
ಬರ ಘೋಷಣೆಗೆ ಆಗ್ರಹ: ಮುಖ್ಯಮಂತ್ರಿಗೆ ಸಚಿವ ರಾಯರಡ್ಡಿ, ಶಾಸಕ ಎಚ್.ಕೆ. ಪಾಟೀಲ ಪತ್ರ
ಗದಗ: ರೋಣ, ಗದಗ, ಮುಂಡರಗಿ ತಾಲ್ಲೂಕುಗಳನ್ನು ಬತಪೀಡಿತ ಪ್ರದೇಶಗಳೆಂದು ತಕ್ಷಣ ಘೋಷಿಸುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಳೆಯ ಪ್ರಮಾಣದ ವರದಿ, ಬರ ಪರಿಸ್ಥಿತಿ ಕುರಿತು ಜಿಲ್ಲಾಡಳಿತ ಸಲ್ಲಿಸಿದ ಪ್ರಸ್ತಾವ, ಮುಖ್ಯಮಂತ್ರಿ ಅವರೇ ಖುದ್ದು ಬರ ಹಾಗೂ ಬೆಳೆಯ ಸ್ಥಿತಿಗತಿ ಪರಿಶೀಲಿಸಿದ್ದರ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಎಲ್ಲ ವಾಸ್ತವಾಂಶ ಹಾಗೂ ರೈತರ ಸಂಕಷ್ಟದ ನಡುವೆಯೂ ಮೂರು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಇದು ನನಗೆ ತೀವ್ರ ಅಸಮಾಧಾನ ಉಂಟುಮಾಡಿದೆ ಎಂದೂ ತಿಳಿಸಿದ್ದಾರೆ.
ಗದಗ ತಾಲ್ಲೂಕು ಸೇರಿದಂತೆ ಉತ್ತರ ಕರ್ನಾಟಕದ 27 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಆಗ್ರಹಿಸಿ ಶಾಸಕ ಎಚ್.ಕೆ. ಪಾಟೀಲ ಅವರು ಸಹ ಪತ್ರದ ಮೂಲಕ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.