ಹಿರಿಯೂರು ತಾಲ್ಲೂಕಿಗೆ 3,000 ಮನೆ ಮಂಜೂರು: ಸಚಿವ ಜಮೀರ್

ಹಿರಿಯೂರು ತಾಲ್ಲೂಕಿಗೆ 3,000 ಮನೆ ಮಂಜೂರು: ಸಚಿವ ಜಮೀರ್

ಹಿರಿಯೂರು ತಾಲ್ಲೂಕಿಗೆ 3,000 ಮನೆ ಮಂಜೂರು: ಸಚಿವ ಜಮೀರ್

ಹಿರಿಯೂರು: ಸೆ.16 ರಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಹಿರಿಯೂರು ತಾಲ್ಲೂಕಿಗೆ ಬಿ.ಆರ್. ಅಂಬೇಡ್ಕರ್ ನಿವಾಸ ಹಾಗೂ ಬಸವ ವಸತಿ ಯೋಜನೆಯಡಿ 3,000 ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ವಸತಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ನಗರ ಮತ್ತು ಗ್ರಾಮಾಂತರ ವಿಭಾಗದ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಸರ್ವರಿಗೂ ಸೂರು ಕಲ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ 1 ಲಕ್ಷ ಮನೆಗಳನ್ನು ಹೊಸದಾಗಿ ನಿರ್ಮಿಸುವ ಗುರಿ ಹೊಂದಲಾಗಿದೆ. ಫಲಾನುಭವಿಗಳಿಗೆ ನೀಡುವ ಸಹಾಯಧನವನ್ನು ಸಾಮಾನ್ಯ ವರ್ಗದವರಿಗೆ ₹1.20 ಲಕ್ಷದಿಂದ ₹2 ಲಕ್ಷಕ್ಕೆ, ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ₹2 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ. ಹಿರಿಯೂರು ತಾಲ್ಲೂಕಿನಲ್ಲಿ ಬಸವ ವಸತಿ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ 1,827 ಮನೆ, ಅಲ್ಪಸಂಖ್ಯಾತರಿಗೆ 450, ಅಂಬೇಡ್ಕರ್ ನಿವಾಸ ಯೋಜನೆಯಲ್ಲಿ ಎಸ್ಸಿ ಸಮುದಾಯದವರಿಗೆ 515 ಹಾಗೂ ಎಸ್ಟಿ ಸಮುದಾಯದವರಿಗೆ 208 ಮನೆಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.

‘ಕೊಳೆಗೇರಿ ಮಂಡಳಿಯಿಂದ 1.85 ಲಕ್ಷ ಮನೆ ನಿರ್ಮಿಸುವ ಗುರಿ ಇತ್ತು. ಪ್ರತಿ ಮನೆಗೆ ₹7.50 ಲಕ್ಷ ವೆಚ್ಚ ಆಗುತ್ತಿತ್ತು. ಕೇಂದ್ರ ಮತ್ತು ರಾಜ್ಯದ ಸಹಾಯಧನ ₹3 ಲಕ್ಷ ಸಿಗುತ್ತಿತ್ತು. ಉಳಿದ ₹4.50 ಲಕ್ಷವನ್ನು ಫಲಾನುಭವಿಗಳು ಭರಿಸದ ಕಾರಣಕ್ಕೆ ಮೂರ್ನಾಲ್ಕು ವರ್ಷಗಳಾ ದರೂ ಮನೆಗಳು ಪೂರ್ಣಗೊಂಡಿರಲಿಲ್ಲ. ಗುತ್ತಿಗೆದಾರರು ಅರೆಬರೆ ಕೆಲಸ ಮಾಡಿ ಕೈಬಿಟ್ಟಿದ್ದರು. 2024ರಲ್ಲಿ ಸಿದ್ದರಾಮಯ್ಯ ಅವರ ಮನವೊಲಿಸಿ ₹7,400 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, 2 ಹಂತದಲ್ಲಿ 79 ಸಾವಿರ ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸಿದ್ದೇವೆ. ಹಿರಿಯೂರಿನಲ್ಲಿ 500 ಮನೆ ಪೂರ್ಣ ಗೊಂಡಿದ್ದು, ಚುನಾವಣಾ ನೀತಿ ಸಂಹಿತೆ ಮುಗಿದ ಮೇಲೆ ವಿತರಿಸಲಾಗುವುದು’ ಎಂದು ಹೇಳಿದರು.

