
ಕೋಲಾರ| ಲೋಕ ಅದಾಲತ್ನಲ್ಲಿ 34,542 ಪ್ರಕರಣ ಇತ್ಯರ್ಥ: ಒಂದಾದ ಅಜ್ಜ, ಮಗ, ಮೊಮ್ಮಗ
ಕೋಲಾರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿಜಯಕುಮಾರ್ ಎಂ.ಆನಂದಶೆಟ್ಟಿ ಅವರ ನೇತೃತ್ವದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ವಿವಿಧ 34,542 ಪ್ರಕರಣಗಳು ರಾಜಿ ಸಂಧಾನ ಮೂಲಕ ಇತ್ಯರ್ಥಗೊಂಡಿವೆ.
ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದ ಮೂವರು ದಂಪತಿ ಮತ್ತೆ ಒಂದಾಗಿದ್ದಾರೆ. ಜೊತೆಗೆ ಪೋಷಕರನ್ನು ಕಡೆಗಣಿಸುವ ಪ್ರವೃತ್ತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಜ್ಜ, ಮಗ ಮತ್ತು ಮೊಮ್ಮಗ ಸೇರಿ ಮೂರು ತಲೆಮಾರುಗಳನ್ನು ಒಂದೇ ವೇದಿಕೆಗೆ ಕರೆತಂದು ಒಂದುಗೂಡಿಸಲಾಯಿತು. ರಾಜಿ ಸಂಧಾನ ಮಾಡಿಸುವ ಮೂಲಕ ಆದರ್ಶ ಕೌಟುಂಬಿಕ ಬಾಂಧವ್ಯವನ್ನು ಮರುಸ್ಥಾಪಿಸಲಾಯಿತು.
ಈ ಮೂಲಕ ಬರೋಬ್ಬರಿ ₹ 27.29 ಕೋಟಿ ಪರಿಹಾರ ಮೊತ್ತದ ಪ್ರಕರಣಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್. ಬಡಿಗೇರ್ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿದಿದ್ದ 3,294 ಸಿವಿಲ್, ಕ್ರಿಮಿನಲ್ ಹಾಗೂ ವಿಮಾ ಪರಿಹಾರ ಪ್ರಕರಣಗಳನ್ನು ಉಭಯ ಪಕ್ಷಕಾರರು ಪರಸ್ಪರ ಮಾತುಕತೆಯ ಮೂಲಕ ರಾಜಿ ಮಾಡಿಕೊಂಡಿದ್ದರಿಂದ ಸುಖಾಂತ್ಯ ಕಂಡಿವೆ. ಈ ನ್ಯಾಯಾಲಯದ ಬಾಕಿ ಪ್ರಕರಣಗಳಲ್ಲಿ 223 ಚೆಕ್ ಬೌನ್ಸ್, 11 ಕೌಟುಂಬಿಕ ವ್ಯಾಜ್ಯಗಳು, 56 ಆಸ್ತಿ ವಿಭಾಗದ ದಾವೆಗಳು, 18 ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, 12 ಕ್ರಿಮಿನಲ್ ಕಾಂಪೌಂಡೇಬಲ್, 270 ಇತರೆ ಸಿವಿಲ್ ಹಾಗೂ 2,604 ಇತರೆ ಕ್ರಿಮಿನಲ್ ಪ್ರಕರಣಗಳು ಒಳಗೊಂಡಿವೆ ಎಂದಿದ್ದಾರೆ.
ಇದರ ಜೊತೆಗೆ, ನ್ಯಾಯಾಲಯದ ಮೆಟ್ಟಿಲೇರುವ ಮುನ್ನವೇ ಬಗೆಹರಿಸಬಹುದಾದ ಬ್ಯಾಂಕ್ ಸಾಲ, ಸಂಚಾರ ನಿಯಮ ಉಲ್ಲಂಘನೆ ಹಾಗೂ ಇತರೆ ಸಾರ್ವಜನಿಕ ಉಪಯುಕ್ತತೆಗಳಿಗೆ ಸಂಬಂಧಿಸಿದ ಒಟ್ಟು 31,248 ವ್ಯಾಜ್ಯಪೂರ್ವ ಪ್ರಕರಣಗಳನ್ನು ಸಹ ಯಶಸ್ವಿಯಾಗಿ ಪರಿಹರಿಸಲಾಗಿದ್ದು, ಸಾರ್ವಜನಿಕರಿಗೆ ದೊಡ್ಡ ಮಟ್ಟದ ಪರಿಹಾರ ದೊರಕಿದೆ ಎಂದು ಹೇಳಿದ್ದಾರೆ.
ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್, ಕಾರ್ಯದರ್ಶಿ ಕೆ.ಎ.ಆದರ್ಶ, ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ, ವಕೀಲರು ಹಾಗೂ ಸಹಕರಿಸಿದ ಕಕ್ಷಿದಾರರಿಗೆ ಪ್ರಭು ಎನ್. ಬಡಿಗೇರ್ ಕೃತಜ್ಞತೆ ಸಲ್ಲಿಸಿದ್ದಾರೆ.