ತುಳು ಅಭಿವೃದ್ಧಿಗೆ ‘ತುಳು ಮಿಷನ್ 2035’: ಮೋಹನದಾಸ್ ಹೆಗ್ಡೆ ಸಲಹೆ
ಮಂಗಳೂರು: ತುಳು ಭಾಷೆ, ಪರಂಪರೆ ಸಂರಕ್ಷಣೆ, ಶಿಕ್ಷಣ, ಡಿಜಿಟಲೀಕರಣದ ಉದ್ದೇಶದಿಂದ ತುಳು ಮಿಷನ್ 2035 ಅನುಷ್ಠಾನಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಮೋಹನದಾಸ್ ಹೆಗ್ಡೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
‘ಭಾಷಾ ದಾಖಲಾತಿ, ಸಾಹಿತ್ಯ, ಮೌಖಿಕ ಪರಂಪರೆ, ಹಸ್ತಪ್ರತಿಗಳು, ತುಳು– ತಿಗಳಾರಿ ಲಿಪಿ ಪರಂಪರೆ, ಶಿಕ್ಷಣ, ಸಂಶೋಧನೆ, ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಅನುವಾದ, ಸೃಜನಶೀಲ ಕೈಗಾರಿಕೆಗಳು, ಪರಂಪರೆ ಪ್ರವಾಸೋದ್ಯಮ ಮತ್ತು ಜಾಗತಿಕ ತುಳು ಸಾಂಸ್ಕೃತಿಕ ಸಂಪರ್ಕಗಳನ್ನು ಸಮನ್ವಯಗೊಳಿಸುವ ಸಮಗ್ರ ಚೌಕಟ್ಟನ್ನು ಒಳಗೊಂಡು ತುಳು ಮಿಷನ್ ರಚನೆಯಾಗಬೇಕಾಗಿದೆ.
‘ಸಂರಕ್ಷಣೆಯ ಭಾಗವಾಗಿ ಇತಿಹಾಸ, ಸಾಹಿತ್ಯ, ಮೌಖಿಕ ಪರಂಪರೆ, ಪಾಡ್ದನ, ಪರಂಪರೆಗಳು, ಹಸ್ತಪ್ರತಿಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ದಾಖಲಿಸಬಹುದು. ಇದರ ಆಧಾರದ ಮೇಲೆ ತುಳು ಭಾಷಾ ದಾಖಲಾತಿ ದಸ್ತಾವೇಜು (ಸಿದ್ಧಪಡಿಸಿ ಭವಿಷ್ಯದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ನೀತಿ ರೂಪಿಸುವ ಕಾರ್ಯಗಳಿಗೆ ಸಾಕ್ಷ್ಯಾಧಾರ ಒದಗಿಸಬಹುದು.
‘ತುಳು ಸಾಂಸ್ಕೃತಿಕ ಕಾರ್ಯಾಲಯ, ಡಿಜಿಟಲ್ ಭಾಷಾ ತಂತ್ರಜ್ಞಾನ, ತುಳು–ತಿಗಳಾರಿ ಹಸ್ತಪ್ರತಿ ಮತ್ತು ಲಿಪಿ, ಮೌಖಿಕ ಪರಂಪರೆ, ಸಾಹಿತ್ಯ ಮತ್ತು ಅನುವಾದ, ಶಿಕ್ಷಣ, ನಿಘಂಟು ಮತ್ತು ಭಾಷಾ ಕಾರ್ಪಸ್ ಹಾಗೂ ಸೃಜನಶೀಲ ಆರ್ಥಿಕತೆಗಾಗಿ ವಿಶೇಷ ಸಂಸ್ಥೆಗಳು ಮತ್ತು ಮಿಷನ್‌ಗಳನ್ನು ಒಳಗೊಂಡ ಸಮಗ್ರ ಸಂಸ್ಥಾ ವ್ಯವಸ್ಥೆಯನ್ನು ಪರಿಶೀಲಿಸಬಹುದು. ತುಳು ಮಿಷನ್ ಅನ್ನು ಸಂಬಂಧಿತ ಸರ್ಕಾರಿ ಇಲಾಖೆಯ ಅಡಿಯಲ್ಲಿ ಪ್ರಾರಂಭಿಸಿ ಹಂತ ಹಂತವಾಗಿ ಬಲಪಡಿಸಬಹುದು.
‘ಡಿಜಿಟಲ್ ಅಭಿವೃದ್ಧಿಯ ಭಾಗವಾಗಿ ಭಾಷಾ ಕಾರ್ಪಸ್, ನಿಘಂಟು, ಫಾಂಟ್‌ಗಳು ಮತ್ತು ಕೀಬೋರ್ಡ್, ಮಾತು ಗುರುತಿಸುವಿಕೆ, ಪಠ್ಯ- ಧ್ವನಿ ತಂತ್ರಜ್ಞಾನ, ಅನುವಾದ ಸಾಧನಗಳು, ಡಿಜಿಟಲ್ ಪ್ರಕಟಣೆ ಮತ್ತಿತರ ಕ್ರಮ ಕೈಗೊಳ್ಳಬಹುದು. ನಂತರ ಅನ್ವಯಿಸುವ ಕಾನೂನು ಮತ್ತು ಆಡಳಿತಾತ್ಮಕ ಸಾಧ್ಯತೆಗಳಿಗೆ ಒಳಪಟ್ಟು, ಸಾರ್ವಜನಿಕ ಮಾಹಿತಿ, ಸಂಸ್ಕೃತಿ, ಪ್ರವಾಸೋದ್ಯಮ, ಜಾಗೃತಿ, ಕೃಷಿ ವಿಸ್ತರಣಾ ಸೇವೆಗಳು, ವಿಪತ್ತು ಜಾಗೃತಿ ಮತ್ತು ಸ್ಥಳೀಯ ಆಡಳಿತದ ಆಯ್ದ ಸಂವಹನಗಳಲ್ಲಿ ತುಳು ಭಾಷೆಯ ಬಳಕೆಯನ್ನು ಹಂತ ಹಂತವಾಗಿ ಪರಿಶೀಲಿಸಬಹುದು.
ಸಂಸ್ಥೆ ಸ್ಥಾಪನೆಗೂ ಮೊದಲು ಕಾನೂನುಬದ್ಧ ಅಧಿಕಾರ, ಆರ್ಥಿಕ ಕಾರ್ಯಸಾಧ್ಯತೆ ಪರಿಶೀಲಿಸಿ ಅನುಮೋದಿಸಬಹುದು’ ಎಂದು ಅವರು ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.