
ಹಾಸನ: 250 ಸಾಮರ್ಥ್ಯದ ಜೈಲಿನಲ್ಲಿ 334 ಕೈದಿಗಳು!
ಹಾಸನ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳಿದ್ದು, ಹೊಸ ಜೈಲು ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಬಂದೀಖಾನೆ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ನಗರದ ಜಿಲ್ಲಾ ಕಾರಾಗೃಹ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ಜಿಲ್ಲಾ ಕಾರಾಗೃಹವು 250 ಮಂದಿಯ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 334 ಕೈದಿಗಳಿದ್ದಾರೆ. ಇದರಿಂದ ಸಮಸ್ಯೆ ಎದುರಾಗಿದೆ. ಹೊಸ ಜೈಲು ನಿರ್ಮಾಣದ ಕುರಿತು ಸರ್ಕಾರದ ಪರಿಶೀಲನೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಹಾರ ಗುಣಮಟ್ಟ, ಸ್ವಚ್ಛತೆ ಪರಿಶೀಲನೆ: ಪರಿಶೀಲನೆ ವೇಳೆ ಕಾರಾಗೃಹದ ಸ್ವಚ್ಛತೆ, ಕೈದಿಗಳ ಕೂದಲು ಕತ್ತರಿಸುವ ವ್ಯವಸ್ಥೆ ಸೇರಿದಂತೆ ಪ್ರಿಸನ್ ಮ್ಯಾನ್ಯುಯಲ್ನಲ್ಲಿ ಸೂಚಿಸಿರುವ ನಿಯಮಗಳ ಪಾಲನೆ ಬಗ್ಗೆ ಪರಿಶೀಲಿಸಲಾಗಿದೆ. ಕೈದಿಗಳಿಗೆ ನೀಡಲಾಗುವ ಆಹಾರದ ಗುಣಮಟ್ಟವನ್ನೂ ಪರಿಶೀಲಿಸಲಾಗಿದ್ದು, ನಿಗದಿತ ಮಾನದಂಡಕ್ಕೆ ಅನುಗುಣವಾಗಿ ಇರುವುದು ಕಂಡುಬಂದಿದೆ ಎಂದು ಹೇಳಿದರು.
ಕಾರಾಗೃಹದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜೈಲು ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ನಿರಂತರವಾಗಿ ತಪಾಸಣೆ ನಡೆಸುತ್ತಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿಗೂ ಮಾಹಿತಿ ನೀಡಲಾಗಿದೆ ಎಂದರು.
ಗಲಾಟೆ ಸೃಷ್ಟಿಸುವ ಕೈದಿಗಳ ಸ್ಥಳಾಂತರ: ಜೈಲಿನಲ್ಲಿ ಗಲಾಟೆ ಅಥವಾ ಅಶಿಸ್ತಿನ ಚಟುವಟಿಕೆಗಳಿಗೆ ಕಾರಣವಾಗುವ ಕೆಲವು ಕೈದಿಗಳನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಮಂಜೇಶ್ ಕೊಲೆ ಪ್ರಕರಣದ ಆರೋಪಿಗಳು ಸೇರಿದಂತೆ ವಿವಿಧ ಪ್ರಕರಣಗಳ ಕೈದಿಗಳು ಇಲ್ಲಿದ್ದಾರೆ. ಕೊಕಾ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿರುವ ಕೆಲವರನ್ನೂ ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದರು.
ಒಂದೇ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಒಂದೇ ಕಾರಾಗೃಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರಿಸುವ ಬದಲು, ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸುವ ಕುರಿತು ಎಸ್ಪಿ ಅವರೊಂದಿಗೆ ಚರ್ಚಿಸಲಾಗಿದೆ. ಈ ಸಂಬಂಧ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರೊಂದಿಗೂ ಸಮನ್ವಯ ಸಾಧಿಸುವಂತೆ ತಿಳಿಸಲಾಗಿದೆ ಎಂದರು.
