
ಬಂಗಾರಪೇಟೆ | 27 ವಾರ್ಡ್‌ಗಳಲ್ಲಿ ಇಲ್ಲ ನಾಮಫಲಕ: ಪಟ್ಟಣಕ್ಕೆ ಬರುವ ನಾಗರಿಕರ ಫಜೀತಿ
ಬಂಗಾರಪೇಟೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ ಮತ್ತು ರೈಲ್ವೆ ಜಂಕ್ಷನ್ ಹೊಂದಿರುವ ಬಂಗಾರಪೇಟೆಯು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದರೆ, ನಗರದಲ್ಲಿ ಮೂಲಸೌಕರ್ಯಗಳು ಮಾತ್ರ ಸುಧಾರಣೆಯಾಗಿಲ್ಲ. ಮುಖ್ಯವಾಗಿ ನಗರದ ವ್ಯಾಪ್ತಿಯಲ್ಲಿನ 27 ವಾರ್ಡ್‌ಗಳಲ್ಲಿ ಸಮರ್ಪಕ ದಾರಿ ಸೂಚಕ ನಾಮಫಲಕಗಳೇ ಇಲ್ಲ. ಇದರಿಂದಾಗಿ ಹೊರಗಿನಿಂದ ಪಟ್ಟಣಕ್ಕೆ ಬರುವ ಜನಸಾಮಾನ್ಯರು ಪರದಾಡುವಂತಾಗಿದೆ.
ನಗರ ಬೆಳೆಯುತ್ತಿದೆ, ಹೊಸ ಲೇಔಟ್‌ಗಳು ತಲೆ ಎತ್ತುತ್ತಿವೆ, ಪ್ರತಿದಿನವೂ ಸಾವಿರಾರು ಜನರು ನಾನಾ ಕೆಲಸ ಕಾರ್ಯಗಳಿಗಾಗಿ ನಗರಕ್ಕೆ ಭೇಟಿ ನೀಡುತ್ತಾರೆ. ಆದರೆ, ನಗರ ಪ್ರವೇಶಿಸುವ ಹೊಸಬರು ಹಾಗೂ ಹೊರ ಊರಿನ ಪ್ರಯಾಣಿಕರಿಗೆ ಮಾತ್ರ ಎಲ್ಲವೂ ಗೊಂದಲಮಯವಾಗಿದ್ದು, ನಗರದ ಪ್ರಮುಖ ವೃತ್ತಗಳು, ರಸ್ತೆಗಳು ಮತ್ತು ಬಡಾವಣೆಗಳಲ್ಲಿ ಎಲ್ಲಿಯೂ ಸರಿಯಾದ ನಾಮಫಲಕಗಳಿಲ್ಲ.
ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡ ಈ ನಗರಕ್ಕೆ ನಿತ್ಯ ಸಾವಿರಾರು ಜನರು ರೈಲು ಮತ್ತು ಬಸ್ ಮೂಲಕ ಆಗಮಿಸುತ್ತಾರೆ. ಆದರೆ, ನಗರದ ಪ್ರವೇಶಿಸಿದ ನಂತರ ಯಾವ ರಸ್ತೆ ಎಲ್ಲಿಗೆ ಹೋಗುತ್ತದೆ ಎಂಬ ಕನಿಷ್ಠ ಮಾಹಿತಿ ಸಿಗದೆ ಜನರು ಗೊಂದಲಕ್ಕೀಡಾಗುತ್ತಿದ್ದಾರೆ.
ನಗರಸಭೆ ವ್ಯಾಪ್ತಿಯು ಒಟ್ಟು 27 ವಾರ್ಡ್‌ಗಳನ್ನು ಒಳಗೊಂಡಿದೆ. ಹಳೆ ಬಡಾವಣೆಗಳಿಂದ ಹಿಡಿದು ಹೊಸದಾಗಿ ನಿರ್ಮಾಣವಾದ ಬಡಾವಣೆಗಳವರೆಗೆ ನಾಮಫಲಕಗಳ ಸಮಸ್ಯೆ ವ್ಯಾಪಿಸಿದೆ. ನಗರದ ಹೃದಯ ಭಾಗದಲ್ಲಿರುವ ಅಂಬೇಡ್ಕರ್ ವೃತ್ತ, ಕುವೆಂಪು ವೃತ್ತ, ಕಾರಹಳ್ಳಿ ವೃತ್ತ, ಬಸ್ ನಿಲ್ದಾಣದ ರಸ್ತೆ ಮತ್ತು ರೈಲ್ವೆ ನಿಲ್ದಾಣದ ಸಮೀಪವಿರುವ ವಾರ್ಡ್ ಸಂಖ್ಯೆ 20ರಿಂದ 27ರವರೆಗಿನ ಹೊಸ ಬಡಾವಣೆಗಳಲ್ಲಿ ರಸ್ತೆ ಹೆಸರು ಅಥವಾ ವಾರ್ಡ್ ಸಂಖ್ಯೆ ವಿವರಗಳಿಲ್ಲದೆ ಅಂಚೆ ಸಿಬ್ಬಂದಿ ಮತ್ತು ಡೆಲಿವರಿ ಬಾಯ್‌ಗಳು ವಿಳಾಸ ಹುಡುಕಲು ಗಂಟೆಗಟ್ಟಲೆ ಸಮಯ ವ್ಯಯಿಸುತ್ತಿದ್ದಾರೆ. ತಾಲ್ಲೂಕು ಕಚೇರಿ, ನ್ಯಾಯಾಲಯ ಮತ್ತು ಆಸ್ಪತ್ರೆಗಳಿಗೆ ಹೋಗುವ ರಸ್ತೆಗಳಲ್ಲೂ ದಾರಿ ಸೂಚನಾಫಲಕಗಳ ಕೊರತೆ ಎದ್ದು ಕಾಣುತ್ತಿದೆ.
