ ಜೋಳದ ನುಚ್ಚನ್ನು ಮನೆ ಮನೆಗೂ ಹಂಚುತ್ತಾರೆ. ಇದನ್ನು ರೈತರು ತಮ್ಮ ಹೊಲಗಳಿಗೆ ಚರಗ ಚೆಲ್ಲುತ್ತಾರೆ. ಇದರಿಂದ ಉತ್ತಮ ಮಳೆ–ಬೆಳೆ ಆಗುತ್ತದೆ ಎಂಬುದು ಜನರ ನಂಬಿಕೆ.