
ಅಮರ್ಜಾ ಅಣೆಕಟ್ಟೆಗೆ ಹರಿದು ಬಂದ ‘ಭೀಮೆ’: 19 ದಿನಗಳ ಧರಣಿ ಸತ್ಯಾಗ್ರಹ ಅಂತ್ಯ
ಆಳಂದ/ಅಫಜಲಪುರ: ಅಫಜಲಪುರ ತಾಲ್ಲೂಕಿನ ಬಡದಾಳ ಗ್ರಾಮದ ಹತ್ತಿರ ಸೂರತ್ –ಚೆನ್ನೈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಎನ್‌ಎಚ್‌ಎಐನವರು ಆಳಂದ ತಾಲ್ಲೂಕಿನ ಅಮರ್ಜಾ ಡ್ಯಾಮಿಗೆ ಹೋಗುವ ಪೈಪ್‌ಲೈನ್ ಹಾಳು ಮಾಡಿದ್ದನ್ನು ದುರಸ್ತಿ ಮಾಡಬೇಕೆಂದು ಆಗ್ರಹಿಸಿ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲರ ನೇತೃತ್ವದಲ್ಲಿ 19 ದಿನಗಳಿಂದ ನಿರಂತರ ನಡೆದ ಧರಣಿ ಸತ್ಯಾಗ್ರಹ ಸೋಮವಾರ ಮುಕ್ತಾಯವಾಯಿತು.
ಪೈಪ್‌ಲೈನ್ ಅನ್ನು ಕಡಿತ ಗೊಳಿಸಿದ್ದರಿಂದ ಡ್ಯಾಮಿಗೆ ನೀರು ತುಂಬುವ ಕಾಮಗಾರಿಗೆ ಅಡ್ಡಿಯಾಗಿತ್ತು. ತಕ್ಷಣ ಪೈಪ್ ಲೈನ್ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಆರ್.ಕೆ.ಪಾಟೀಲ ಅವರು ಕಳೆದ ಆ.27ರಿಂದ ಪಾದಯಾತ್ರೆ ಮೂಲಕ ತೆರಳಿ ಬಡದಾಳ ಸಮೀಪದ ಹೆದ್ದಾರಿ ಮೇಲೆ ಧರಣಿ ಆರಂಭಿಸಿದರು.
ಧರಣಿಗೆ ಮಣಿದ ಎನ್‌ಎಚ್‌ಎಐನವರು ಪೈಪ್‌ಲೈನ್ ದುರಸ್ತಿ ಮಾಡಿದರು. ಸೋಮವಾರ ಮಧ್ಯಾಹ್ನ 1 ಗಂಟೆಗೆ ಆಳಂದದ ಅಮರ್ಜಾ ಅಣೆಕಟ್ಟೆಯ ಜಾಕ್‌ವೆಲ್‌ಗೆ 43 ಕಿ.ಮೀ ದೂರದ ಪೈಪ್‌ಲೈನ್ ಮೂಲಕ ಭೀಮಾ ನದಿಯ ನೀರು ತುಂಬಿ ಹರಿಯುತ್ತಲೇ ವಿಜಯೋತ್ಸವದ ಸಂಭ್ರಮ ಮನೆ ಮಾಡಿತು.
ನೀರಿನ ವಿಚಾರವಾಗಿ 19 ದಿನದಿಂದಲೂ ಪಟ್ಟು ಹಿಡಿದು ಕುಳಿತಿದ್ದ ಆರ್.ಕೆ.ಪಾಟೀಲರು ಧರಣಿ ಪೂರ್ಣಗೊಳಿಸಿ ಆಗಮಿಸುವ ಮಾರ್ಗದಲ್ಲಿ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ದೊರೆಯಿತು. ಹಡಲಗಿ, ಯಳಸಂಗಿ, ಮಾಡಿಯಾಳ, ದೇವಂತಗಿ, ಭೂಸನೂರು ಮಾರ್ಗವಾಗಿ ಅಮರ್ಜಾ ಅಣೆಕಟ್ಟೆಗೆ ಸಂಜೆ ಹೋರಾಟಗಾರರು ಆಗಮಿಸಿದಾಗ ಸಂಭ್ರಮ ಮನೆ ಮಾಡಿತು.
