
ಆತ್ಮಹತ್ಯೆ ತಡೆ | ‘ಉಷಸ್’ ಯೋಜನೆ ವಿಸ್ತರಣೆ: 37 ಆಸ್ಪತ್ರೆಗಳಲ್ಲಿ ನೆರವು
ಬೆಂಗಳೂರು: ಆತ್ಮಹತ್ಯೆ ಅಥವಾ ಸ್ವಯಂ ಹಾನಿಗೆ ಯತ್ನಿಸಿ ಬದುಕುಳಿದವರಿಗೆ ಮಾನಸಿಕ ಹಾಗೂ ಸಾಮಾಜಿಕ ಆರೈಕೆ ಒದಗಿಸುವ ‘ಪ್ರಾಜೆಕ್ಟ್ ಉಷಸ್’ ಯೋಜನೆಯನ್ನು ರಾಜ್ಯದ 37 ಸರ್ಕಾರಿ ಆಸ್ಪತ್ರೆಗಳಿಗೆ ವಿಸ್ತರಿಸಲಾಗಿದೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮತ್ತು ಹಿಮಾಲಯ ವೆಲ್‌ನೆಸ್ ಕಂಪನಿ ಜಂಟಿಯಾಗಿ ಈ ಯೋಜನೆಯನ್ನು ಹಮ್ಮಿಕೊಂಡಿವೆ. ಸದ್ಯ 10 ಜಿಲ್ಲೆಗಳಲ್ಲಿನ 16 ಆಸ್ಪತ್ರೆಗಳು ಯೋಜನೆಯಡಿ ವೈದ್ಯಕೀಯ ನೆರವು ಒದಗಿಸುತ್ತಿದ್ದವು. ಈಗ ಯೋಜನೆಯನ್ನು ಮತ್ತಷ್ಟು ಆಸ್ಪತ್ರೆಗಳಿಗೆ ವಿಸ್ತರಿಸಲಾಗಿದೆ.
ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ಈ ಸಂಸ್ಥೆಗಳು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯೋಜನೆ ವಿಸ್ತರಣೆಗೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ನಿಮ್ಹಾನ್ಸ್ ನಿರ್ದೇಶಕ ಡಾ.ವೈ.ಸಿ. ಜನಾರ್ದನ್ ರೆಡ್ಡಿ, ‘ಈ ಯೋಜನೆಯು ಆತ್ಮಹತ್ಯೆ ಪ್ರಕರಣಗಳ ಇಳಿಕೆಗೆ ಸಹಕಾರಿಯಾಗಿದೆ. ಇದು ಇತರ ರಾಜ್ಯಗಳೂ ಅಳವಡಿಸಿಕೊಳ್ಳಬಹುದಾದ ಅತ್ಯುತ್ತಮ ಮಾದರಿ’ ಎಂದು ಶ್ಲಾಘಿಸಿದರು.
‘ಮನೋವೈದ್ಯಕೀಯ ವೃತ್ತಿಪರರು ಆಸ್ಪತ್ರೆಗಳಲ್ಲಿಯೇ ಪ್ರಾಥಮಿಕ ಹಂತದ ಕೌನ್ಸೆಲಿಂಗ್ ನಡೆಸುತ್ತಾರೆ. ಆತ್ಮಹತ್ಯಗೆ ಯತ್ನಿಸಿ ಬದುಕುಳಿದವರ ಜತೆಗೆ ತರಬೇತಿ ಪಡೆದ ವೃತ್ತಿಪರರು ಸಂಪರ್ಕದಲ್ಲಿರುತ್ತಾರೆ. 12 ತಿಂಗಳು ನಿರಂತರ ಫಾಲೊ ಅಪ್ ಮಾಡಲಿದ್ದಾರೆ. ಈ ಯೋಜನೆಯು ಆಸ್ಪತ್ರೆಗಳ ಮಟ್ಟದಲ್ಲಿ ನಿಖರ ದತ್ತಾಂಶ ಹಾಗೂ ಅನುಷ್ಠಾನದ ಒಳನೋಟಗಳನ್ನು ಒದಗಿಸಲಿದೆ’ ಎಂದು ಹೇಳಿದರು.
