ಕಾವೇರಿ ಕಣಿವೆ ಜಲಾಶಯಗಳಲ್ಲಿ ಶೇ 57ಕ್ಕೆ ಇಳಿದ ನೀರಿನ ಮಟ್ಟ, ರಾಜ್ಯದ 2 ಕಡೆ ಭರ್ತಿ

ಕಾವೇರಿ ಕಣಿವೆ ಜಲಾಶಯಗಳಲ್ಲಿ ಶೇ 57ಕ್ಕೆ ಇಳಿದ ನೀರಿನ ಮಟ್ಟ, ರಾಜ್ಯದ 2 ಕಡೆ ಭರ್ತಿ

ಕಾವೇರಿ ಕಣಿವೆ ಜಲಾಶಯಗಳಲ್ಲಿ ಶೇ 57ಕ್ಕೆ ಇಳಿದ ನೀರಿನ ಮಟ್ಟ, ರಾಜ್ಯದ 2 ಕಡೆ ಭರ್ತಿ

ಬೆಂಗಳೂರು: ಕಳೆದ ಎರಡು ವಾರದಿಂದ ಮಳೆ ಜೊರತೆಯಿಂದ ಜಲಾಶಯಗಳ ಒಳಹರಿವಿನ ಪ್ರಮಾಣದಲ್ಲಿ ಕುಸಿತ ಕಂಡಿದೆ. ಆದರೆ, ತಮಿಳುನಾಡಿನ ಬೇಡಿಕೆಗೆ ಅನುಗುಣವಾಗಿ ನಿರಂತರವಾಗಿ ನೀರು ಹರಿಯುತ್ತಿರುವುದರಿಂದ ಕಾವೇರಿ ಪಾತ್ರದ ಜಲಾಶಯಗಳ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ.

ಉತ್ತರ ಕರ್ನಾಟಕದ ಆಲಮಟ್ಟಿ ಹಾಗೂ ಘಟಪ್ರಭಾ ಜಲಾಶಯಗಳಲ್ಲಿ ಮಾತ್ರ ಈಗಲೂ ಶೇ 100ರಷ್ಟು ಭರ್ತಿಯಾಗಿದೆ. ಉಳಿದಂತೆ ಕೆಲವೆಡೆ ಹೆಚ್ಚಿನ ನೀರು ಲಭ್ಯವಿದ್ದರೆ ಮಲೆನಾಡು ಭಾಗದ ಜಲಾಶಯಗಳು ಮಳೆ ಕೊರತೆಯಿಂದ ಭರ್ತಿಯಾಗಿಲ್ಲ.

ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ಈಗಲೂ ಶೇ 70ರಷ್ಟು ನೀರು ಲಭ್ಯವಿದೆ. 623.98 ಟಿಎಂಸಿ ಅಡಿ ನೀರು ಜಲಾಶಯಗಳಲ್ಲಿ ಸಂಗ್ರಹವಿದೆ. ಇಲ್ಲಿ 895 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಕಳೆದ ವರ್ಷ ಇದೇ ದಿನ 836 ಟಿಎಂಸಿ ಅಡಿ ನೀರು ಸಂಗ್ರಹವಿತ್ತು.

ಅದರಲ್ಲೂ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿ ಕೆಆರ್‌ಎಸ್ ಹೊರತು ಪಡಿಸಿ ಮೂರು ಜಲಾಶಯಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಸಾಕಷ್ಟು ನೀರು ಹರಿಸುತ್ತಿರುವುದರಿಂದ ಜಲಾಶಯಗಳ ನೀರಿನ ಪ್ರಮಾಣ ಶೇ 57ಕ್ಕೆ ಕುಸಿದಿದೆ.

ಸದ್ಯ ಕಾವೇರಿ ಕಣಿವೆ ನಾಲ್ಕು ಜಲಾಶಯಗಳಲ್ಲಿ 65.41 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಒಟ್ಟು 114 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಇರುವ ಜಲಾಶಯಗಳಲ್ಲಿ ಕಳೆದ ವರ್ಷ 110 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಈಗಲೂ ಜಲಾಶಯಗಳಿಗೆ 8 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಅದರಲ್ಲೂ ಹೇಮಾವತಿ ಜಲಾಶಯದಿಂದ ಹೆಚ್ಚಿನ ನೀರು ಹರಿಸುತ್ತಿರುವ ಕಾರಣಕ್ಕೆ ಕೆಆರ್ ಎಸ್‌ ನೀರಿನ ಒಳಹರಿವು ಹೆಚ್ಚಿದೆ. ಹಾರಂಗಿ, ಹೇಮಾವತಿ, ಕಬಿನಿ ಒಳಹರಿವು ತಗ್ಗಿದೆ. ಆದರೂ ಸುಮಾಉ18500 ಕ್ಯುಸೆಕ್‌ ನೀರನ್ನು ನಾಲ್ಕು ಜಲಾಶಯಗಳಿಂದ ಹೊರ ಹರಿಸಲಾಗುತ್ತಿದೆ.