ಹರಿದು ಬಂದ ನೀರಿಗೆ ಆರ್.ಕೆ.ಪಾಟೀಲ ಅವರು ವಿಶೇಷ ಬಾಗಿನ ಸಮರ್ಪಿಸಿ ಪೂಜೆ ಸಲ್ಲಿಸಿದರು. ಭೂಸನೂರಿನ ವೀರಶಂಭುಲಿಂಗ ಸ್ವಾಮೀಜಿ ಹಾಗೂ ಶಾಸಕ ಬಿ.ಆರ್.ಪಾಟೀಲ, ಅಫಜಲಪುರ ಶಾಸಕ ಎಂ.ವೈ.ಪಾಟೀಲ, ಮೀನಾಕ್ಷಿದೇವಿ ಪಾಟೀಲ, ಸಿದ್ದರಾಮ ಪ್ಯಾಟಿ, ಗುರುಶಾಂತ ಪಾಟೀಲ, ಗುರುಶರಣ ಪಾಟೀಲ, ಶರಣಬಸಪ್ಪ ಪಾಟೀಲ, ಮಜರ್ ಹುಸೇನ್, ಮೋಹನಗೌಡ ಪಾಟೀಲ, ರಾಜಶೇಖರ ಪಾಟೀಲ ಚಿತಲಿ, ಅಶೋಕ ಸಾವಳೇಶ್ವರ, ಬಾಬು ಗೊಬ್ಬರು, ಸಿದ್ದರಾಮ ಪಾಟೀಲ, ವಿಶ್ವನಾಥ ಸರಸಂಬಿ, ಫಿರ್ದೋಶಿ ಅನ್ಸಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ಮೊದಲು ತಹಶೀಲ್ದಾರ್ ಅಣ್ಣಾರಾವ ಪಾಟೀಲ ನೇತೃತ್ವದಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಧರಣಿ ಸ್ಥಳಕ್ಕೆ ತೆರಳಿ ಹೋರಾಟಗಾರರಿಗೆ ಅಮರ್ಜಾ ಅಣೆಕಟ್ಟೆಯಲ್ಲಿ ಹರಿದು ಬಂದ ನದಿಯ ನೀರು ತುಂಬಿದ ಕೊಡ ಕೈಗಿತ್ತು ಪ್ರತಿಭಟನೆ ಅಂತ್ಯಗೊಳಿಸಲು ಕೋರಿದರು. ಹೋರಾಟದ ನೇತೃತ್ವ ವಹಿಸಿದ್ದ ಆರ್.ಕೆ.ಪಾಟೀಲ ಮತ್ತು ಅವರ ಸಂಗಡಿಗರನ್ನು ಸಿಹಿ ಹಂಚಿ, ಶಾಲು ಹೋದಿಸಿ ರೈತರೂ ಸಂತಸ ಹಂಚಿಕೊಂಡರು.
ಧರಣಿಗೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿತ್ತು. ಖುದ್ದು ಜಿಲ್ಲಾಧಿಕಾರಿ ಎರಡು ಬಾರಿ ಸ್ಥಳಕ್ಕೆ ಆಗಮಿಸಿ ಪೈಪ್‌ಲೈನ್ ಜೋಡಣೆ ಕಾಮಗಾರಿ ತೀವ್ರಗೊಳಿಸಿದರು.