ಜೈಲು ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ಶಿಸ್ತುಬದ್ಧವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರಿಶೀಲನೆ ವೇಳೆ ಕಂಡುಬಂದ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ವೇಳೆ ಎಸ್ಪಿ ಶುಭನ್ವಿತಾ, ಎಎಸ್ಪಿ ಶ್ರೀನಿಧಿ, ಜೈಲು ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.
ಮೊಬೈಲ್ ಅಕ್ರಮ ಬಳಕೆಗೆ ಕಡಿವಾಣ
ಜೈಲುಗಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ಅಕ್ರಮವಾಗಿ ಬಳಸುವ ಮೊಬೈಲ್ಗಳನ್ನು ನಿರಂತರವಾಗಿ ವಶಪಡಿಸಿಕೊಳ್ಳಲಾಗುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೊಸದಾಗಿ ಜೈಲಿನೊಳಗೆ ಮೊಬೈಲ್ಗಳು ಪ್ರವೇಶಿಸುವ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.
ಹಾಸನ ಜಿಲ್ಲಾ ಕಾರಾಗೃಹದಲ್ಲಿ ಹೊರಗಿನಿಂದ ಮೊಬೈಲ್ಗಳನ್ನು ಒಳಗೆ ಎಸೆಯುತ್ತಿದ್ದ ಪ್ರಕರಣಗಳಿಗೂ ಕಡಿವಾಣ ಹಾಕಲಾಗಿದೆ. ಉದ್ಯಾನ ಹಾಗೂ ಗಾರ್ಡನಿಂಗ್ ಪ್ರದೇಶದ ಕಡೆಯಿಂದ ಮೊಬೈಲ್ಗಳನ್ನು ಎಸೆಯುತ್ತಿದ್ದುದನ್ನು ನಿಯಂತ್ರಿಸಲಾಗಿದೆ ಎಂದರು.
ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ಇತರ ಕಾರಾಗೃಹಗಳಲ್ಲಿಯೂ ಅಕ್ರಮ ಮೊಬೈಲ್ ಬಳಕೆಯನ್ನು ನಿಯಂತ್ರಿಸುವ ಕ್ರಮ ಕೈಗೊಳ್ಳಲಾಗಿದೆ. ಜೈಲಿನಲ್ಲಿದ್ದ ಹಳೆಯ ಮೊಬೈಲ್ಗಳನ್ನು ಕೈದಿಗಳು ಬಳಸುತ್ತಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
48 ಕಡೆಗಳಲ್ಲಿ ಪ್ರಿಸನ್ ಕಾಲ್ ವ್ಯವಸ್ಥೆ
ಕೈದಿಗಳು ತಮ್ಮ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರೊಂದಿಗೆ ಕಾನೂನುಬದ್ಧವಾಗಿ ಸಂಪರ್ಕದಲ್ಲಿರಲು ಪ್ರಿಸನ್ ಕಾಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಸನ ಜಿಲ್ಲಾ ಕಾರಾಗೃಹ ಸೇರಿದಂತೆ ರಾಜ್ಯದ 48 ಕಡೆಗಳಲ್ಲಿ ಪ್ರಿಸನ್ ಕಾಲ್ ವ್ಯವಸ್ಥೆಗಳನ್ನು ಒದಗಿಸಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದರು.
ಕೈದಿಗಳಿಗೆ ಕುಟುಂಬದವರೊಂದಿಗೆ ಮಾತನಾಡಲು ಕಾನೂನುಬದ್ಧ ಅವಕಾಶ ಕಲ್ಪಿಸಿದ್ದು, ಅಕ್ರಮ ಮೊಬೈಲ್ ಬಳಕೆ ನಿಯಂತ್ರಿಸಲು ಸಹಕಾರಿಯಾಗಿದೆ. ಆದರೆ ಈ ವ್ಯವಸ್ಥೆಯನ್ನು ಬಳಸಿಕೊಂಡು ಯಾವುದೇ ಅಕ್ರಮ ಚಟುವಟಿಕೆ ನಡೆಸದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ ಎಂದರು.