
ಕೋಲಾರ | ಚಹಾ ಕುಡಿಯಲು ಬಂದು ಚಿನ್ನ ದೋಚಿದ್ದ ಆರೋಪಿ ಬಂಧನ
ಕೋಲಾರ: ಪರಿಚಿತನಂತೆ ಮನೆಗೆ ಬಂದು ಚಹಾ ಕುಡಿದು, ಸುಮಾರು ₹4.5 ಲಕ್ಷ ಮೌಲ್ಯದ 30 ಗ್ರಾಂ ಚಿನ್ನದ ಆಭರಣ ಕಳವು ಮಾಡಿದ್ದ ಆರೋಪಿಯನ್ನು ಪ್ರಕರಣ ದಾಖಲಾದ ಕೇವಲ 48 ಗಂಟೆಗಳಲ್ಲಿ ಶ್ರೀನಿವಾಸಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕಿನ ಮೊಗಿಲಹಳ್ಳಿ ಗ್ರಾಮದ ನಿವಾಸಿ, ಚಾಲಕ ಎಂ.ಆರ್.ರಾಜು (27) ಬಂಧಿತ ಆರೋಪಿ. 75 ಬಂಗಾರದ ಗುಂಡುಗಳು, ತಾಳಿ ಬೊಟ್ಟು ಹಾಗೂ ಲಕ್ಷ್ಮಿ ಕಾಸು ಸೇರಿದಂತೆ ಒಟ್ಟು 30 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ: ಪಟ್ಟಣದ ಕೋರ್ಟ್ ಹಿಂಭಾಗದ ನಿವಾಸಿ ಮೀನಾಕ್ಷಿ ಅವರ ಮನೆಗೆ ಸೆ.18ರಂದು ಮಧ್ಯಾಹ್ನ ಆರೋಪಿ ರಾಜು ಬಂದಿದ್ದನು. ಪರಿಚಿತನಾಗಿದ್ದರಿಂದ ಆತನಿಗೆ ಮನೆಯವರು ಚಹಾ ನೀಡಿದ್ದರು. ಆತ ಮಾತನಾಡಿಕೊಂಡು ಚಹಾ ಕುಡಿದು ನಿರ್ಗಮಿಸಿದ ಬಳಿಕ, ಮನೆಯಲ್ಲಿದ್ದ ಆಭರಣಗಳು ಕಾಣೆಯಾಗಿರುವುದು ಕಂಡುಬಂದಿದೆ. ಈ ಕುರಿತು ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೆವು ಎಂದು ಪೊಲೀಸರು ತಿಳಿಸಿದ್ದಾರೆ.
50ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಚ್.ಸಿ.ಜಗದೀಶ್ ಹಾಗೂ ಮುಳಬಾಗಿಲು ಉಪವಿಭಾಗದ ಎಎಸ್‌ಪಿ ಮನೀಷಾ ಮಾರ್ಗದರ್ಶನದಲ್ಲಿ ಶ್ರೀನಿವಾಸಪುರ ಪೊಲೀಸ್ ಇನ್‌ಸ್ಪೆಕ್ಟರ್ ಬಿ. ಶಂಕರಾಚಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಪಿಎಸ್‌ಐ ಜಯರಾಮ್, ಎಎಸ್‌ಐಗಳಾದ ಎಂ.ಕೆ.ವಾಸುದೇವಮೂರ್ತಿ, ಎನ್.ಜಿ.ಶ್ರೀನಿವಾಸ್ ಹಾಗೂ ಸಿಬ್ಬಂದಿ ನಾಗರಾಜ್, ಆನಂದ್ ಕುಮಾರ್, ಸಂತೋಷಕುಮಾರ್, ಅಂಬರೀಶ್ ಅವರಿದ್ದ ತಂಡವು 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಂತ್ರಿಕ ನೆರವು ಹಾಗೂ ಗುಪ್ತ ಮಾಹಿತಿದಾರರ ಸಹಾಯದಿಂದ ಕಾರ್ಯಾಚರಣೆ ನಡೆಸಿತ್ತು.
ಸೆ.20ರಂದು ಶ್ರೀನಿವಾಸಪುರ ತಾಲ್ಲೂಕಿನ ಹೆಬ್ಬಟ ಗ್ರಾಮದ ಕೆರೆ ಅಂಗಳದ ಸಮೀಪ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ರಾಜು 2023ರಲ್ಲಿ ಶ್ರೀನಿವಾಸಪುರ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೊ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇವಲ 48 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡದ ಕ್ಷಿಪ್ರ ಕಾರ್ಯಾಚರಣೆಯನ್ನು ಎಸ್‌ಪಿ ಕನ್ನಿಕಾ ಸಿಕ್ರಿವಾಲ್ ಶ್ಲಾಘಿಸಿದ್ದಾರೆ.