ನಗರದ ಅತ್ಯಂತ ಜನನಿಬಿಡ ಪ್ರದೇಶಗಳಾದ ಬಸ್ ನಿಲ್ದಾಣ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಕೋಲಾರ ರಸ್ತೆ, ಕೆಜಿಎಫ್ ರಸ್ತೆ ಹಾಗೂ ಪ್ರಮುಖ ವಾಣಿಜ್ಯ ಬೀದಿಗಳಲ್ಲಿ ಮಾರ್ಗಸೂಚಿ ಫಲಕಗಳು ಇಲ್ಲ. ಯಾವುದೋ ಒಂದು ನಿರ್ದಿಷ್ಟ ಓಣಿ ಅಥವಾ ಸರ್ಕಾರಿ ಇಲಾಖೆಗೆ ತಲುಪಲು ಕನಿಷ್ಠ ನಾಲ್ಕಾರು ಜನರನ್ನು ಆಶ್ರಯಿಸುವಂತಾಗಿದೆ.
ನಗರದ ಅಭಿವೃದ್ಧಿಗಾಗಿ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬರುತ್ತಿದೆ. ಆದರೆ, ಸಣ್ಣ ಮತ್ತು ಅತಿ ಅಗತ್ಯ ನಾಮಫಲಕಗಳನ್ನು ಅಳವಡಿಸಲು ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
‘ನಗರ ಬೆಳೆಯುತ್ತಿದ್ದರೂ ಕನಿಷ್ಠ ರಸ್ತೆ ಹೆಸರು ಹಾಗೂ ಕ್ರಾಸ್ ಸಂಖ್ಯೆ ಬೋರ್ಡ್‌ಗಳಿಲ್ಲದಿರುವುದು ದುರಂತ. ಮನೆಗೆ ಬರುವ ನೆಂಟರು ಅಥವಾ ಹೊಸಬರಿಗೆ ದಾರಿ ಹೇಳುವುದರಲ್ಲೇ ಸಾಕಾಗುತ್ತದೆ. ನಗರಸಭೆಯು ತಕ್ಷಣ ಪ್ರತಿಯೊಂದು ಓಣಿಯಲ್ಲೂ ನಾಮಫಲಕ ಹಾಕಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ತಿಮ್ಮಾಪುರ ನಾಗರಾಜ್ ಒತ್ತಾಯಿಸಿದರು.
ರೇಡಿಯಂಟ್ ನಾಮಫಲಕಕ್ಕೆ ಕ್ರಮ
ನಗರದ 27 ವಾರ್ಡ್‌ಗಳಲ್ಲಿ ಸಮರ್ಪಕ ನಾಮಫಲಕ ಹಾಗೂ ಮಾರ್ಗಸೂಚಿ ಬೋರ್ಡ್‌ಗಳಿಲ್ಲದಿರುವುದು ಆಡಳಿತದ ಗಮನಕ್ಕೆ ಬಂದಿದೆ. ನಗರದ ಸೌಂದರ್ಯೀಕರಣ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಈಗಾಗಲೇ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಶೀಘ್ರವೇ ಪ್ರಮುಖ ವೃತ್ತಗಳು, ರಸ್ತೆಗಳು ಹಾಗೂ ಹೊಸ ಬಡಾವಣೆಗಳಲ್ಲಿ ರಾತ್ರಿ ವೇಳೆ ಸ್ಪಷ್ಟವಾಗಿ ಕಾಣಿಸುವ ರೇಡಿಯಂಟ್ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಮತ್ತು ಹೊರ ಊರಿನಿಂದ ಬರುವ ಪ್ರಯಾಣಿಕರ ಅಲೆದಾಟ ತಪ್ಪಿಸಲು ನಗರಸಭೆ ಆಡಳಿತ ಬದ್ಧವಾಗಿದೆ.
ಜಗರೆಡ್ಡಿ, ನಗರಸಭೆ ಆಯುಕ್ತ