
ಗಾರ್ಗಿ, ಮೈತ್ರೇಯಿ ದೇಶದ ಮೊದಲ ಶಿಕ್ಷಕಿಯರು: ಪ್ರಾಧ್ಯಾಪಕಿ ನಿರ್ಮಲಾ ಅಭಿಮತ
ಕಲಬುರಗಿ: ‘ಗಾರ್ಗಿ ಹಾಗೂ ಮೈತ್ರೇಯಿ ದೇಶದ ಮೊದಲ ಶಿಕ್ಷಕಿಯರು’ ಎಂದು ಹಿಂಗುಲಾಂಬಿಕಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿ ಡಾ.ನಿರ್ಮಲಾ ಕೆಳಮನಿ ಅಭಿಪ್ರಾಯಪಟ್ಟರು.
ಡಾ.ರಾಜ್‌ಕುಮಾರ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಲಾ ಸಂಘವು ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ 5ನೇ ವರ್ಷದ ‘ಶಿಕ್ಷಕರ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಮಾತನಾಡಿದ ಅವರು,‘ಗಾರ್ಗಿ ಸೀತೆಯ ಗುರುವಾಗಿದ್ದರು’ ಎಂದರು.
‘ಗುರು ಎಂದರೆ ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದುಕೊಂಡು ಹೋಗುವವರು ಎಂದರ್ಥ. ಆದ್ದರಿಂದ ಸಮಾಜದಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಮುಂದೆ ಗುರಿ ಹಾಗೂ ಹಿಂದೆ ಗುರು ಇದ್ದರೆ ಎಂಥ ಸಾಧನೆಯನ್ನು ಬೇಕಾದರೂ ಮಾಡಬಹುದು’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಮಾತನಾಡಿ, ‘ಡಾ.ರಾಜ್‌ಕುಮಾರ್ ಮಹಾನ್ ಕಲಾವಿದರು. ಕಲೆಯ ಮೂಲಕ ಅವರು ಇಡೀ ದೇಶದಲ್ಲಿ ಹೆಸರುವಾಸಿಯಾಗಿದ್ದವರು. ಅವರ ಹೆಸರಿನಲ್ಲಿ ಸಂಘ ಮಾಡಿಕೊಂಡು ಸಮಾಜದಲ್ಲಿನ ಸಾಧಕರನ್ನು ಗುರುತಿಸಿ, ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ’ ಎಂದರು.
‘ಉತ್ತಮ ವಿದ್ಯಾರ್ಥಿ, ಶಿಕ್ಷಕರು ಹಾಗೂ ವೈದ್ಯರಾಗಲು ಪರಿಶ್ರಮ ಬೇಕಾಗುತ್ತದೆ. ಎಲ್ಲರನ್ನೂ ಗುರುತಿಸುವುದು ಕಷ್ಟದ ಕೆಲಸ. ಆದರೂ ಗುರುತಿಸಿ, ಬೆನ್ನು ತಟ್ಟುವ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ’ ಎಂದು ಹೇಳಿದರು.
ಡಾ.ರಾಜ್‌ಕುಮಾರ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ರಮೇಶ ಬಿ.ಯಾಳಗಿ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ, ಜನರನ್ನು ಸೇರಿಸುವುದು ಕಷ್ಟದ ಕೆಲಸ. ಆದ್ದರಿಂದ ಕಾರ್ಯಕ್ರಮ ಮಾಡಲು ಮುಂದೆ ಬರುವವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು’ ಎಂದರು.
ವಕೀಲ ಹನುಮಂತ್ರಾಯ ಅಟ್ಟೂರ ಮಾತನಾಡಿ, ‘ಐದು ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಹೀಗೆಯೇ ಮುಂದುವರಿಯಲಿ’ ಎಂದರು.
ಇದೇ ವೇಳೆ ಸಾಧಕರಿಗೆ ರಾಜ್ಯಮಟ್ಟದ ಆದರ್ಶ ಶಿಕ್ಷಕ ದಂಪತಿ ಪ್ರಶಸ್ತಿ, ಆದರ್ಶ ವೈದ್ಯ ದಂಪತಿ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ, ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೆಂಭಾವಿಯ ಗುರು ಕಾಂತೇಶ್ವರ ಹಿರೇಮಠದ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಶರಣಪ‍್ಪ ಗುಂಡಗುರ್ತಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಶೈಲ ಸುತಾರ, ಗುರು ಬಂಡಿ, ವಿರೂಪಾಕ್ಷಪ್ಪ ಗಡ್ಡದ, ಅರುಣಾ ಗಡಾಳೆ, ಬಾಲಾಜಿ ವಿ.ಪಾಟೀಲ, ಮಂಜುನಾಥ ಕುಲಕರ್ಣಿ ಹಾಜರಿದ್ದರು. ಯಲ್ಲಾಲಿಂಗ ದಂಡಿನ ಸ್ವಾಗತಿಸಿದರು. ಮರಿಯಮ್ ಫಾತಿಮಾ ಹಾಗೂ ರಾಜಕುಮಾರ ವೈ. ಮಡಕಿ ನಿರೂಪಿಸಿದರು. ರಾಮ್ ಸಿ.ಎಂ. ವಂದಿಸಿದರು.