
ಬಳ್ಳಾರಿ: ವಾರದಲ್ಲಿ ಉತ್ತಮ ಮಳೆ ಕಂಡ ಜಿಲ್ಲೆ
ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ ಏಳು ದಿನಗಳ (ಸೆಪ್ಟೆಂಬರ್ 18ರಿಂದ 24ರವರೆಗೆ)ಗಳಲ್ಲಿ 4.22 ಸೆಂ.ಮೀ.ನ ವಾಡಿಕೆ ಮಳೆಗೆ ಪ್ರತಿಯಾಗಿ 5.49 ಸೆಂ.ಮೀ. ಮಳೆ ಯಾಗಿದ್ದು, ಇದು ಶೇ 30ರಷ್ಟು ಹೆಚ್ಚುವರಿ ಮಳೆಯಾಗಿದೆ.
ಸರಾಸರಿ ಹೆಚ್ಚಳವಿದ್ದರೂ, ತಾಲ್ಲೂಕುವಾರು ಹಂಚಿಕೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ.
ಬಳ್ಳಾರಿ ತಾಲ್ಲೂಕಿನಲ್ಲಿ ಅತಿಹೆಚ್ಚು ಮಳೆ ದಾಖಲಾಗಿದ್ದು, ವಾಡಿಕೆಯ 4.14 ಸೆಂ.ಮೀ.ಗೆ ಪ್ರತಿಯಾಗಿ 7.66 ಸೆಂ.ಮೀ. (ಶೇ 85ರಷ್ಟು ಹೆಚ್ಚಳ) ಮಳೆಯಾಗಿದೆ. ಕುರುಗೋಡು ತಾಲ್ಲೂಕಿನಲ್ಲಿಯೂ ಗಮನಾರ್ಹ ಏರಿಕೆ ಕಂಡುಬಂದಿದ್ದು, 3.32 ಸೆಂ.ಮೀ. ವಾಡಿಕೆಗೆ 5.15 ಸೆಂ.ಮೀ. (ಶೇ 55ರಷ್ಟು ಹೆಚ್ಚಳ) ಮಳೆಯಾಗಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಕಂಪ್ಲಿ ತಾಲ್ಲೂಕಿನಲ್ಲಿ ಮಳೆ ಕೊರತೆ ಎದ್ದುಕಾಣುತ್ತಿದ್ದು, 3.99 ಸೆಂ.ಮೀ. ವಾಡಿಕೆಗೆ ಪ್ರತಿಯಾಗಿ ಕೇವಲ 3.09 ಸೆಂ.ಮೀ. (ಶೇ 22ರಷ್ಟು ಕೊರತೆ) ಮಳೆಯಾಗಿದೆ. ಸಿರುಗುಪ್ಪ ತಾಲ್ಲೂಕಿನಲ್ಲಿ 5.31 ಸೆಂ.ಮೀ.ಗೆ 4.90 ಸೆಂ.ಮೀ. (ಶೇ 8ರಷ್ಟು ಕೊರತೆ) ಹಾಗೂ ಸಂಡೂರು ತಾಲ್ಲೂಕಿನಲ್ಲಿ 4.78 ಸೆಂ.ಮೀ. ವಾಡಿಕೆಗೆ 4.74 ಸೆಂ.ಮೀ. (ಶೇ 1ರಷ್ಟು ಕೊರತೆ) ಮಳೆಯಾಗಿ, ಬಹುತೇಕ ವಾಡಿಕೆ ಮಟ್ಟದಲ್ಲೇ ಮಳೆ ದಾಖಲಾಗಿದೆ.
