
ಬಂಗಾರಪೇಟೆ | ₹5 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಒಡಿಶಾ ಯುವಕನ ಬಂಧನ
ಬಂಗಾರಪೇಟೆ: ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹5 ಲಕ್ಷ ಮೌಲ್ಯದ 10 ಕೆ.ಜಿ ಗಾಂಜಾ ಜಪ್ತಿ ಮಾಡಿರುವ ರೈಲ್ವೆ ಪೊಲೀಸರು, ಒಡಿಶಾ ಮೂಲದ ಯುವಕನನ್ನು ಭಾನುವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಒಡಿಶಾದ ಗಂಜಾಂ ಜಿಲ್ಲೆ ಕಲ್ಲಿಕೋಟೆ ನಿವಾಸಿ ನರೇಂದ್ರ ಕರಣ್ (23) ಬಂಧಿತ ಆರೋಪಿ.
ಆರೋಪಿಯು ಒಡಿಶಾದಿಂದ ರೈಲಿನಲ್ಲಿ ಗಾಂಜಾ ತಂದು ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಇಳಿದು ಹೊರಹೋಗಲು ಯತ್ನಿಸುತ್ತಿದ್ದ. ಅನುಮಾನಗೊಂಡ ಪೊಲೀಸರು ತಡೆದು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ. ತಕ್ಷಣ ಮಾದಕ ವಸ್ತು ಜಪ್ತಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ರೈಲ್ವೆ ಪೊಲೀಸ್ ಅಧೀಕ್ಷಕಿ ಸಾರಾ ಫಾತಿಮಾ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಪಿಎಸ್ಐ ನಲ್ಲರಾಜು, ಎಎಸ್ಐ ರಮೇಶ್ ಹಾಗೂ ಸಿಬ್ಬಂದಿ ವೆಂಕಟೇಶ್, ಸಂತೋಷ್ ಭಾಗವಹಿಸಿದ್ದರು.