ಕೊಡಗಿನ ಹಾರಂಗಿ ಜಲಾಶಯದಲ್ಲಿ 6.66 ಟಿಎಂಸಿ ಅಡಿ ನೀರಿದ್ದು ಶೇ 78ರಷ್ಟು ನೀರು ಸಂಗ್ರಹವಿದೆ. ಹೇಮಾವತಿ ಜಲಾಶಯದಲ್ಲಿ 20.22 ಟಿಎಂಸಿ ಅಡಿ ನೀರಿದ್ದು ಶೇ 55ಕ್ಕೆ ನೀರಿನ ಮಟ್ಟ ಇಳಿದಿದೆ. ಕೆಆರ್ ಎಸ್ ಜಲಾಶಯದಲ್ಲೂ ಈಗ 27.58 ಟಿಎಂಸಿ ಅಡಿ ನೀರಿದ್ದು, ಶೇ 56ಕ್ಕೆ ನೀರಿನ ಮಟ್ಟ ಕುಸಿದಿದೆ. ಕಬಿನಿ ಜಲಾಶಯದಲ್ಲೂ ಈಗ ಸುಮಾರು 11 ಟಿಎಂಸಿ ಅಡಿ ನೀರಿದ್ದರೆ, ನೀರಿನ ಮಟ್ಟವು ಶೇ 56ರಷ್ಟು ಮಾತ್ರ ಇದೆ. ಕಳೆದ ವರ್ಷ ಈ ಅವಧಿಯಲ್ಲಿ ನಾಲ್ಕೂ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದವು.

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ ನಿರಂತರವಾಗಿ ಶೇ 100ರಷ್ಟು ನೀರು ಸಂಗ್ರಹವಿದೆ. ಈಗಲೂ 522 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದರೆ 716 ಕ್ಯುಸೆಕ್ ಹೊರ ಹರಿಸಲಾಗುತ್ತಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯ ಘಟಪ್ರಭಾಜಲಾಶಯದಲ್ಲೂ ಶೇ 100ರಷ್ಟು ನೀರು ಸಂಗ್ರಹವಿದೆ. ಇಲ್ಲಿ 663 ಕ್ಯುಸೆಕ್ ಒಳಹರಿವು ಇದ್ದರೆ, 180ಕ್ಯುಸೆಕ್ ಮಾತ್ರ ಹೊರ ಬಿಡಲಾಗುತ್ತಿದೆ.

ಕೃಷ್ಣಾ ಕಣಿವೆಯ ತುಂಗಭದ್ರಾ ಜಲಾಶಯದಲ್ಲಿ ಶೇ 81, ನಾರಾಯಣಪುರ ಜಲಾಶಯದಲ್ಲಿ ಶೇ 85ರಷ್ಟು ನೀರು ಸಂಗ್ರಹವಿದ್ದರೆ, ಮಲಪ್ರಭಾ ಜಲಾಶಯದಲ್ಲಿ ಮಾತ್ರ ಶೇ 58ರಷ್ಟು ನೀರು ಸಂಗ್ರಹವಿದೆ.

ಮಲೆನಾಡಿನ ಜಲಾಶಯಗಳಲ್ಲಿ ಲಿಂಗನಮಕ್ಕಿಯಲ್ಲಿ ಶೇ 58ರಷ್ಟು ಮಾತ್ರ ನೀರು ಸಂಗ್ರಹವಿದೆ. ಈ ಜಲಾಶಯಕ್ಕೆ 1683 ಕ್ಯುಸೆಕ್‌ ಒಳಹರಿವು ಇದ್ದರೆ 6058 ಕ್ಯುಸೆಕ್‌ ಹೊರ ಬಿಡಲಾಗುತ್ತಿದೆ. ಭದ್ರಾ ಜಲಾಶಯದಲ್ಲಿ ಈಗ ಶೇ 87ರಷ್ಟು ನೀರಿನ ಸಂಗ್ರಹವಿದೆ. ಇಲ್ಲಿ 454 ಕ್ಯುಸೆಕ್‌ ನೀರು ಒಳಹರಿವು ಇದ್ದರೆ 744 ಕ್ಯುಸೆಕ್‌ ಮಾತ್ರ ಹೊರ ಬಿಡಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾಶಯದಲ್ಲಿ ಶೇ 61ರಷ್ಟು ಹಾಗೂ ವರಾಹಿ ಜಲಾಶಯದಲ್ಲಿ ಶೇ 57ರಷ್ಟು ಮಾತ್ರ ನೀರು ಲಭ್ಯವಿದೆ. ಮಲೆನಾಡಿನ ನಾಲ್ಕು ಜಲಾಶಯಗಳಲ್ಲಿ 260 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕೃಷ್ಣಾ ಕಣಿವೆಯ ಜಲಾಶಯಗಳಲ್ಲಿ 280 ಟಿಎಂಸಿ ಅಡಿ ನೀರಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