ಹೋಬಳಿ ಮಟ್ಟದಲ್ಲಿ ವಿಪರೀತ ವ್ಯತ್ಯಾಸ: ಬಳ್ಳಾರಿ ತಾಲ್ಲೂಕಿನ ಕೋಳೂರು ಹೋಬಳಿಯಲ್ಲಿ 3.78 ಸೆಂ.ಮೀ. ವಾಡಿಕೆಗೆ 8.83 ಸೆಂ.ಮೀ. ಮಳೆಯಾಗಿ ಶೇ 133ರಷ್ಟು ಹೆಚ್ಚಳ ದಾಖಲಾಗಿದೆ. ಬಳ್ಳಾರಿ ತಾಲ್ಲೂಕಿನ ಮೊಕಾ ಹೋಬಳಿಯಲ್ಲಿ ಶೇ 113ರಷ್ಟು ಹಾಗೂ ರೂಪನಗುಡಿ ಹೋಬಳಿಯಲ್ಲಿ ಶೇ 92ರಷ್ಟು ಹೆಚ್ಚುವರಿ ಮಳೆಯಾಗಿದೆ. ಕುರುಗೋಡು ತಾಲ್ಲೂಕಿನ ಕೋಳೂರು ಹೋಬಳಿಯಲ್ಲಿ ಶೇ 77ರಷ್ಟು ಹೆಚ್ಚಳವಾಗಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಕಂಪ್ಲಿ ತಾಲ್ಲೂಕಿನ ಕುರುಗೋಡು ಹೋಬಳಿ ಯಲ್ಲಿ (ಕುರುಗೋಡು ತಾಲ್ಲೂಕಿನ ಪ್ರತ್ಯೇಕ) 42.2 ಸೆಂ.ಮೀ. ವಾಡಿಕೆಗೆ ಕೇವಲ 2.02 ಸೆಂ.ಮೀ. ಮಳೆಯಾಗಿ, ಶೇ 52ರಷ್ಟು ಕೊರತೆ ಎದುರಾಗಿದೆ. ಸಂಡೂರು ತಾಲ್ಲೂಕಿನ ತೋರಣಗಲ್ಲು ಹೋಬಳಿಯಲ್ಲಿ ಶೇ 22ರಷ್ಟು, ಸಿರುಗುಪ್ಪ ತಾಲ್ಲೂಕಿನ ಹಚ್ಚೊಳ್ಳಿ ಹೋಬಳಿಯಲ್ಲಿ ಶೇ 37ರಷ್ಟು ಕೊರತೆ ಕಂಡುಬಂದಿದೆ. ಆದರೆ ಸಿರುಗುಪ್ಪ ಪಟ್ಟಣ ಹೋಬಳಿಯಲ್ಲಿಯೇ ಶೇ 56ರಷ್ಟು ಹೆಚ್ಚುವರಿ ಮಳೆ ದಾಖಲಾಗಿರುವುದು ಗಮನಾರ್ಹ.
ಈ ಅಂಕಿ-ಅಂಶಗಳು,ಬಳ್ಳಾರಿ, ಕುರು ಗೋಡು ತಾಲ್ಲೂಕುಗಳ ಕೆಲ ಭಾಗಗಳಲ್ಲಿ ಕಳೆದ ವಾರ ಉತ್ತಮ ಮಳೆಯಾಗಿರುವುದನ್ನೂ, ಕಂಪ್ಲಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಕೊರತೆ ಮುಂದುವರಿದಿರುವುದನ್ನೂ ಸೂಚಿಸುತ್ತವೆ.
ಜಿಲ್ಲೆಯ ಜನವರಿಯಿಂದ ಸೆಪ್ಟೆಂಬರ್ 24ರವರೆಗಿನ ಒಟ್ಟಾರೆ ಸಂಚಿತ ಮಳೆ ಪ್ರಮಾಣ ಇನ್ನೂ ಶೇ 38ರಷ್ಟು ಕೊರತೆಯಲ್ಲೇ ಇದ್ದು (40.93 ಸೆಂ.ಮೀ. ವಾಡಿಕೆಗೆ 25.20 ಸೆಂ.ಮೀ. ಮಾತ್ರ ಮಳೆಯಾಗಿದೆ), ಕಳೆದ ವಾರದ ಈ ಹೆಚ್ಚಳವು ಜಿಲ್ಲೆಯ ಒಟ್ಟಾರೆ ಮಳೆ ಕೊರತೆಯನ್ನು ತುಸು ತಗ್ಗಿಸುವಲ್ಲಿ ನೆರವಾಗಿದೆಯಾದರೂ, ಪೂರ್ಣ ಪ್ರಮಾಣದಲ್ಲಿ ಸರಿದೂಗಿಸಿಲ್ಲ.