‘ಡ್ಯಾಮ್ ತುಂಬುವುದು ಅನಿವಾರ್ಯ’
ಅಫಜಲಪುರ: ‘ನಮ್ಮ ತಾಲ್ಲೂಕಿಗೆ ಯಾವುದೇ ನೀರಿನ ಮೂಲ ಇಲ್ಲದಿರುವುದರಿಂದ ನಮಗೆ ಡ್ಯಾಮ್ ತುಂಬುವುದು ಅನಿವಾರ್ಯವಾಗಿತ್ತು. ಪೈಪ್‌ಲೈನ್ ಮುಖಾಂತರ ಅಫಜಲಪುರ ತಾಲ್ಲೂಕಿನ 10 ಮತ್ತು ಆಳಂದ ತಾಲ್ಲೂಕಿನ 3 ಕೆರೆ ಸೇರಿ ಅಮರ್ಜಾ ಡ್ಯಾಮಿಗೆ ನೀರು ಹರಿಬೇಕಾಗಿತ್ತು. ಅದಕ್ಕಾಗಿ 19 ದಿನ ನಿರಂತರ ಧರಣಿ ನಡೆಸಿದ್ದೇವೆ. ನಿಗದಿತ ಅವಧಿಯೊಳಗಾಗಿ ಪೈಪ್‌ಲೈನ್ ದುರಸ್ತಿ ಮಾಡಿದ್ದರಿಂದ ಇವತ್ತು ಡ್ಯಾಮಿಗೆ ನೀರು ಹರಿಯುತ್ತಿದೆ’ ಎಂದು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ ತಿಳಿಸಿದರು.
‘ಅಫಜಲಪುರ ಹಾಗೂ ಆಳಂದ ತಾಲ್ಲೂಕಿನ ಒಟ್ಟು 13 ಕೆರೆ ಜತೆಗೆ ಅಮರ್ಜಾ ಡ್ಯಾಮಿಗೆ ನೀರು ತುಂಬುವ ಕಾರ್ಯಕ್ರಮ ಇದಾಗಿದ್ದು, ಸುಮಾರು ₹ 318 ಕೋಟಿ ಖರ್ಚು ಮಾಡಲಾಗಿದೆ. ಮುಂದೆ ಭೀಮಾ ಬಚಾವತ್ ಪ್ರಕಾರವಾಗಿ ನಮ್ಮ ಹಕ್ಕಿನ 15 ಟಿಎಂಸಿ ಅಡಿ ನೀರನ್ನು ಪಡೆಯುವುದಕ್ಕಾಗಿ ಶಾಸಕರಾದ ಎಂ.ವೈ.ಪಾಟೀಲ ಹಾಗೂ ಬಿ.ಆರ್.ಪಾಟೀಲ ಪ್ರಯತ್ನ ಮಾಡಬೇಕು’ ಎಂದು ಹೆಳಿದರು.
ದೇವಸ್ಥಾನಗಳಿಗೆ ನೀರಿನ ಅಭಿಷೇಕ
ಅಮರ್ಜಾ ಅಣೆಕಟ್ಟೆಗೆ ಹರಿದು ಬಂದ ನೀರು ಕೊಡಗಳಲ್ಲಿ ತುಂಬಿಕೊಂಡು ಆಳಂದ ಪಟ್ಟಣದ ಹನುಮಾನ ಮಂದಿರ, ಶರಣಮಂಟಪ, ಏಕಾಂತ ರಾಮಯ್ಯ, ಭವಾನಿ ಮಂದಿರ, ಲಾಡ್ಲೆ ಮಶಾಕ್ ದರ್ಗಾ , ಮಾಲ್ಗಣೇಶ್ವರ ಮಂದಿರ, ಸಿದ್ಧಾರೂಢ ಮಂಟಪ, ಮಹಾದೇವ ಮಂದಿರ, ಜೈನ್ ಬಸದಿ, ಕಾಳಿಕಾದೇವಿ ಮಂದಿರ, ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಸಂಗೋಳ್ಳಿ ರಾಯಣ್ಣನ ಪುತ್ಥಳಿಗೆ ಆರ್.ಕೆ. ಪಾಟೀಲ ನೇತೃತ್ವದಲ್ಲಿ ಜಲಾಭಿಷೇಕ ಮಾಡಿ ಮಾಲಾರ್ಪಣೆ ಮಾಡಲಾಯಿತು.