ಹಿಮಾಲಯ ವೆಲ್‌ನೆಸ್ ಕಂಪನಿಯ ಮಾನವ ಸಂಪನ್ಮೂಲ ನಿರ್ದೇಶಕ ಕೆ.ಜಿ. ಉಮೇಶ್, ‘ರೋಗಿಯ ಆರೈಕೆ ಕೇವಲ ಆಸ್ಪತ್ರೆಗೆ ಸೀಮಿತವಾಗದೆ, ಮನೆಗೆ ತೆರಳಿದ ಬಳಿಕವೂ ಅಗತ್ಯ. ರೋಗಿಯು ಆಸ್ಪತ್ರೆಯಿಂದ ತೆರಳಿದ ಬಳಿಕ ಕಳಂಕ, ಭಯ ಮತ್ತು ಒಂಟಿತನವನ್ನು ಅನುಭವಿಸುತ್ತಾನೆ. ಉಷಸ್ ಯೋಜನೆಯು ವೈದ್ಯಕೀಯ ಚಿಕಿತ್ಸೆಯ ಜತೆಗೆ ಕೌನ್ಸೆಲಿಂಗ್, ಕುಟುಂಬದ ಬೆಂಬಲ ಮತ್ತು ನಿಯಮಿತ ಫಾಲೊ ಅಪ್ ಚಿಕಿತ್ಸೆ ಬೆಸೆಯುವ ಸೇತುವೆಯಾಗಿದೆ’ ಎಂದು ಹೇಳಿದರು.
ನಿಮ್ಹಾನ್ಸ್ ರಿಜಿಸ್ಟ್ರಾರ್ ಹರ್ಷ ಎ.ಎಸ್., ಪ್ರಾಧ್ಯಾಪಕ ಡಾ.ಅವಿನಾಶ್ ವಿ. ಚೆರಿಯನ್, ಕೆ.ಜಾನ್ ವಿಜಯ್ ಸಾಗರ್, ಆರೋಗ್ಯ ಇಲಾಖೆ (ಮಾನಸಿಕ ಆರೋಗ್ಯ) ಉಪನಿರ್ದೇಶಕಿ ಡಾ. ರಜನಿ ಪಿ. ಪಾಲ್ಗೊಂಡಿದ್ದರು.
35 ಸಾವಿರ ಪ್ರಕರಣ ದಾಖಲು
2022ರಿಂದ ಈವರೆಗೆ ‘ಉಷಸ್’ ಯೋಜನೆಯಡಿ 35436 ಆತ್ಮಹತ್ಯೆ ಯತ್ನ ಹಾಗೂ ಸ್ವಯಂ ಹಾನಿ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 26385 ಜನರಿಗೆ ಆಪ್ತ ಸಮಾಲೋಚನೆ ಅಪಾಯದ ಬಗ್ಗೆ ಮೌಲ್ಯಮಾಪನ ಮತ್ತು ವ್ಯವಸ್ಥಿತ ಫಾಲೊ ಅಪ್ ಚಿಕಿತ್ಸೆ ಒದಗಿಸಲಾಗಿದೆ. ಅಲ್ಲದೆ 31002 ಕುಟುಂಬಗಳಿಗೂ ಆಪ್ತ ಸಮಾಲೋಚನೆ ನಡೆಸಲಾಗಿದೆ. ಇದರ ಪರಿಣಾಮ ಕೌನ್ಸೆಲಿಂಗ್ ಪಡೆದವರ ಪೈಕಿ ಕೇವಲ ಶೇ 1.3ರಷ್ಟು ಮಂದಿ ಮಾತ್ರ ಆತ್ಮಹತ್ಯೆಯ ಮರು ಪ್ರಯತ್ನ ಮಾಡಿದ್ದಾರೆ. ಶೇ 0.3 ರಷ್ಟು ಮಂದಿ ಮೃತಪಟ್ಟಿದ್ದಾರೆ. ಜಾಗತಿಕವಾಗಿ ಆತ್ಮಹತ್ಯೆಯ ಮರುಪ್ರಯತ್ನದ ಸಾವಿನ ಪ್ರಮಾಣ ಶೇ 3ರಿಂದ 4ರಷ್ಟಿದ್ದು ಅದಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಈ ಪ್ರಮಾಣ ಗಣನೀಯವಾಗಿ ತಗ್ಗಿದೆ ಎಂದು ನಿಮ್ಹಾನ್ಸ್ ವೈದ್ಯರು ವಿಶ್ಲೇಷಿಸಿದ್ದಾರೆ.