1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ: 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಬಿತ್ತನೆ ಪ್ರಗತಿಯು ಶೇ 78.39ರಷ್ಟಾಗಿದೆ.
ಒಟ್ಟು 1,59,546 ಹೆಕ್ಟೇರ್ ಗುರಿಯಲ್ಲಿ 1,25,064 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಸಂಡೂರು ತಾಲೂಕಿನಲ್ಲಿ ನಿಗದಿತ ಗುರಿಗಿಂತಲೂ ಹೆಚ್ಚಿನ ಅಂದರೆ ಶೇ 107.18ರಷ್ಟು ಸಾರ್ವಕಾಲಿಕ ಬಿತ್ತನೆಯಾಗಿದ್ದರೆ, ಕುರುಗೋಡು ತಾಲೂಕಿನಲ್ಲಿ ಕೇವಲ ಶೇ 46.95ರಷ್ಟು ಬಿತ್ತನೆ ದಾಖಲಾಗಿದೆ.
ಸಿರುಗುಪ್ಪದಲ್ಲಿ ಶೇ 88.49, ಬಳ್ಳಾರಿಯಲ್ಲಿ ಶೇ 73.22 ಹಾಗೂ ಕಂಪ್ಲಿಯಲ್ಲಿ ಶೇ. 55.53ರಷ್ಟು ಸಾಧನೆಯಾಗಿದೆ.
ಮಳೆಯಾಶ್ರಿತ ಬೆಳೆಗಳಿಗೆ ಜೀವದಾನ: ಕೃಷಿ ಇಲಾಖೆ
ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯಲಾಗಿರುವ ಹತ್ತಿ, ತೊಗರಿ, ಜೋಳ, ಮೆಕ್ಕೆಜೋಳ ಬೆಳೆಗಳಿಗೆ ಕಳೆದ ಒಂದು ವಾರದಿಂದ ಸುರಿದ ಮಳೆಯು ಜೀವದಾನ ನೀಡಿದೆ. ನೀರಾವರಿ ಭಾಗದ ಕಾಲುವೆ ಕೊನೆ ಭಾಗದ ರೈತರಿಗೂ ಈ ಮಳೆಯಿಂದ ಅನುಕೂಲವಾಗಿದೆ. ಜತೆಗೆ, ಮುಂಗಾರು ಹಂಗಾಮು ಇನ್ನೇನು ಆರಂಭವಾಗಲಿದ್ದು, ಈ ಚಟುವಟಿಕೆಗಳಿಗೂ ಈ ಮಳೆ ನೆರವಾಗಿದೆ. ಮಳೆ ಇನ್ನೂ ಎರಡು ಮೂರು ದಿನ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ
ಮಗು ಸಾವು: ಮಳೆಯಿಂದಾಗಿ ಬೆಣಕಲ್‌ನಲ್ಲಿ ಮೂರು ವರ್ಷದ ಮಗುವೊಂದು ಮೃತಪಟ್ಟಿದೆ. ಜತೆಗೆ, ಎರಡು ಮನೆಗಳು ಹಾನಿಯಾಗಿವೆ. ಅಲ್ಲಲ್ಲಿ ಭತ್ತದ ಬೆಳೆ ನೆಲಕ್ಕೊರಗಿದೆಯಾದರೂ, ಹಾನಿಯಾಗಿಲ್ಲ ಎಂದು ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.