
ಭದ್ರಾ ನೀರಿಗಾಗಿ 50 ವರ್ಷ ಕಾದವರು 20 ದಿನ ಕಾಯದಿದ್ದರೆ ಹೇಗೆ?: ಪೂರ್ಣಿಮಾ
ಹಿರಿಯೂರು: ‘ಭದ್ರಾ ನೀರಿಗಾಗಿ ಐವತ್ತು ವರ್ಷ ಕಾದಿದ್ದೀರಿ. ಈಗ ನೀರು ಹರಿಯಲು ಆರಂಭಿಸಿದೆ. ಇಪ್ಪತ್ತು ದಿನ ತಡೆದರೆ ನಿಗದಿಯಂತೆ ಎಲ್ಲ ಕೆರೆಗಳಿಗೂ ನೀರು ಬರಲಿದೆ. ರೈತರು ಆತುರದಲ್ಲಿ ನಾಲೆಯನ್ನು ಹಾಳು ಮಾಡುವ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಬಾರದು’ ಎಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನವಿ ಮಾಡಿದರು.
ಭದ್ರಾ ಮೇಲ್ದಂಡೆ ನಾಲೆ ಹಾದು ಹೋಗಿರುವ ತಾಲ್ಲೂಕಿನ ಗುಡಿಹಳ್ಳಿ, ಭೂತಯ್ಯನಹಟ್ಟಿ, ಗೌನಹಳ್ಳಿ, ಕೆ.ಸಿ ರೊಪ್ಪ, ಭರಂಪುರ, ದಾಸಣ್ಣನಮಾಳಿಗೆ, ಕಲ್ಲಹಟ್ಟಿ, ಐಮಂಗಲ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಅವರು ಸ್ಥಳೀಯ ರೈತರೊಂದಿಗೆ ಮಾತನಾಡಿದರು.
‘ಚಿತ್ರದುರ್ಗ ಶಾಖಾ ಕಾಲುವೆಯ ಮೂಲಕ ಐಮಂಗಲ ಹೋಬಳಿಯ ಗೌನಹಳ್ಳಿ, ಆದಿರಾಳು, ಹುಲಿತೊಟ್ಲು, ತವಂದಿ, ಸೂರಗೊಂಡನಹಳ್ಳಿ, ಐಮಂಗಲ, ಮರಡಿದೇವಿಗೆರೆ, ತಾಳವಟ್ಟಿ, ಬಸಪ್ಪನಮಾಳಿಗೆಯ 12 ಕೆರೆಗಳಿಗೆ ಖಚಿತವಾಗಿ ನೀರು ಹರಿಸಲಾಗುತ್ತದೆ. ನೀರು ಬರುವುದಿಲ್ಲ ಎಂಬ ಆತಂಕದಲ್ಲಿ ನಾಲೆಗೆ ಪಂಪ್ ಸೆಟ್ ಹಾಕಿ ಬಳಸುವುದು, ನಾಲೆಯನ್ನು ಒಡೆದು ನೀರು ಹರಿಸಿಕೊಳ್ಳುವುದು ಸರಿಯಲ್ಲ. ನೀರು ಎಲ್ಲರಿಗೂ ಬೇಕಿದೆ. ಕೆರೆಗಳು ತುಂಬಿದರೆ ಅಂತರ್ಜಲ ಹೆಚ್ಚುತ್ತದೆ ಎಂಬುದು ನೆನಪಿರಲಿ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಅಂದುಕೊಂಡಂತೆ ನೀರು ಹರಿಸಲು ಸಾಧ್ಯವಾಗಿಲ್ಲ. 3 ಟಿಎಂಸಿ ಅಡಿ ನೀರು ಹರಿಸಲು ಸಿಎಂ ಆದೇಶ ಮಾಡಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ರೈತರನ್ನು ಸಮಾಧಾನಪಡಿಸಿದರು.
‘ಈಗಾಗಲೇ ಕೆಸಿ ರೊಪ್ಪ, ಆದಿರಾಳು ಗೋಕಟ್ಟೆಗಳು ತುಂಬಿದ್ದು, ರಾತ್ರಿ ವೇಳೆಗೆ ಸೂರಗೊಂಡನಹಳ್ಳಿ ಕೆರೆಗೆ ನೀರು ತಲುಪುವ ಸಾಧ್ಯತೆ ಇದೆ. ಅಲ್ಲಿನ ಎರಡು ಕೆರೆಗಳು (ತವಂದಿ ಕೆರೆ) ಒಂದು ವಾರದಲ್ಲಿ ತುಂಬುವ ನಿರೀಕ್ಷೆ ಇದೆ. ಕಲ್ಲಹಟ್ಟಿ ಕೆರೆ ತುಂಬಿದ್ದು, ಐಮಂಗಲದ ದೊಡ್ಡ ಕೆರೆಯತ್ತ ನೀರು ಹರಿಯತೊಡಗಿದೆ. ಅಲ್ಲಿಂದ ಐಮಂಗಲ ಚಿಕ್ಕಕೆರೆ, ತಾಳವಟ್ಟಿ ಕೆರೆ ತುಂಬಿದ ನಂತರ ಸೊಂಡೆಕೆರೆ ಕಡೆ ನೀರು ಹೋಗಲಿದೆ. ಇದು ಪ್ರಾಯೋಗಿಕವಾಗಿ ಹರಿಸುತ್ತಿರುವ ನೀರು. ಯೋಜನೆಯ ಕಾಮಗಾರಿ ಪೂರ್ಣಗೊಂಡಲ್ಲಿ ನಿಗದಿ ಪಡಿಸಿದ ಪ್ರಮಾಣದಲ್ಲಿ ಎಲ್ಲರಿಗೂ ನೀರು ಸಿಗಲಿದೆ. ಒಂದು ವೇಳೆ ನೀರು ಸಿಗದೇ ಹೋದರೆ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ನೀರು ಬಿಡಿಸಲು ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.
ಮುಖಂಡರಾದ ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನಾಗೇಂದ್ರ ನಾಯ್ಕ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಪ್ಪ, ನಗರಸಭೆ ಮಾಜಿ ಉಪಾಧ್ಯಕ್ಷ ಬಿ.ಎನ್. ಪ್ರಕಾಶ್, ಬಳಗಟ್ಟ ಮೂರ್ತಿ, ಐಮಂಗಲ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ತಿಪ್ಪೀರಯ್ಯ, ಅಣ್ಣಪ್ಪ, ತಿಪ್ಪೇಸ್ವಾಮಿ, ಕಲ್ಲಹಟ್ಟಿ ಹರೀಶ್, ಗಿಡ್ಡೋಬನಹಳ್ಳಿ ಅಶೋಕ್, ಬಸಣ್ಣ, ಸಿದ್ದೇಶ್ ಉಪಸ್ಥಿತರಿದ್ದರು.