‘2018ರ ಸಮೀಕ್ಷೆಯಂತೆ ಜಿಲ್ಲೆಯಲ್ಲಿ 46,950 ವಸತಿ ರಹಿತರು, 24,565 ನಿವೇಶನ ರಹಿತರಿದ್ದಾರೆ. ವಸತಿ ಯೋಜನೆ ಜಾರಿಗೊಳಿಸಲು ಗ್ರಾಮೀಣ ಭಾಗದಲ್ಲಿ 1,102 ಎಕರೆ ಜಮೀನು ಸಿದ್ಧವಾಗಿದೆ. ಗ್ರಾಮ ಪಂಚಾಯಿತಿಗಳ ಮೂಲಕ 8,085 ಅರ್ಜಿ ಪಡೆಯಲಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ ವಸತಿ ಯೋಜನೆಗೆ 160.36 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಇದರಲ್ಲಿ 2,117 ನಿವೇಶನಗಳನ್ನು ಸೃಜಿಸಬಹುದು. ಪ್ರತಿ ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಲು ₹25 ಲಕ್ಷದಂತೆ ಜಿಲ್ಲೆಗೆ ₹279 ಕೋಟಿ, ಹಿರಿಯೂರಿಗೆ ₹40 ಕೋಟಿ ಅನುದಾನ ಬೇಕಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಆಕಾಶ್ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಎಸ್. ರಮ್ಯಾ, ಪೌರಾಯುಕ್ತ ಎ.ವಾಸೀಂ, ಪಿಡಿಒಗಳು, ಅಧಿಕಾರಿಗಳು ಹಾಜರಿದ್ದರು.

ನೀರು–ಮೇವಿನ ವ್ಯವಸ್ಥೆಗೆ ತಾಕೀತು

‘ಹಿರಿಯೂರು ತಾಲ್ಲೂಕಿನಿಂದ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಅಗತ್ಯವಿದೆ ಎಂದು ಕೋರಿ ನಿತ್ಯ ನೂರಾರು ದೂರವಾಣಿ ಕರೆಗಳು ಬರುತ್ತಿವೆ. ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ₹1 ಕೋಟಿ ಅನುದಾನ ಬಂದಿದೆ. ಕೆಲವು ಕಡೆ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ನೀರು ಕಲುಷಿತವಾಗಿದೆ ಎಂಬ ದೂರುಗಳಿವೆ. ತೊಂದರೆ ಇರುವ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ತಕ್ಷಣ ನೀರು ಪೂರೈಸುವ ವ್ಯವಸ್ಥೆ ಮಾಡಿ. ಎಲ್ಲೆಲ್ಲಿ ಗೋಶಾಲೆ ತೆರೆಯಬಹುದು ಎಂದು ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ, ದಿಂಡಾವರ ಪಂಚಾಯಿತಿ ವ್ಯಾಪ್ತಿಯಲ್ಲಿ 84 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದೆ. 12 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದೇವೆ. 9 ಹಳ್ಳಿಗಳಿಗೆ ಖಾಸಗಿಯವರ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡುತ್ತಿದ್ದೇವೆ ಎಂದು ತಹಶೀಲ್ದಾರ್ ಎಂ. ಸಿದ್ದೇಶ್ ಸಭೆಯ ಗಮನಕ್ಕೆ ತಂದರು.

‘ತಾಲ್ಲೂಕಿನಲ್ಲಿ 37 ಕೊಳವೆಬಾವಿ ಕೊರೆಸಿದ್ದು, 27ರಲ್ಲಿ ಅಲ್ಪಸ್ವಲ್ಪ ನೀರು ಬರುತ್ತಿದೆ. 6 ತಿಂಗಳವರೆಗೆ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ. 2 ತಿಂಗಳಿಗೆ ಆಗುವಷ್ಟು ಮೇವಿನ ದಾಸ್ತಾನು ಇದೆ’ ಎಂದು ಸಿಇಒ ಹೇಳಿದರು. ‘ತೀರಾ ಅಗತ್ಯ ಇರುವ ಕಡೆ ಗೋಶಾಲೆ ಆರಂಭಿಸಿ’ ಎಂದು ರಘುಮೂರ್ತಿ ಸಲಹೆ ನೀಡಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