
ಇಡೀ ದೇಶವನ್ನು ಯಾವಾಗ ನಾಶ ಮಾಡಬೇಕು? ಇರಾನ್‌ಗೆ ಟ್ರಂಪ್ ಎಚ್ಚರಿಕೆಯ ಸಂದೇಶ
ವಾಷಿಂಗ್ಟನ್: ಇರಾನ್ ತನ್ನ ನಡೆ ಬದಲಿಸಿಕೊಳ್ಳದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಇಡೀ ದೇಶವನ್ನು ಯಾವಾಗ ನಾಶ ಮಾಡಬೇಕು ಎಂಬುದೇ ಈಗ ಇರುವ ಪ್ರಶ್ನೆ. ಅವರು (ಇರಾನ್) ಎಚ್ಚರಿಕೆ ವಹಿಸುವುದು ಉತ್ತಮ’ ಎಂದು ಹೇಳಿದ್ದಾರೆ.
‘ಸದ್ಯ ನಿರ್ಣಾಯಕ ಹಂತದಲ್ಲಿದ್ದೇವೆ. ಇರಾನ್ ವಿಚಾರದಲ್ಲಿ ಸೇನಾ ಕಾರ್ಯಾಚರಣೆ, ಆರ್ಥಿಕ ನಿರ್ಬಂಧ ಮತ್ತು ರಾಜತಾಂತ್ರಿಕ ಮಾತುಕತೆ ಮೂರೂ ಆಯ್ಕೆಗಳನ್ನು ಅವಲೋಕಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಬೆಳವಣಿಗೆಯಾಗಲಿದೆ’ ಎಂದಿದ್ದಾರೆ.
ಅಮೆರಿಕವು ಇರಾನ್ ಮೇಲೆ ಮತ್ತೆ ದಾಳಿ ನಡೆಸಲು ಸಜ್ಜಾಗುತ್ತಿದೆ ಎಂಬ ವರದಿಗಳ ನಡುವೆಯೇ ಟ್ರಂಪ್ ಮಾತನಾಡಿದ್ದಾರೆ.
ಇರಾನ್ ಅಧ್ಯಕ್ಷ ಮಸೌದ್ ಪೆಜೆಷ್ಕಿಯಾನ್ ಅವರೊಂದಿಗೆ ಮುಕ್ತ ಮಾತುಕತೆ ನಡೆಸಲು ಸಿದ್ಧವಿರುವುದಾಗಿಯೂ ಟ್ರಂಪ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನವು ಸೋಮವಾರ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಅಮೆರಿಕದ ಎಚ್ಚರಿಕೆಗಳಿಗೆ ಪ್ರತಿಯಾಗಿ ಇರಾನ್ ಕೂಡ ಸ್ಪಷ್ಟ ಸಂದೇಶ ರವಾನಿಸಿದೆ. ಒಂದು ವೇಳೆ ಅಮೆರಿಕ ದಾಳಿ ಮಾಡಿದರೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಇರಾನ್ ಸೆಂಟ್ರಲ್ ಕಮಾಂಡ್ ಹೇಳಿದೆ.
ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘೇರ್ ಘಾಲಿಬಾಫ್, ಯುದ್ಧ ಮತ್ತು ಮಾತುಕತೆ ಎರಡಕ್ಕೂ ನಾವು ಸಿದ್ಧರಿದ್ದೇವೆ ಎಂದಿದ್ದಾರೆ.
‘ಯುದ್ಧ ಅಥವಾ ಮಾತುಕತೆ ಎಂಬುದು ಬೇರೆ ಬೇರೆಯಲ್ಲ. ಹೋರಾಟ ಹಾಗೂ ಮಾತುಕತೆ ಎರಡನ್ನೂ ಸರಿಯಾದ ಸಮಯದಲ್ಲಿ ನಡೆಸಬೇಕು. ಇರಾನ್‌ನ ರಾಜತಾಂತ್ರಿಕ ನಿಲುವು ಸ್ಪಷ್ಟವಾಗಿದೆ. ನಮ್ಮ ಕರಾರುಗಳನ್ನು ಮಧ್ಯವರ್ತಿಗಳ ಮೂಲಕ ಅಮೆರಿಕಕ್ಕೆ ಈಗಾಗಲೇ ತಿಳಿಸಿದ್ದೇವೆ. ಮೋಸ ಅಥವಾ ಏಕಪಕ್ಷೀಯವಾಗಿ ಷರತ್ತು ಹೇರುವ ಮಾರ್ಗ ಮುಚ್ಚಿದೆ ಎಂಬುದು ಅವರಿಗೆ (ಅಮೆರಿಕಕ್ಕೆ) ಗೊತ್ತಿದೆ’ ಎಂದು ಸಂಸತ್ತಿನಲ್ಲಿ ಹೇಳಿದ್ದಾರೆ.
ಅಮೆರಿಕಕ್ಕೆ ಏಳು ಷರತ್ತು!
ಇರಾನ್ ತನ್ನ ಏಳು ಷರತ್ತುಗಳನ್ನು ಕತಾರ್ ಮೂಲಕ ಶನಿವಾರವೇ ಅಮೆರಿಕಕ್ಕೆ ತಿಳಿಸಿದೆ. ಅವುಗಳಿಗೆ ಒಪ್ಪದಿದ್ದರೆ, ಜಾಗತಿಕ ತೈಲ ಪೂರೈಕೆಯ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಅನ್ನು ಮುಚ್ಚುವುದಾಗಿ, ನಿರ್ಣಾಯಕ ಯುದ್ಧಕ್ಕೆ ಇಳಿಯುವುದಾಗಿ ಎಚ್ಚರಿಸಿದೆ.
ಟ್ರಂಪ್ ಅವರು ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಇರಾನ್‌ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ತಿಳಿಸಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.